20 ವರ್ಷ ಹಳೆಯ ಮನರೇಗಾ (MGNREGA) ಯೋಜನೆಯನ್ನು ರದ್ದುಗೊಳಿಸಿ, ಹೊಸದಾಗಿ ರೂಪಿಸಲಾಗಿರುವ VB-G RAM G ಮಸೂದೆಯನ್ನು ವಿಪಕ್ಷಗಳ ವಿರೋಧದ ನಡೆವೆಯೂ ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿವೆ ಮಸೂದೆ ಅಂಗೀಕಾರವನ್ನು ವಿರೋಧಿಸಿ, ಮಸೂದೆಯಲ್ಲಿ ನ್ಯೂನತೆಗಳನ್ನು ತಿದ್ದಲು ಮಸೂದೆಯನ್ನು ಸಂಸದೀಯ ಸಮಿತಿಗೆ ವರ್ಗಾಯಿಸಲು ಆಗ್ರಹಿಸಿ ವಿಪಕ್ಷಗಳ ಸಂಸದರು ರಾತ್ರಿಯಿಡೀ ಧರಣಿ ನಡೆಸಿದ್ದಾರೆ.
ಅಸ್ತಿತ್ವದಲ್ಲಿರುವ ಮನರೇಗಾದಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿರುವುದು, ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೇರಿರುವುದು, ಯೋಜನೆಯ ಸಂಪೂರ್ಣ ನಿಯಂತ್ರಣವನ್ನು ಕೇಂದ್ರ ಸರ್ಕಾರದ ಸುಪರ್ದಿಗೆ ತೆಗೆದುಕೊಂಡಿರುವುದನ್ನು ವಿಪಕ್ಷಗಳ ಬಲವಾಗಿ ಟೀಕಿಸಿವೆ. ರಾಜ್ಯಸಭೆಯಲ್ಲಿ ವಿಪಕ್ಷಗಳ ನಾಯಕರು ಮಸೂದೆಯ ಪ್ರತಿಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸತ್ತಿನ ಆವರಣದಲ್ಲಿರುವ ಸಂವಿಧಾನ್ ಸದನದ ಹೊರಗೆ 12 ಗಂಟೆಗಳ ಕಾಲ ರಾತ್ರಿಯಿಡೀ ಧರಣಿ ನಡೆಸಿದ್ದಾರೆ.



