ಪ್ರಸಿದ್ಧ ಪ್ರವಾಸಿ ತಾಣವಾದ ಮಾಗೋಡಿನ ಜೇನುಕಲ್ಲು ಗುಡ್ಡದ ಪ್ರಪಾತಕ್ಕೆ ಜಿಗಿದು ಧಾರವಾಡ ಮೂಲದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಸಂಭವಿಸಿದೆ.
ಧಾರವಾಡದ ಹೊಸ ಯಲ್ಲಾಪುರ ಕಂಪ್ಲಿ ಬಸವೇಶ್ವರ ನಗರದ ನಿವಾಸಿ ಶ್ರೀನಿಧಿ ಕೃಷ್ಣಾ ಕಡಕೋಳ (23) ಮೃತಪಟ್ಟ ದುರ್ದೈವಿ. ಕಳೆದ ಮಾರ್ಚ್ 4ರಂದು ಮನೆಯಿಂದ ಸ್ಕೂಟಿಯಲ್ಲಿ ಹೊರಟಿದ್ದ ಶ್ರೀನಿಧಿ, ಗೋಕರ್ಣಕ್ಕೆ ಹೋಗಿ ಬರುವುದಾಗಿ ತಿಳಿಸಿದ್ದ ಎನ್ನಲಾಗಿದೆ.
ಆದರೆ, ಮಾರ್ಚ್ 7ರಂದು ಯಲ್ಲಾಪುರದ ಮಾಗೋಡು ಸಮೀಪದ ಜೇನುಕಲ್ಲು ಗುಡ್ಡದ ಬಳಿ ಈತನ ಮೃತದೇಹ ಪತ್ತೆಯಾಗಿದೆ. ಯುವಕನು ಗುಡ್ಡದ ಮೇಲಿನಿಂದ ಪ್ರಪಾತಕ್ಕೆ ಜಿಗಿದು ಪ್ರಾಣ ಕಳೆದುಕೊಂಡಿರಬಹುದು ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ಕಾಂಗ್ರೆಸ್‌ನಲ್ಲಿ ‘ಪತ್ರ ಸಮರ’: ಸಚಿವ ಮಂಕಾಳ ವೈದ್ಯಗೆ ಶಾಸಕ ಸತೀಶ್ ಸೈಲ್ ತಿರುಗೇಟು!
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಯಲ್ಲಾಪುರ ಪೊಲೀಸರು ಹಾಗೂ ಸ್ಥಳೀಯರು, ಹರಸಾಹಸ ಪಟ್ಟು ಪ್ರಪಾತದಿಂದ ಮೃತದೇಹವನ್ನು ಹೊರತೆಗೆದಿದ್ದಾರೆ.
ಮೃತ ಶ್ರೀನಿಧಿಯ ತಂದೆ, ಧಾರವಾಡದ ಖಾಸಗಿ ಬ್ಯಾಂಕ್ ವ್ಯವಸ್ಥಾಪಕರಾದ ಕೃಷ್ಣ ಶ್ರೀನಿವಾಸ ಕಡಕೋಳ ಅವರು ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.





