ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಧ್ಯಪ್ರದೇಶ ಸಚಿವ ಕುನ್ವರ್ ವಿಜಯ್ ಶಾ ಅವರ ವಿರುದ್ಧ ಕ್ರಮಕ್ಕೆ ಅವಕಾಶ ಕೊಡದೆ, ಅವರನ್ನು ರಕ್ಷಿಸಲು ಮುಂದಾಗಿದ್ದ ಬಿಜೆಪಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ವಿಜಯ್ ಶಾ ವಿರುದ್ಧದ ವಿಚಾರಣೆಗೆ ಅನುಮತಿ ನೀಡುವ ಕುರಿತು ಎರಡು ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದೆ. ಇನ್ನು, ಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲೇ, ಭೋಪಾಲ್‌ನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು, ವಿಜಯ್ ಶಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್ ದಾಳಿ ಮತ್ತು ಅದರ ವಿರುದ್ಧ ಆಪರೇಷನ್ ಸಿಂಧೂರ ಕುರಿತು ಮಾತನಾಡಿದ್ದ ವಿಜಯ್ ಶಾ ನಾಲಿಗೆ ಹರಿಬಿಟ್ಟಿದ್ದರು. ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ಹಿಸಿದ್ದ ಸೋಫಿಯಾ ಅವರನ್ನು ಉಲ್ಲೇಖಿಸಿ, ‘ನಮ್ಮ ಮಗಳನ್ನು ವಿಧವೆಯರನ್ನಾಗಿ ಮಾಡಿದವರಿಗೆ, ನಾವು ಅವರದ್ದೇ ಸಹೋದರಿಯನ್ನು ಕಳುಹಿಸಿ ಪಾಠ ಕಲಿಸಿದ್ದೇವೆ’ ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದರು. ವಿಜಯ್ ಶಾ ಹೇಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.



