ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಚಾಮರಾಜನಗರದ ಜಿಲ್ಲಾ ಪಂಚಾಯತ್ ನೂತನ ಕೆಡಿಪಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ್ ಮಾತನಾಡಿ, ‘ಯುವಜನತೆ ಮತದಾನದ ಮಹತ್ವ ಅರಿಯಬೇಕು’ ಎಂದು ಹೇಳಿದರು.
“ಪ್ರಜಾಪ್ರಭುತ್ವದ ಸುಭದ್ರತೆಗಾಗಿ 1950ರಲ್ಲಿ ಭಾರತ ಚುನಾವಣಾ ಆಯೋಗ ಸ್ಥಾಪನೆಯಾಯಿತು. ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದ್ದು, ದೇಶದಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿದ್ದು, ಮತದಾನದ ಮಹತ್ವವನ್ನು ಎಲ್ಲರೂ ಅರಿಯಬೇಕು. ಈ ಹಿಂದೆ 18 ವರ್ಷ ತುಂಬಿದ ಯುವಜನರಿಗೆ ಮತದಾನದ ಮಹತ್ವದ ಅರಿವು, ಅಸಕ್ತಿ ಕಡಿಮೆ ಇತ್ತು. ಇದನ್ನು ಮನಗಂಡ ಭಾರತ ಚುನಾವಣಾ ಆಯೋಗವು ದೇಶದ ನಾಗರಿಕರು ಹಾಗೂ ವಿಶೇಷವಾಗಿ 18 ತುಂಬಿದ ಪ್ರತಿಯೊಬ್ಬರಿಗೂ ಮತದಾನ ಜಾಗೃತಿ ಮೂಡಿಸಿ ಪ್ರೇರೆಪಿಸಲು 2011ರಿಂದ ‘ರಾಷ್ಟ್ರೀಯ ಮತದಾರರ ದಿನ’ ಆಚರಿಸಲು ಅನುವು ಮಾಡಿಕೊಟ್ಟಿದೆ. ಮತದಾನ ಅಮೂಲ್ಯವಾದದ್ದು. ಉತ್ತಮ ಬೀಜ ಬಿತ್ತಿದರೆ ಉತ್ತಮ ಫಸಲು ಬರುತ್ತದೆ. ಹಾಗೆಯೇ, ಉತ್ತಮ ವ್ಯಕ್ತಿಯನ್ನು ಆರಿಸಿದರೆ ಜನಸೇವೆ ಮಾಡುವ ಉತ್ತಮ ಸರ್ಕಾರ ನಮ್ಮದಾಗಲಿದೆ” ಎಂದರು.
ಜಿಲ್ಲಾಧಿಕಾರಿ ಶ್ರೀರೂಪ ಮಾತನಾಡಿ, “ವಿಶ್ವದ ಅತಿದೊಡ್ಡ ಸಂವಿಧಾನ ಹೊಂದಿರುವ ದೇಶ ನಮ್ಮದಾಗಿದೆ. ಪ್ರಜಾಪ್ರಭುತ್ವದ ಬಲಿಷ್ಠತೆಗಾಗಿ ನಾಗರಿಕರಾದ ನಾವು ಮತದಾನದ ಪ್ರಾಮುಖ್ಯತೆ ತಿಳಿಯಬೇಕು. ಮತ ಚಲಾಯಿಸಲು ಯುವಜನರು ಮುಂದಾಗಬೇಕು. ಮತದಾನ ನಮ್ಮ ಹಕ್ಕು ಹಾಗೂ ಕರ್ತವ್ಯವಾಗಿದೆ” ಎಂದರು.

ದೀನಬಂಧು ಸಂಸ್ಥೆಯ ಕಾರ್ಯದರ್ಶಿ ಪ್ರೊ. ಜಿ.ಎಸ್. ಜಯದೇವ ಮಾತನಾಡಿ, “ಹೊಸದಾಗಿ 18 ವರ್ಷ ತುಂಬಿದ ಯುವ ಹಾಗೂ ನವ ಮತದಾರರನ್ನು ಪ್ರೇರೆಪಿಸುವುದು ರಾಷ್ಟ್ರೀಯ ಮತದಾರರ ದಿನದ ಪ್ರಮುಖ ಉದ್ದೇಶವಾಗಿದೆ. ಭಾರತ ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ಪ್ರಜಾಸತ್ಯಾತ್ಮಕ ದೇಶವಾಗಿದೆ. ಬುದ್ಧನ ಕಾಲದಿಂದಲೂ ನಮ್ಮಲ್ಲಿ ಚುನಾವಣಾ ವ್ಯವಸ್ಥೆ ಇತ್ತು. ಬೌದ್ಧ ಬಿಕ್ಕುಗಳು ತಮ್ಮ ಮುಖಂಡನನ್ನು ಆರಿಸಲು ಎಲೆಗಳ ಮೇಲೆ ಹೆಸರು ಬರೆದು ಸೂಚಿಸುತ್ತಿದ್ದರು. ಈ ನಿಟ್ಟಿನಲ್ಲಿ ನಮ್ಮ ದೇಶದ ಚುನಾವಣೆಗೆ ಬಹುದೊಡ್ಡ ಇತಿಹಾಸ, ಪರಂಪರೆಯೇ” ಇದೆ ಎಂದರು.
ವಿಡಿಯೋ ವೀಕ್ಷಿಸಿ: https://youtu.be/yue3D6jXHgI?si=0hfXbtYRTM1bGbLC
“ದೇಶದಲ್ಲಿ ಸರ್ಕಾರ ಇಷ್ಟು ವರ್ಷಗಳ ಕಾಲ ಸುಭದ್ರವಾಗಿರಲು ಎಲ್ಲಾ ವರ್ಗಗಳಲ್ಲೂ ಪರಸ್ಪರ ನಂಬಿಕೆ, ಹೊಂದಾಣಿಕೆ ಇರುವುದೇ ಸಾಕ್ಷಿಯಾಗಿದೆ. ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ದೊಡ್ಡ ಸಾಮಾಜಿಕ ಪಿಡುಗು ಆಗಿದೆ. ಇದನ್ನು ಬೇರು ಸಮೇತ ಕಿತ್ತೊಗೆಯಲು ಯುವಕರು ಪ್ರಗತಿಪರ ಚಿಂತನಾಶಕ್ತಿ ಬೆಳೆಸಿಕೊಳ್ಳಬೇಕು. ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕು. ಯುವಕರು ಯಾವುದೇ ಆಮಿಷಕ್ಕೂ ಒಳಗಾಗದೇ ನೈತಿಕ ಮತದಾನಕ್ಕೆ ಮುಂದಾಗಬೇಕು. ನಾವು ಆರಿಸುವ ಸರ್ಕಾರ ನಮ್ಮ ಆಶೋತ್ತರಗಳನ್ನು ಈಡೇರಿಸುವಂತಿರಬೇಕು. ಪ್ರಾಮಾಣಿಕ ವ್ಯಕ್ತಿಯನ್ನು ಆರಿಸಲು ಮೊದಲು ನಾವು ಪ್ರಾಮಾಣಿಕರಾಗಬೇಕು” ಸಲಹೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮಾನಸಿಕ ತೊಳಲಾಟವನ್ನು ಮಣಿಸುವ ಶಕ್ತಿ ಭರತನಾಟ್ಯಕ್ಕಿದೆ: ಡಾ ಎನ್ ಶ್ರೀನಿವಾಸ್
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶೃತಿ, ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಜಿಲ್ಲಾ ಚುನಾವಣಾ ರಾಯಭಾರಿ ದೀಪಾ ಬುದ್ದೆ, ತಹಶೀಲ್ದಾರ್ ಗಿರಿಜಾ, ಜಿಲ್ಲಾಮಟ್ಟದ ಅಧಿಕಾರಿಗಳು ಸೇರಿದಂತೆ ಹಲವರು ಇದ್ದರು.





