ಮೈಸೂರು ಜಿಲ್ಲೆ, ಹುಣಸೂರು ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ಬುದುವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ‘ನಾಯಕ ಸಮುದಾಯದ ಯುವಕರು ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜದ ಆಸ್ತಿಯಾಗುವ ಮೂಲಕ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರೆಯಬೇಕು’ ಎಂದು ಹೇಳಿದರು.
“ಶಿಕ್ಷಣವನ್ನು ಯಾರಿಂದಲೂ ಕದಿಯಲು, ಕಸಿದುಕೊಳ್ಳಲು ಸಾಧ್ಯವಿಲ್ಲ. ವಿಧ್ಯೆ ಸಂಪಾದಿಸಬೇಕು, ಅದನ್ನೇ ಆಸ್ತಿಯನ್ನಾಗಿಸಿ ಉನ್ನತ ಸ್ಥಾನಕ್ಕೆ ಬೆಳೆದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಿಸಿಕೊಳ್ಳಬೇಕು. ಸಮುದಾಯದ ಯುವಕರು ಜಯಂತ್ಯುತ್ಸವಕ್ಕೆ ಸೀಮಿತವಾಗದೆ ಮಹನೀಯರ ಮಾರ್ಗದರ್ಶನದ ಹಾದಿಯಲ್ಲಿ ಸಾಗಬೇಕು. ಅರ್ಥಪೂರ್ಣ ಬದುಕನ್ನು ಕಟ್ಟಿಕೊಳ್ಳಲು ಬುದ್ಧ, ಬಸವ, ಅಂಬೇಡ್ಕರರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಸಂಸದ ಜಿ. ಕುಮಾರ್ ನಾಯಕ್ ಮಾತನಾಡಿ, “ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣವು ಹೇಗೆ ಸಮಾಜಕ್ಕೆ ನೈತಿಕ ಮತ್ತು ಸಾಮಾಜಿಕ ಮೌಲ್ಯಗಳ ಮಾರ್ಗದರ್ಶನ ನೀಡಿತೋ, ಹಾಗೆಯೇ ಭಾರತದ ನಿರ್ಮಾಣಕ್ಕೆ ಸಂವಿಧಾನವು ಶ್ರೇಷ್ಠ ಗ್ರಂಥವಾಗಿ ನೆಲೆಯೂರಿದೆ. ಇದರ ಆತ್ಮ ಹಾಳು ಮಾಡುವ ಪ್ರಯತ್ನಗಳು ಸಂಘಪರಿವಾರದವರಿಂದ ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಸಂವಿಧಾನವನ್ನು ರಕ್ಷಿಸಿ, ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ”. 1992 ರಲ್ಲಿ ಇದೇ ಹುಣಸೂರಿನಲ್ಲಿ ಸಹಾಯಕ ಆಯುಕ್ತರಾಗಿ ಆಡಳಿತ ಸೇವೆ ಸಲ್ಲಿಸಿದನ್ನು ಸ್ಮರಿಸಿದರು.
ಕಾಂಗ್ರೆಸ್ ಮುಖಂಡ ವಿ. ಎಸ್. ಉಗ್ರಪ್ಪ ಮಾತನಾಡಿ,”ಸಮಸಮಾಜದ ಪರಿಕಲ್ಪನೆಯಲ್ಲಿ ರಚನೆಯಾದ ರಾಮಾಯಣ ಹಾಗೂ ಮಹಾಭಾರತ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಇಂತಹ ಗ್ರಂಥವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅಧಿಕಾರದ ಗದ್ದುಗೆ ಹಿಂದೆ ಓಡುವುದರ ಬದಲು ಅಧಿಕಾರ ತನ್ನತ್ತ ಬರುವಂತೆ ಸಂಸ್ಕಾರ ಬೆಳೆಸಿಕೊಳ್ಳಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ವನ್ಯಜೀವಿಗಳಿಗೆ ತೊಂದರೆ; ಅಂತಿಮ ಸಫಾರಿ ಕೈಬಿಡುವಂತೆ ಆದೇಶ

ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಡಿ. ಹರೀಶ್ ಗೌಡ,ಅನಿಲ್ ಚಿಕ್ಕಮಾಧು, ಪ್ರಸಾನ್ನನಂದ ಸ್ವಾಮೀಜಿ, ನಟರಾಜ ಸ್ವಾಮೀಜಿ, ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್, ವಾಗ್ಮಿ ಪ್ರಶಾಂತ್ ನಾಯಕ್, ಡಿಐಜಿ(ಅಗ್ನಿಶಾಮಕ ದಳ ) ರವಿ ಚನ್ನಣ್ಣನವರ್, ತಾಲ್ಲೂಕು ನಾಯಕ ಸಮುದಾಯದ ಅಧ್ಯಕ್ಷ ಅಣ್ಣಯ್ಯ ನಾಯಕ, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ಸೇರಿದಂತೆ ಇನ್ನಿತರರು ಇದ್ದರು.





