ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿ ಶನಿವಾರ ರಂದು ನಡೆದ ರಂಜೀತಾ ಬನಸೋಡೆ ಅವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸರ್ಕಾರ ಹಾಗೂ ವಿವಿಧ ಸಂಘಟನೆಗಳು ಸಂತ್ರಸ್ತ ಕುಟುಂಬದ ನೆರವಿಗೆ ಧಾವಿಸಿವೆ.
ಮಾನವೀಯತೆಗೆ ಮಸಿ ಬಳಿದ ಘಟನೆ: ಶಾಸಕ ಶಿವರಾಮ ಹೆಬ್ಬಾರ್ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮಂಜೂರಾದ ಒಟ್ಟು 8.25 ಲಕ್ಷ ರೂಪಾಯಿ ಪರಿಹಾರ ಮೊತ್ತದ ಚೆಕ್ ಹಾಗೂ ಆದೇಶ ಪತ್ರವನ್ನು ಮೃತರ ಕುಟುಂಬಕ್ಕೆ ನೀಡಿದ ಶಾಸಕರು, ರಂಜೀತಾ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
“ಈ ಅಮಾನವೀಯ ಹತ್ಯೆ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು. ಮನುಷ್ಯತ್ವಕ್ಕೆ ಮಸಿ ಬಳಿಯುವ ಇಂತಹ ಕೃತ್ಯಗಳು ಮರುಕಳಿಸಬಾರದು. ಸಂಕಷ್ಟದ ಸಮಯದಲ್ಲಿ ಸರ್ಕಾರ ನಿಮ್ಮೊಂದಿಗಿದೆ” ಎಂದು ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ದಸಂಸ ಆಗ್ರಹಕ್ಕೆ ಅಧಿಕಾರಿಗಳ ಸಕಾರಾತ್ಮಕ ಸ್ಪಂದನೆ: ಇದೇ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ) ಜಿಲ್ಲಾಧ್ಯಕ್ಷ ಬಸವರಾಜ್ ಸಂಗಮೇಶ್ವರ್ ನೇತೃತ್ವದ ನಿಯೋಗವು ಅಧಿಕಾರಿಗಳನ್ನು ಭೇಟಿ ಮಾಡಿ ಪ್ರಮುಖ ಬೇಡಿಕೆಗಳನ್ನು ಮಂಡಿಸಿತು.
ಮೃತ ರಂಜೀತಾ ಅವರ ತಾಯಿಗೆ ಮಾಸಿಕ ಪಿಂಚಣಿ ಸೌಲಭ್ಯ ಒದಗಿಸಬೇಕು ಹಾಗೂ ತಬ್ಬಲಿಯಾದ ಮಗನಿಗೆ ತಕ್ಷಣವೇ ಮುರಾರ್ಜಿ ದೇಸಾಯಿ ವಸತಿ ಶಾಲೆ ಅಥವಾ ಯಾವುದಾದರೂ ಸರ್ಕಾರಿ ವಸತಿ ಶಾಲೆಯಲ್ಲಿ ಪ್ರವೇಶಾತಿ ಕಲ್ಪಿಸಿ ಶಿಕ್ಷಣಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಶಿರಸಿ | ಅಸ್ಪೃಶ್ಯತೆ ಆಚರಣೆ ಆರೋಪ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಡಿವೈಎಸ್‌ಪಿಗೆ ಪತ್ರ
ಈ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು, ಮಗನ ಶಿಕ್ಷಣ ಹಾಗೂ ತಾಯಿಯ ಪಿಂಚಣಿ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಉಪವಿಭಾಗಾಧಿಕಾರಿ ಕಾವ್ಯರಾಣಿ, ತಹಶೀಲ್ದಾರ್ ಚಂದ್ರಶೇಖರ ಹೊಸಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.





