ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಮುಂಭಾಗದಲ್ಲಿ ಕೊರಗ ಸಮುದಾಯದ ಯುವಜನರಿಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ನೀಡುವಂತೆ ಆಗ್ರಹಿಸಿ ಕಳೆದ ಆರು ದಿನಗಳಿಂದ ನಡೆಯುತ್ತಿರುವ ನಿರಂತರ ಅಹೋರಾತ್ರಿ ಧರಣಿ–ಸತ್ಯಾಗ್ರಹ ಸ್ಥಳಕ್ಕೆ ಉಡುಪಿ ಶಾಸಕ ಯಶ್‌ಪಾಲ್ ಆನಂದ್ ಸುವರ್ಣ ಅವರು ಭೇಟಿ ನೀಡಿ, ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಇದನ್ನು ಓದಿ : ಕೊರಗ ಸಮುದಾಯಕ್ಕೆ ಸರ್ಕಾರಿ ಉದ್ಯೋಗ : ಬರೀ ಕನಸು ಮಾತ್ರ ! https://eedina.com/karnataka/udupi-koraga-community-protest-at-dc-office/2025-12-19/
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಯಶ್‌ಪಾಲ್ ಸುವರ್ಣ, ಜಿಲ್ಲೆಯ ಮೂಲ ನಿವಾಸಿಗಳಾಗಿ ಗುರುತಿಸಿಕೊಂಡಿರುವ ಕೊರಗ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ಸಮಾಜದ ಮುಖ್ಯವಾಹಿನಿಗೆ ಬರಲು ಯುವಜನತೆ ಶಿಕ್ಷಣದ ಮೂಲಕ ಗಮನಾರ್ಹ ಸಾಧನೆ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು. ಇಂತಹ ಪ್ರತಿಭಾವಂತ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ನೀಡುವ ಕುರಿತು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಒತ್ತಾಯಿಸಿದರು. ಈ ಸಂಬಂಧ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಇಲಾಖಾ ಸಚಿವರಿಗೆ ಪತ್ರ ಬರೆದು ಮನವಿ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ–ಕೇರಳ ಅಧ್ಯಕ್ಷ ಸುಶೀಲ ನಾಡ, ಮುಖಂಡರಾದ ಶೇಖರ ಕೆಂಜೂರು, ಕುಮಾರ ಕೆಂಜೂರು, ಪುತ್ರನ್ ಹೆಬ್ರಿ, ಪುನಿತ್ ಕಾರ್ಕಳ, ರೇಖಾ ಆತ್ರಾಡಿ, ತ್ರಿವೇಣಿ ಕಟಪಾಡಿ, ಪ್ರಜ್ಞಾ ಶಂಕರ ನಾರಾಯಣ, ಶೀನಾ ಬೆಳ್ಮಣ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.





