ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಕುರಿತು ಪದೇ-ಪದೇ ಚರ್ಚೆಗಳು ನಡೆಯುತ್ತಿಲೇ ಇವೆ. ಈ ನಡುವೆ, ಸಂಪುಟ ಪುನರ್‌ರಚನೆಯ ಕೂಗೂ ಕೇಳಿಬಂದಿದೆ. ಸಂಪುಟ ಪುನರ್‌ರಚನೆಗೆ ಆಗ್ರಹಿಸಿ ಕೆಲ ಕಾಂಗ್ರೆಸ್ ಶಾಸಕರು ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಸುಮಾರು 30 ಮಂದಿ ಶಾಸಕರು ಬರೆದಿದ್ದಾರೆ ಎಂದು ಹೇಳಲಾಗಿರುವ ಪತ್ರವು ಸಾಮಾಜಿಕ ಜಾತಲಾಣದಲ್ಲಿ ವೈರಲ್ ಅಗಿದೆ. ಪತ್ರವನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಬರೆಯಲಾಗಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಪತ್ರ ಬರೆದ ದಿನಾಂಕವಾಗಲೀ, ಆ ಪತ್ರ ಹೈಕಮಾಂಡ್‌ಗೆ ತಲುಪಿದೆಯೇ ಎಂಬ ಸ್ಪಷ್ಟತೆಯಾಗಲಿ ದೊರೆತಿಲ್ಲ.
“ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವವರಿಗೂ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ಮೊದಲ ಬಾರಿಗೆ ಆಯ್ಕೆಯಾದವರು ಮುಖ್ಯಮಂತ್ರಿಯೇ ಆಗಿದ್ದಾರೆ. ಹೀಗಾಗಿ, ಸಂಪುದಲ್ಲಿ ಹೊಸ ಶಾಸಕರಿಗೆ ಅವಕಾಶ ನೀಡಬೇಕು. ಅದಕ್ಕಾಗಿ, ಸಂಪುಟ ಪುನರ್ ರಚನೆ ಮಾಡಬೇಕು. ಕನಿಷ್ಟ ಐದು ಮಂದಿ ಹೊಸಬರಿಗೆ ಸಚಿವ ಸ್ಥಾನವನ್ನು ನೀಡಬೇಕು” ಎಂದು ಆಗ್ರಹಿಸಲಾಗಿದೆ.




