ಬ್ರೆಜಿಲ್‌ನ ಬೆಲೆಮ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯ (UN COP30) ಮುಖ್ಯ ವೇದಿಕೆ ಸಮೀಪದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 21 ಮಂದಿ ಗಾಯಗೊಂಡಿದ್ದಾರೆ. ‘ನೀಲಿ ವಲಯ’ದಲ್ಲಿ ಈ ಘಟನೆ ಸಂಭವಿಸಿದ್ದು, ಅಲ್ಲೇ ಎಲ್ಲಾ ಸಭೆಗಳು, ಮಾತುಕತೆಗಳು, ಮಾಧ್ಯಮ ಕೇಂದ್ರ ಮತ್ತು ಮುಖ್ಯ ಸಮಗ್ರ ಸಭಾಂಗಣ ಸೇರಿದಂತೆ ಎಲ್ಲಾ ಉನ್ನತ ಗಣ್ಯರ ಕಚೇರಿಗಳಿವೆ ಎಂದು ವರದಿಯಾಗಿದೆ. ಬೆಂಕಿ ದುರಂತದ ಸುದ್ದಿ ಹರಡಿದ ತಕ್ಷಣ, ಜನರು ಸುರಕ್ಷತೆಗಾಗಿ ಎಲ್ಲಾ ನಿರ್ಗಮನ ದ್ವಾರಗಳಿಂದ ಹೊರಗೆ ಓಡಿ ಹೋಗಿದ್ದು, ಅಧಿಕಾರಿಗಳು ಸಂಪೂರ್ಣ ಸುರಕ್ಷತಾ ಪರಿಶೀಲನೆಗಾಗಿ ಸ್ಥಳವನ್ನು ಮುಚ್ಚಿದರು. ರಾತ್ರಿ 8:40ರಿಂದ ಆರು ಗಂಟೆಗಳಿಗೂ ಅಧಿಕ ಕಾಲ ಶೃಂಗಸಭೆ ಪ್ರವೇಶಕ್ಕೆ ಅವಕಾಶವೇ ಇರಲಿಲ್ಲ ಎನ್ನಲಾಗಿದೆ.




