ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರ ಚೆಕ್‌ಪೋಸ್ಟ್ ಬಳಿ ಅಬಕಾರಿ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಗೋವಾಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 90 ಲಕ್ಷ ರೂಪಾಯಿ ಮೌಲ್ಯದ ಮದ್ಯಸಾರ (Extra Neutral Alcohol) ಹಾಗೂ ಎರಡು ಟ್ಯಾಂಕರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಯ ವಿವರ: ಧಾರವಾಡ-ಗೋವಾ ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್ ಬಳಿ ಫೆಬ್ರವರಿ 21ರಂದು ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸಿದರು. ಈ ವೇಳೆ ದಾವಣಗೆರೆಯಿಂದ ಗೋವಾಕ್ಕೆ ಸಾಗುತ್ತಿದ್ದ ಎರಡು ಟ್ಯಾಂಕರ್‌ಗಳನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಬಯಲಿಗೆ ಬಂದಿದೆ.
ಮೊದಲ ಟ್ಯಾಂಕರ್ (MP-09 HH-1908) ನಲ್ಲಿ 30,000 ಲೀಟರ್ ‘Denatured rectified spirit’ ಎಂದು ನಕಲಿ ದಾಖಲೆ ಸೃಷ್ಟಿಸಲಾಗಿತ್ತು. ಎರಡನೇ ಟ್ಯಾಂಕರ್ (KA-48 A-2218) ನಲ್ಲಿ 20,000 ಲೀಟರ್ ‘Ethanol’ ಸಾಗಿಸಲಾಗುತ್ತಿದೆ ಎಂದು ನಕಲಿ ದಾಖಲೆಗಳನ್ನು ತೋರಿಸಲಾಗಿತ್ತು.
ಆದರೆ, ಸಂಶಯಗೊಂಡ ಅಧಿಕಾರಿಗಳು ಪ್ರೈಮರಿ ಡಿಸ್ಟಿಲರಿಯ ಕೆಮಿಸ್ಟ್‌ರನ್ನು ಸ್ಥಳಕ್ಕೆ ಕರೆಸಿ ಆಲ್ಕೋ ಮೀಟರ್ ಮೂಲಕ ಪರೀಕ್ಷಿಸಿದಾಗ, ಅದು ಮದ್ಯ ತಯಾರಿಕೆಗೆ ಬಳಸುವ ‘Extra Neutral Alcohol’ (ENA) ಎಂಬುದು ದೃಢಪಟ್ಟಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೋರ್ ಮೂಲದ ಮಗ್ನರ್ ಸಿಂಗ್ ಹಾಗೂ ಗದಗ ಜಿಲ್ಲೆಯ ರೋಣ ತಾಲೂಕಿನ ಧರ್ಮಪ್ಪ ಕಳಕಪ್ಪ ಕಟ್ಟಿಮನಿ ಎಂಬ ಇಬ್ಬರು ಚಾಲಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ಲೋಕಾಯುಕ್ತ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ; ಶಾಸಕರ ಬಹಿರಂಗ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಗರಂ
ಜಪ್ತುಪಡಿಸಲಾದ 50,000 ಲೀಟರ್ ಮದ್ಯಸಾರದ ಅಂದಾಜು ಬೆಲೆ 40 ಲಕ್ಷ ರೂಪಾಯಿ ಹಾಗೂ ಎರಡು ಟ್ಯಾಂಕರ್‌ಗಳ ಬೆಲೆ 50 ಲಕ್ಷ ರೂಪಾಯಿ ಸೇರಿ ಒಟ್ಟು 90 ಲಕ್ಷ ರೂಪಾಯಿ ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಬಕಾರಿ ಇಲಾಖೆಯ ಮಂಗಳೂರು ವಿಭಾಗದ ಜಂಟಿ ಆಯುಕ್ತರಾದ ಎ.ಎಲ್. ನಾಗೇಶ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಅಮಾನುಲ್ಲಾ ಖಾನ್ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ. ಯಲ್ಲಾಪುರ ಅಬಕಾರಿ ಉಪ ಅಧೀಕ್ಷಕರು ಹಾಗೂ ದಾಂಡೇಲಿ ವಲಯದ ಅಬಕಾರಿ ನಿರೀಕ್ಷಕರು ಈ ಕುರಿತು ಪ್ರತ್ಯೇಕ ಮೊಕದ್ದಮೆಗಳನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.





