17 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ ಸ್ವಾಮಿ ಚೈತನ್ಯಾನಂದ ಅಲಿಯಾಸ್ ಪಾರ್ಥಸಾರಥಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವಾರು ದಿನಗಳಿಂದ ತಲೆ ಮರೆಸಿಕೊಂಡು, ಪದೇ-ಪದೇ ಸ್ಥಾಳ ಬದಲಿಸುತ್ತಿದ್ದ ಆರೋಪಿ ಪಾರ್ಥಸಾರಥಿಯನ್ನು ಆಗ್ರಾದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕಳೆದ 50 ದಿನಗಳಿಂದ ಪರಾರಿಯಾಗಿದ್ದ ಸ್ವಾಮಿಯನ್ನು ತಾಜ್‌ಗಂಜ್ ಪ್ರದೇಶದ ಹೋಟೆಲ್‌ನಲ್ಲಿ ಭಾನುವಾರ ಮುಂಜಾನೆ 3.30ಕ್ಕೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಪಾರ್ಥಸಾರಥಿ ದೆಹಲಿಯ ವಸಂತ ಕುಂಜ್ ಪ್ರದೇಶದಲ್ಲಿರುವ ಖಾಸಗಿ ಎಂಜಿನಿಯರಿಂಗ್ ಸಂಸ್ಥೆ ‘ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್’ನ ವ್ಯವಸ್ಥಾಪಕನಾಗಿದ್ದಾರೆ. ಕಾಲೇಜಿನಲ್ಲಿ ಇಡಬ್ಲ್ಯೂಎಸ್ ವಿದ್ಯಾರ್ಥಿವೇತನದ ಅಡಿಯಲ್ಲಿ ‘ಸ್ನಾತಕೋತ್ತರ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್’ (ಪಿಜಿಡಿಎಂ) ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರಿಗೆ ಆತ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಆತನ ವಿರುದ್ಧ ಇತ್ತೀಚೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಆತನ ಕಾಮಕೃತ್ಯಗಳಿಗೆ ಸುಮಾರು 12ರಿಂದ 17 ವಿದ್ಯಾರ್ಥಿನಿಯರು ತುತ್ತಾಗಿದ್ದಾರೆ ಎಂದು ಹೇಳಲಾಗಿದೆ.




