ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಇತ್ತೀಚೆಗೆ ಭೀಕರವಾಗಿ ಹತ್ಯೆಗೀಡಾದ ಮಹಿಳೆಯ ಮನೆಗೆ ಭೀಮಘರ್ಜನೆ ಸಂಘಟನೆಯ ಪದಾಧಿಕಾರಿಗಳು ಇಂದು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಶೋಕತಪ್ತ ಕುಟುಂಬಕ್ಕೆ ಧೈರ್ಯ ತುಂಬಿದ ಸಂಘಟನೆಯು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ನೀಡುವ ಮೂಲಕ ಗೌರವ ಸಲ್ಲಿಸಿತು. ಇದೇ ಸಂದರ್ಭದಲ್ಲಿ ಮೃತ ಮಹಿಳೆಯ ಮಗುವಿನ ಭವಿಷ್ಯದ ದೃಷ್ಟಿಯಿಂದ ಸಂಘಟನೆಯ ವತಿಯಿಂದ ಶಾಲಾ ಬ್ಯಾಗ್, ಪುಸ್ತಕ ಹಾಗೂ ಇತರೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಕುಟುಂಬದ ಆರ್ಥಿಕ ಪರಿಸ್ಥಿತಿ ಮತ್ತು ಮಗುವಿನ ಅನಾಥ ಸ್ಥಿತಿಯನ್ನು ಕಂಡು ಸಂಘಟನೆಯ ಮುಖಂಡರು ಮರುಕ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಭೀಮಘರ್ಜನೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಅರ್ಜುನ್ ಮಿಂಟಿ ಅವರು, “ನೊಂದ ಈ ಕುಟುಂಬಕ್ಕೆ ಸರ್ಕಾರ ತಕ್ಷಣವೇ ಸ್ಪಂದಿಸಬೇಕು.
ವಸತಿ ರಹಿತವಾಗಿರುವ ಈ ಕುಟುಂಬಕ್ಕೆ ಮನೆ, ಎರಡು ಎಕರೆ ಕೃಷಿ ಜಮೀನು ಮಂಜೂರು ಮಾಡಬೇಕು. ಅಲ್ಲದೆ, ತಾಯಿಯನ್ನು ಕಳೆದುಕೊಂಡ ಮಗುವಿನ ಸಂಪೂರ್ಣ ಶಿಕ್ಷಣದ ವೆಚ್ಚವನ್ನು ಸರ್ಕಾರವೇ ಭರಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ಹೊಸ ನ್ಯಾಯಬೆಲೆ ಅಂಗಡಿಗಳಿಗೆ ಪ.ಜಾತಿ–ಪಂಗಡದವರಿಗೆ ಮೊದಲ ಆದ್ಯತೆ: ಎಡಿಸಿ ಸಾಜಿದ್ ಮುಲ್ಲಾ
ಶಾಸಕ ಶಿವರಾಂ ಹೆಬ್ಬಾರ್ ಅವರು ಈ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಿ, ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ನೊಂದ ಕುಟುಂಬಕ್ಕೆ ಸೂಕ್ತ ನ್ಯಾಯ ಮತ್ತು ಪರಿಹಾರ ಕೊಡಿಸಬೇಕೆಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಈ ಭೇಟಿಯ ಸಂದರ್ಭದಲ್ಲಿ ಭೀಮಘರ್ಜನೆ ಸಂಘಟನೆಯ ತಾಲೂಕು ಅಧ್ಯಕ್ಷ ಪುನೀತ್ ಮರಾಠೇ, ಉಪಾಧ್ಯಕ್ಷ ರಾಜೇಶ್ ಕೆ., ಪ್ರಮುಖರಾದ ನವೀನ್ ಕಾನಡೆ, ಅಕ್ಷಯ್, ಹರ್ಷ, ಆದಿತ್ಯ, ಪ್ರಶಾಂತ್, ಅಜಿತ್ ಮಿಂಟಿ, ಪರಶುರಾಮ್ ಜೆ. ಸೇರಿದಂತೆ ಸಂಘಟನೆಯ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.





