ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ಪಟ್ಟಣಕ್ಕೆ ಜೀವನಾಡಿಯಾಗಿರುವ ಹುಡಸಾ ಝರಿಯ ಕುಡಿಯುವ ನೀರಿನ ಮೂಲವೀಗ ಮಲಿನಗೊಂಡಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಆತಂಕದ ನೆರಳು ಬಿದ್ದಿದೆ.
ಪಟ್ಟಣಕ್ಕೆ ನೀರು ಪೂರೈಸುವ ಪಂಪ್ ಹೌಸ್ ಸಮೀಪದಲ್ಲೇ ಕಾಡುಹಂದಿಯೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಜನಸಾಮಾನ್ಯರಲ್ಲಿ ಭೀತಿ ಮೂಡಿಸಿದೆ. ಕುಡಿಯುವ ನೀರಿನ ಮೂಲದ ಅತಿ ಸಮೀಪದಲ್ಲೇ ಪ್ರಾಣಿಯ ಶವ ಬಿದ್ದಿದ್ದರೂ, ಇದರ ನಿರ್ವಹಣೆಯ ಹೊಣೆ ಹೊತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಕೊಳೆತ ಪ್ರಾಣಿಯ ದೇಹದಿಂದ ಹೊರಬಂದ ವಿಷಕಾರಿ ಅಂಶಗಳು ನೀರಿನಲ್ಲಿ ಬೆರೆತಿರುವ ಸಾಧ್ಯತೆಯಿದ್ದು, ಅದೇ ನೀರು ಪಟ್ಟಣದ ಮನೆಗಳಿಗೆ ಪೂರೈಕೆಯಾಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಈ ಘಟನೆಯು ಪೌರಕಾರ್ಮಿಕ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಹುಡಸಾ ಝರಿಯಲ್ಲಿ ಪತ್ತೆಯಾದ ಕಾಡುಹಂದಿಯು ಸಹಜವಾಗಿ ಮೃತಪಟ್ಟಿಲ್ಲ ಎಂಬ ಅನುಮಾನಗಳು ವ್ಯಕ್ತವಾಗಿವೆ. ಕಳ್ಳಬೇಟೆಗಾರರು ಹಾರಿಸಿದ ಗುಂಡೇಟಿನಿಂದ ಗಾಯಗೊಂಡ ಪ್ರಾಣಿಯು, ದಾಹ ತಣಿಸಿಕೊಳ್ಳಲು ನೀರಿದ್ದ ಜಾಗಕ್ಕೆ ಬಂದು ಅಲ್ಲಿಯೇ ಪ್ರಾಣ ಬಿಟ್ಟಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ, ಕಳ್ಳಬೇಟೆಗಾರರ ಪತ್ತೆಗೆ ಮುಂದಾಗಬೇಕಿದೆ. ಹೆಸರಿಗಷ್ಟೇ ಶುದ್ಧೀಕರಣ ಪಂಪ್ ಹೌಸ್‌ನ ಅವ್ಯವಸ್ಥೆ ಇಷ್ಟಕ್ಕೇ ನಿಂತಿಲ್ಲ. ನೀರು ಸಂಗ್ರಹಿಸಿ ಪೂರೈಸುವ ಟ್ಯಾಂಕಿನ ಸ್ಥಿತಿ ಶೋಚನೀಯವಾಗಿದ್ದು, ಅದರ ಮೇಲ್ಚಾವಣಿ ಸಂಪೂರ್ಣ ಹದಗೆಟ್ಟಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಆರ್‌ಸಿಬಿ ಪಾಲಾದ ಗೋಕರ್ಣದ ಕುವರಿ: ಪ್ರತ್ಯೂಷಾ ಕುಮಾರ್ ಡಬ್ಲ್ಯೂಪಿಎಲ್‌ಗೆ ಆಯ್ಕೆ
ಕಬ್ಬಿಣದ ತುಕ್ಕು ಹಿಡಿದ ಸಲಾಖೆಗಳು ನೇರವಾಗಿ ನೀರಿನಲ್ಲಿ ಬೀಳುತ್ತಿದ್ದು, ಜನರಿಗೆ ‘ಶುದ್ಧ ನೀರು’ ಪೂರೈಸುವ ಭರವಸೆ ಕೇವಲ ಕಾಗದದ ಮೇಲಷ್ಟೇ ಉಳಿದಿದೆ. ಈ ಹಿಂದೆಯೂ ಇಂತಹ ಘಟನೆಗಳು ನಡೆದಾಗ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು. ಆಗ ಎಚ್ಚೆತ್ತುಕೊಂಡ ಅಧಿಕಾರಿಗಳು ನೀರಿನ ಟ್ಯಾಂಕ್ ಅನ್ನು ಸ್ವಚ್ಛ ಗೊಳಿಸುವ ಭರವಸೆ ನೀಡಿದರು.
ಮಲಿನಗೊಂಡ ನೀರನ್ನು ಬಳಸುವುದರಿಂದ ಪಟ್ಟಣದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕೊಳೆತ ಶವವನ್ನು ತೆರವುಗೊಳಿಸಿ, ನೀರು ಸಂಗ್ರಹಣಾ ಮೂಲಗಳನ್ನು ಸಂಪೂರ್ಣವಾಗಿ ಸ್ವಚ್ಛ ಗೊಳಿಸುವ ಮೂಲಕ ಶುದ್ಧ ಕುಡಿಯುವ ನೀರನ್ನೂ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಜನಪ್ರತಿನಿಧಿಗಳು ಮತ್ತು ನಾಗರಿಕರು ತೀವ್ರ ಒತ್ತಾಯ ಮಾಡಿದ್ದಾರೆ.





