ಯಲ್ಲಾಪುರ: ತಾಲೂಕಿನ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸರಬರಾಜು ಮತ್ತು ಕೊಳವೆ ಬಾವಿಗಳ ದುರಸ್ತಿ ಹೆಸರಿನಲ್ಲಿ ಸುಮಾರು 35 ಲಕ್ಷ ರೂಪಾಯಿಗಳ ಬೃಹತ್ ಅವ್ಯವಹಾರ ನಡೆದಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಗಜಸೇನೆ) ತಾಲೂಕು ಘಟಕದ ಅಧ್ಯಕ್ಷರಾದ ಶಮಶುದ್ಧೀನ್ ಮಾರಕರ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಧಾರವಾಡದ ಸಂಚಾರಿ ಪೀಠದ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿರುವ ಅವರು, ಪಟ್ಟಣದಲ್ಲಿ ಹಳೆಯ ಪೈಪ್ಲೈನ್ ಹಾಗೂ ಕೊಳವೆ ಬಾವಿಗಳ ದುರಸ್ತಿ ನೆಪದಲ್ಲಿ ಯಾವುದೇ ಕಾಮಗಾರಿ ನಡೆಸದೆ ನಕಲಿ ಬಿಲ್ ಸೃಷ್ಟಿಸಿ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ದೂರಿದ್ದಾರೆ.
ಈ ಹಗರಣದಲ್ಲಿ ಪಟ್ಟಣ ಪಂಚಾಯತ್ನ ಮುಖ್ಯಾಧಿಕಾರಿಗಳು ಹಾಗೂ ಸಹಾಯಕ ಇಂಜಿನಿಯರ್ ಅವರು ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ . ಶಮಶುದ್ದೀನ ಮಾರಕರ ಅವರು ಈ ಹಗರಣದ ಬಗ್ಗೆ ಕಳೆದ ಜುಲೈ 28ರಂದೇ ಜಿಲ್ಲಾಧಿಕಾರಿಗಳಿಗೆ ಹಾಗೂ ಶಿರಸಿ ಸಹಾಯಕ ಆಯುಕ್ತರಿಗೆ ಇ-ಮೇಲ್ ಮೂಲಕ ದೂರು ನೀಡಿದ್ದರು.
ಆದರೆ, ಈ ದೂರಿನನ್ವಯ ತನಿಖೆಗೆ ಬಂದಿದ್ದ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಸರಿಯಾಗಿ ಸ್ಥಳ ಪರಿಶೀಲನೆ ನಡೆಸದೆ, ಕೇವಲ ದಾಖಲೆಗಳನ್ನು ಸರಿಹೊಂದಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿ ‘ಹಿಂಬರಹ’ ನೀಡಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಹಳೆಯ ಪೈಪ್ಲೈನ್ ಹಾಗೂ ಕೆಟ್ಟುಹೋದ ಕೊಳವೆ ಬಾವಿಗಳ ದುರಸ್ತಿ ನೆಪದಲ್ಲಿ ಯಾವುದೇ ಕಾಮಗಾರಿ ನಡೆಸದೆ ನಕಲಿ ಬಿಲ್ ಸೃಷ್ಟಿಸಿ ಸರ್ಕಾರದ ಹಣವನ್ನು ಲೂಟಿ ಮಾಡಲಾಗಿದೆ. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಕಡ್ಡಾಯವಾಗಿ ತೆಗೆಯಬೇಕಾದ ಜಿ.ಪಿ.ಎಸ್ ಫೋಟೋಗಳನ್ನು ಸಹ ಅಧಿಕಾರಿಗಳು ತೆಗೆದಿಲ್ಲ. ಈ ಭ್ರಷ್ಟಾಚಾರದಲ್ಲಿ ಪಟ್ಟಣ ಪಂಚಾಯತ್ನ ಮುಖ್ಯಾಧಿಕಾರಿಗಳು ಹಾಗೂ ಸಹಾಯಕ ಇಂಜಿನಿಯರ್ ಅವರು ಗುತ್ತಿಗೆದಾರರೊಂದಿಗೆ ನೇರವಾಗಿ ಶಾಮೀಲಾಗಿದ್ದಾರೆ ಎಂದು ಮಾರಕರ ಅವರು ದೂರು ಅರ್ಜಿಯಲ್ಲಿ ತಿಳಿಸಿದ್ದಾರೆ.
ದೂರುದಾರರಿಗೆ ಪ್ರಾಣ ಬೆದರಿಕೆ: ಅಕ್ರಮದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಸಂಬಂಧಪಟ್ಟ ಗುತ್ತಿಗೆದಾರರು ತಮ್ಮ ಆಪ್ತರ ಮೂಲಕ ತಮಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಸುಳ್ಳು ಕೇಸ್ ದಾಖಲಿಸುವ ಬೆದರಿಕೆ ಒಡ್ಡುತ್ತಿದ್ದಾರೆ. ಇದರಿಂದ ತಮಗೆ ಮಾನಸಿಕವಾಗಿ ನೋವುಂಟಾಗಿದೆ ಎಂದು ಅವರು ನ್ಯಾಯಾಧೀಶರಿಗೆ ಸಲ್ಲಿಸಿದ ಮನವಿಯಲ್ಲಿ ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾಂಡೇಲಿ | ಅಜಿತ್ ನಾಯ್ಕ್ ಹತ್ಯೆ ಕೇಸ್: 7 ವರ್ಷಗಳ ಸುದೀರ್ಘ ವಿಚಾರಣೆ ಅಂತ್ಯ, ತೀರ್ಪಿನತ್ತ ಎಲ್ಲರ ಚಿತ್ತ!
35 ಲಕ್ಷ ರೂಪಾಯಿಗಳ ಈ ಹಗರಣದ ಬಗ್ಗೆ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಯಾಗಬೇಕು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿ ಪಡೆಯದೆ ಅಕ್ರಮವಾಗಿ ಕೊಳವೆ ಬಾವಿ ಕೊರೆಯುತ್ತಿರುವ ವಾಹನಗಳನ್ನು ತಕ್ಷಣ ಜಪ್ತಿ ಮಾಡಬೇಕು, ಸರ್ಕಾರಿ ಬೊಕ್ಕಸಕ್ಕೆ ಮೋಸ ಮಾಡಿದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಎಂದು ಮಾರಕರ ಅವರು ಮನವಿ ಮಾಡಿದ್ದಾರೆ
ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿರುವ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ..





