ಮತಗಳವು ವಿರುದ್ಧವಾಗಿ ಡಿಸೆಂಬರ್ 14ರಂದು ರಾಮಲೀಲಾ ಮೈದಾನದ ಬಳಿ ಕಾಂಗ್ರೆಸ್ ರ‍್ಯಾಲಿ ನಡೆಸುವುದಾಗಿ ಶುಕ್ರವಾರ ಘೋಷಿಸಿದೆ. ಹಾಗೆಯೇ ಭಾರತೀಯ ಚುನಾವಣಾ ಆಯೋಗ (ಇಸಿಐ) ಈಗ ಖಂಡಿತವಾಗಿ ಪಕ್ಷಪಾತಿಯಾಗಿದ್ದು ಚುನಾವಣೆ ವೇಳೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಸಮಾನ ಸ್ಪರ್ಧೆ ಎಂಬ ಪರಿಕಲ್ಪನೆಯನ್ನೇ ಸಂಪೂರ್ಣವಾಗಿ ನಾಶಪಡಿಸುತ್ತಿದೆ ಎಂದು ಆರೋಪಿಸಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್, “ಮತಗಳವು ಎಂಬ ಭೂತವು ಇಂದು ನಮ್ಮ ಪ್ರಜಾಪ್ರಭುತ್ವದ ಮೇಲೆ ಎದುರಾಗಿರುವ ದೊಡ್ಡ ಅಪಾಯವಾಗಿದೆ. ನಮ್ಮ ಸಂವಿಧಾನವನ್ನು ನಾಶಮಾಡುವ ಈ ಪ್ರಯತ್ನಗಳ ವಿರುದ್ಧ ದೇಶಾದ್ಯಂತ ಮಾಹಿತಿ ನೀಡಲು ಡಿಸೆಂಬರ್ 14ರಂದು ಮಧ್ಯಾಹ್ನ 1.30ರಿಂದ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ‘ವೋಟ್ ಚೋರ್ ಗಡ್ಡಿ ಛೋಡ್’ ಮಹಾ ರ‍್ಯಾಲಿಯನ್ನು ಕಾಂಗ್ರೆಸ್ ನಡೆಸಲಿದೆ” ಎಂದು ತಿಳಿಸಿದ್ದಾರೆ.




