ದಲಿತ ಸಮುದಾಯದ ಜನರು ವಾಸಿಸುವ ಪ್ರದೇಶಕ್ಕೆ ವಿದ್ಯುತ್ ಮತ್ತು ನೀರು ಸರಬರಾಜು ಸ್ಥಗಿತಗೊಂಡಿರುವ ಘಟನೆ ಒಡಿಶಾದ ಬಲಂಗೀರ್ ಜಿಲ್ಲೆಯ ದುಮೇರ್‌ಚುವಾನ್ ಗ್ರಾಮದಲ್ಲಿ ನಡೆದಿದೆ. ಇದು, ‘ಜಾತಿ ತಾರತಮ್ಯ’ದ ಕೃತ್ಯವೆಂದು ದಲಿತ ನಿವಾಸಿಗಳು ಆರೋಪಿಸಿದ್ದಾರೆ.
ಕೆಲವು ದಿನಗಳಿಂದ ಪೈಪ್ ನೀರು ಸರಬರಾಜು ಸ್ಥಗಿತಗೊಂಡಿತ್ತು. ಇದೀಗ, ಬೀದಿ ದೀಪಗಳನ್ನು ಸಹ ಆಫ್ ಮಾಡಲಾಗಿದೆ. ಪರಿಣಾಮ, ನಮ್ಮ ಪ್ರದೇಶವು ಕತ್ತಲೆಯಲ್ಲಿ ಮುಳುಗಿದೆ ಎಂದು ದಲಿತ ನಿವಾಸಿಗಳು ಹೇಳಿಕೊಂಡಿದ್ದಾರೆ.
ಗ್ರಾಮದ ನಿವಾಸಿಯೊಬ್ಬರು ಹೇಳುವಂತೆ, “ಗ್ರಾಮದ ಇತರ ಭಾಗದಲ್ಲಿ ವಿದ್ಯುತ್ ಮತ್ತು ನೀರಿನ ವ್ಯವಸ್ಥೆ ಸಮರ್ಪಕವಾಗಿದೆ. ಆದರೆ, ನಮಗೆ ವಿದ್ಯುತ್ ಮತ್ತು ನೀರಿನ ಸೌಲಭ್ಯವಿಲ್ಲ. ನಮ್ಮನ್ನು ವಂಚಿತರನ್ನಾಗಿ ಮಾಡಲಾಗಿದೆ. ನಾವು ಘನತೆಯಿಂದ ಬದುಕಲು ಸಾಧ್ಯವಾಗದಂತೆ ತಡೆಯಲಾಗುತ್ತಿದೆ. ನಮ್ಮ ಸಮಸ್ಯೆಗಳನ್ನು ಪರಿಹರಿಸಲು ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ” ಎಂದಿದ್ದಾರೆ.
“ನಮಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ವಿದ್ಯುತ್ ಕೊರತೆಯಿಂದಾಗಿ ನಮ್ಮ ಬೀದಿಗಳು ಕತ್ತಲೆಯಲ್ಲಿವೆ. ಬಿಸಿಲಿನ ದಿನಗಳಲ್ಲಿ ನೀರು ಸಿಗುವುದಿಲ್ಲ. ನಮಗೆ ನೀರಿನ ಭರವಸೆ ನೀಡಲಾಗಿತ್ತು, ಆದರೆ ಅದು ಇನ್ನೂ ಆಗಿಲ್ಲ” ಎಂದು ಗ್ರಾಮದ ಮಹಿಳೆಯೊಬ್ಬರು ಹೇಳಿದ್ದಾರೆ.
ಅಧಿಕಾರಿಗಳ ತಂಡವು ಗ್ರಾಮಕ್ಕೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಕಾಂತಾಬಂಜಿ ಪ್ರದೇಶದ ತಹಶೀಲ್ದಾರ್ ಬಿಸ್ನಾಥ್ ಖಾಲ್ಖೋ ಹೇಳಿದ್ದಾರೆ.




