ಕಳೆದ ಒಂದು ವಾರಗಳಿಂದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ಬಿಗಡಾಯಿಸಿದೆ. ಗಡಿಯಲ್ಲಿನ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇದೀಗ, ಎರಡೂ ರಾಷ್ಟ್ರಗಳು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಕತಾರ್ ವಿದೇಶಾಂಗ ಸಚಿವಾಲಯ ಭಾನುವಾರ ಮುಂಜಾನೆ ತಿಳಿಸಿದೆ.
ಇತ್ತೀಚೆಗೆ, ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಪಾಕಿಸ್ತಾನದ 12 ಮಂದಿಯನ್ನು ಅಫ್ಘಾನ್‌ನ ತಾಲಿಬಾನ್ ಪಡೆ ಹತ್ಯೆಗೈದಿತ್ತು. ಸಂಘರ್ಷದಲ್ಲಿ ನೂರಾರು ಜನರು ಗಾಯಗೊಂಡಿದ್ದಾರೆ. ಎರಡೂ ರಾಷ್ಟ್ರಗಳ ನಡುವಿನ ಪರಿಸ್ಥಿತಿಯನ್ನು ಶಮನಗೊಳಿಸಲು ಕತಾರ್ ನೇತೃತ್ವದಲ್ಲಿ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿದ್ದವು. ಇದೀಗ, ಕದನ ವಿರಾಮ ಘೋಷಿಸಲಾಗಿದೆ.
ಅಫ್ಘಾನಿಸ್ತಾನದಿಂದ ಕಾರ್ಯಾಚರಿಸುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯನ್ನು ಕೊನೆಗೊಳಿಸಲು ಮತ್ತು ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸಲು ಕದನ ವಿರಾಮವು ತಕ್ಷಣದ ಕ್ರಮಗಳನ್ನು ಜಾರಿಗೊಳಿಸುತ್ತದೆ ಎಂದು ಹೇಳಲಾಗಿದೆ.




