2025ರಲ್ಲಿ ಉತ್ತರ ಪ್ರದೇಶದಲ್ಲಿ 2,500 ಕ್ಕೂ ಹೆಚ್ಚು ಎನ್‌ಕೌಂಟರ್‌ಗಳನ್ನು ಪೊಲೀಸರು ನಡೆಸಿದ್ದಾರೆ. ಇವುಗಳಲ್ಲಿ 48 ಆರೋಪಿಗಳು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಡಿಜಿಪಿ ರಾಜೀವ್ ಕೃಷ್ಣ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿ ನಡೆಸಿ ವಿವರ ನೀಡಿರುವ ಅವರು, “2017ರಿಂದ ಈವರೆಗೆ 266 ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗಳಲ್ಲಿ ಸಾವನ್ನಪ್ಪಿದ್ದಾರೆ” ಎಂದು ತಿಳಿಸಿದ್ದಾರೆ. ಅಂದಹಾಗೆ,2017ರಿಂದ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ಮುಖ್ಯಮಂತ್ರಿಯ ಸೂಚನೆಗಳಿಗೆ ಅನುಗುಣವಾಗಿ ಪೊಲೀಸ್ ಕಾರ್ಯಾಚಾರಣೆಗಳು (ಎನ್‌ಕೌಂಟರ್) ನಡೆದಿವೆ ಎಂದು ಡಿಜಿಪಿ ಹೇಳಿದ್ದಾರೆ.
“2025ರಲ್ಲಿ, ಪೊಲೀಸರು 2,739 ಕಾರ್ಯಾಚರಣೆಗಳನ್ನು ನಡೆಸಿದ್ದಾರೆ. ಇದರಲ್ಲಿ 3,153 ಆರೋಪಿಗಳು ಗಾಯಗೊಂಡಿದ್ದು, 48 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, ಓರ್ವ ಪೊಲೀಸ್ ಕೂಡ ಸಾವನ್ನಪ್ಪಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಎನ್‌ಕೌಂಟರ್‌ಗಳಲ್ಲಿ 2018ರಲ್ಲಿ 41, 2019ರಲ್ಲಿ 34, 2020 ಮತ್ತು 2021ರಲ್ಲಿ ತಲಾ 26, 2022ರಲ್ಲಿ 13, 2023ರಲ್ಲಿ 26 ಹಾಗೂ 2024ರಲ್ಲಿ 25 ಸಾವುಗಳು ಸಂಭವಿಸಿವೆ. ಈ ಎಲ್ಲ ಅವಧಿಯಲ್ಲಿ ಒಟ್ಟು 16,284 ಎನ್‌ಕೌಂಟರ್‌ಗಳು ನಡೆದಿದ್ದು,10,990 ಆರೋಪಿಗಳು ಗಾಯಗೊಂಡಿದ್ದಾರೆ, 266 ಮಂದಿ ಸಾವನ್ನಪ್ಪಿದ್ದಾರೆ” ಎಂದು ವಿವರಿಸಿದ್ದಾರೆ.




