ಯಲ್ಲಾಪುರ: ಕ್ಷೇತ್ರದ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಮೂಲಭೂತ ಸೌಕರ್ಯಗಳ ದುರಸ್ತಿಗಾಗಿ ಎನ್.ಡಿ.ಆರ್.ಎಫ್ (NDRF) ಮತ್ತು ಎಸ್.ಡಿ.ಆರ್.ಎಫ್ (SDRF) ಯೋಜನೆಯಡಿ ಒಟ್ಟು 17 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ.
ಶಾಸಕ ಶಿವರಾಮ ಹೆಬ್ಬಾರ್ ಅವರು ಸರ್ಕಾರದ ಮಟ್ಟದಲ್ಲಿ ನಡೆಸಿದ ಸತತ ಪ್ರಯತ್ನದ ಹಿನ್ನೆಲೆಯಲ್ಲಿ ಈ ಮೊತ್ತ ಬಿಡುಗಡೆಯಾಗಿದೆ. ಕಳೆದ ಮಳೆಗಾಲದಲ್ಲಿ ಯಲ್ಲಾಪುರ ಹಾಗೂ ಬನವಾಸಿ ಭಾಗದಲ್ಲಿ ಸುರಿದ ಭಾರಿ ಮಳೆಗೆ ರಸ್ತೆಗಳು, ಸೇತುವೆಗಳು ಮತ್ತು ಕುಡಿಯುವ ನೀರಿನ ಪೈಪ್ಲೈನ್ಗಳು ಸೇರಿದಂತೆ ಹಲವು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿತ್ತು.

ಈ ಕುರಿತು ಶಾಸಕರು ಸಂಬಂಧಪಟ್ಟ ಇಲಾಖೆಗಳಿಂದ ಸಮಗ್ರ ವರದಿ ಪಡೆದು, ತುರ್ತು ಅನುದಾನದ ಅಗತ್ಯತೆಯ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಪ್ರಸ್ತುತ ಬಿಡುಗಡೆಯಾಗಿರುವ ಈ ಅನುದಾನವನ್ನು ಮಳೆಯಿಂದ ಹಾನಿಗೊಳಗಾದ ರಸ್ತೆಗಳ ಪುನರ್ನಿರ್ಮಾಣ ಹಾಗೂ ಗ್ರಾಮೀಣ ಭಾಗದ ಸಂಪರ್ಕ ಸೇತುವೆಗಳ ದುರಸ್ತಿ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುವುದು.
ಈ ಸುದ್ದಿ ಓದಿದ್ದೀರಾ ? ಮುಂಡಗೋಡ | ತಾಲೂಕಿನಾದ್ಯಂತ ಸಕ್ರಿಯಗೊಂಡ ಇಟ್ಟಿಗೆ ಭಟ್ಟಿಗಳು: ಅರಣ್ಯ–ಪರಿಸರದ ಮೇಲೆ ಹೆಚ್ಚಿದ ಒತ್ತಡ
ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗದಂತೆ ಎಚ್ಚರಿಕೆ ವಹಿಸಿರುವ ಶಾಸಕ ಶಿವರಾಮ ಹೆಬ್ಬಾರ್, ಮಂಜೂರಾದ ಅನುದಾನದಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಅನುದಾನ ಬಿಡುಗಡೆಯಿಂದ ಮಳೆ ಹಾನಿ ಪ್ರದೇಶಗಳಲ್ಲಿ ಬಾಕಿ ಉಳಿದಿದ್ದ ಪುನಶ್ಚೇತನ ಕಾರ್ಯಗಳಿಗೆ ವೇಗ ಸಿಗಲಿದ್ದು, ಸಾರ್ವಜನಿಕರ ಸಂಚಾರಕ್ಕೆ ಇದ್ದ ಅಡಚಣೆಗಳು ನಿವಾರಣೆಯಾಗಲಿವೆ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಶಾಸಕರು ಕೈಗೊಂಡ ಈ ಕ್ರಮವು ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿದೆ.





