ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕಾಳಮ್ಮನಗರದಲ್ಲಿ ಯುವತಿಯೊಬ್ಬರನ್ನು ಹತ್ಯೆಗೈದ್ದ ಕೊಲೆ ಆರೋಪಿ ರಫೀಕ್ ಇಮಾಮಸಾಬ್ ಯಳ್ಳೂರ ಮೃತದೇಹ ಪತ್ತೆಯಾಗಿದೆ. ಅತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಳಮ್ಮನಗರದ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ರಂಜಿತಾ ಮಲ್ಲಪ್ಪ ಬನಸೋಡೆ ಅವರನ್ನು ಶನಿವಾರ ಚಾಕು ಇರಿದು ಕೊಲೆ ಮಾಡಲಾಗಿತ್ತು. ಕೊಲೆ ಆರೋಪಿ ರಫೀಕ್ ಪರಾರಿಯಾಗಿದ್ದರು. ಇದೀಗ, ಆತನ ಮೃತದೇಹ ಯಲ್ಲಾಪುರದ ಖಾಜಲ್ವಾಡ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ವಿಷಯ ತಿಳಿದ ತಕ್ಷಣ ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮದುವೆಯಾಗಿ ಪತಿಯಿಂದ ವಿಚ್ಛೇದನ ಪಡೆದಿದ್ದ ರಂಜಿತಾರನ್ನು ರಫೀಕ್ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ತನ್ನೊಂದಿಗೆ ವಿವಾಹವಾಗುವಂತೆ ಪೀಡಿಸುತ್ತದ್ದರು. ಆದರೆ, ಮದುವೆಗೆ ರಂಜಿತಾ ಒಪ್ಪಿರಲಿಲ್ಲ ಎಂದು ಹೇಳಲಾಗಿದೆ. ಅದೇ ಕಾರಣಕ್ಕೆ ಆಕೆಯನ್ನು ರಫೀಕ್ ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ.
ಇಂದು (ಭಾನುವಾರ) ವಿಎಚ್‌ಪಿ ಯಲ್ಲಾಪುರ ಬಂದ್ ಕರೆ ನೀಡಿತ್ತು. ಶನಿವಾಋ ಸಂಜೆ ಠಾಣೆಯ ಮುಂದೆ ಹಿಂದುತ್ವ ಸಂಘಟನೆಗಳು ಜಮಾಯಿಸಿದ್ದವು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.




