ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಪ್ರತಿನಿಧಿಸುತ್ತಿರುವ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ಮತಗಳವು ನಡೆದಿದೆ ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರ ಪಾತ್ರ ಇರುವುದು ಸಿಐಡಿ ತನಿಖೆಯಲ್ಲಿ ಸಾಬೀತಾಗಿದೆ ಎಂದು ವರದಿಯಾಗಿದೆ. ತನಿಖೆ ನಡೆಸಿರುವ ಸಿಐಡಿ ಪೊಲೀಸರು ಸುಭಾಷ್ ಗುತ್ತೇದಾರ್, ಅವರ ಪುತ್ರ ಹರ್ಷಾನಂದ ಸೇರಿದಂತೆ 7 ಮಂದಿ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
2023ರ ವಿಧಾಸನಭಾ ಚುನಾವಣೆಯಲ್ಲಿ ಕಲಬುರಗಿ ಜಿಲ್ಲೆಯ ಆಳಂದ ಕ್ಷೆತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ.ಆರ್ ಪಾಟೀಲ್ ಅವರನ್ನು ಸೋಲಿಸಲು ಬಿಜೆಪಿ ನಾಯಕರು ಮತಗಳವು ನಡೆಸಲು ಯತ್ನಿಸಿದ್ದರು. ಮತಗಳವು ನಡೆಸಲು ಯತ್ನಿಸಿದ್ದ ಸಂದರ್ಭದಲ್ಲಿ, ಪ್ರತಿ ಮತದಾರರ ಹೆಸರು ಅಳಿಸಲು ಅರ್ಜಿ ಸಲ್ಲಿಸಿದ್ದವರಿಗೆ 80 ರೂ. ಹಣ ಪಾವತಿಸಲಾಗಿದೆ ಎಂದೂ ಆರೋಪಿಸಲಾಗಿತ್ತು. ಬಿ.ಆರ್ ಪಾಟೀಲ್ ಅವರು ನೀಡಿದ ದೂರಿನ ಆಧಾರದ ಮೇಲೆ ಪರಿಶೀಲನೆ ನಡೆಸಿದ್ದ ಚುನಾವಣಾ ಆಯೋಗದ ಅಧಿಕಾರಿಗಳು ಮತಗಳವು ಯತ್ನ ನಡೆದಿದೆ ಎಂಬುದನ್ನು ಬಹಿರಂಗಪಡಿಸಿದ್ದರು. ಅಲ್ಲದೆ, ಮತ ಅಳಿಸುವಿಕೆಗೆ ಯತ್ನಿಸಲಾಗಿದ್ದ 5,994 ಮತಗಳನ್ನು ಮರಳಿ ಮತಪಟ್ಟಿದೆ ಸೇರಿಸಿದ್ದರು.
ಚುನಾವಣಾ ಅಧಿಕಾರಿಗಳು ದಾಖಲಿಸಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಬಳಿಕ, ಕಾಂಗ್ರೆಸ್ ಸರ್ಕಾರವು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ತನಿಖೆಗೆ ಚುನಾವಣಾ ಆಯೋಗ ಸರಿಯಾಗಿ ಸಹಕರಿಸದ ಹಿನ್ನೆಲೆ, ಪ್ರಕರಣವನ್ನು ಇತ್ತೀಚೆಗೆ ಎಸ್‌ಐಟಿ ತನಿಖೆಗೆ ಹಸ್ತಾಂತರಿಸಲಾಗಿತ್ತು. ಇದೀಗ, ಸಿಐಡಿ ಮತ್ತು ಎಸ್‌ಐಟಿ ತನಿಖೆ ಆಧರಿಸಿ ಎಸ್‌ಐಟಿ ಸುಮಾರು 22,000 ಪುಟಗಳ ಚಾರ್ಜ್‌ಶೀಟ್ಅನ್ನು ಬೆಂಗಳೂರು ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದೆ.




