ಮತದಾನದ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ವಿರುದ್ಧವಾಗಿ ಕಾಂಗ್ರೆಸ್ ರಾಜಕೀಯವಾಗಿ ಮತ್ತು ಕಾನೂನುಬದ್ಧವಾಗಿ ಹೋರಾಟ ನಡೆಸಲಿದೆ ಎಂದು ಲೋಕಸಭೆ ವಿಪಕ್ಷ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ. ಎಸ್‌ಐಆರ್ ನಡೆಯುತ್ತಿರುವ ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಮುಖ ಕಾಂಗ್ರೆಸ್ ಪದಾಧಿಕಾರಿಗಳೊಂದಿಗೆ ಮಂಗಳವಾರ ರಾಹುಲ್ ಸಭೆ ನಡೆಸಿದ್ದು, ಎಸ್‌ಐಆರ್ ಪ್ರಕ್ರಿಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಯಾವುದೇ ಗೊಂದಲವಿಲ್ಲದ ಮತದಾರರ ಪಟ್ಟಿಯನ್ನು ಒದಗಿಸುವುದು ಚುನಾವಣಾ ಆಯೋಗದ ಕರ್ತವ್ಯ. ಆದರೆ ಚುನಾವಣಾ ಆಯೋಗ ರಾಜಕೀಯ ಪಕ್ಷಗಳ ಮೇಲೆ ತನ್ನ ಜವಾಬ್ದಾರಿಯನ್ನು ಹೊರಿಸಲು ಪ್ರಯತ್ನಿಸುತ್ತಿದೆ. ಎಸ್‌ಐಆರ್ ಅನ್ನು ತರಾತುರಿಯಲ್ಲಿ ನಡೆಸುತ್ತಿದೆ. ಮತದಾರರ ಹೆಸರನ್ನು ಅಳಿಸುವುದೇ ಇದರ ಹಿಂದಿನ ಉದ್ದೇಶ ಎಂದು ಸಭೆಯಲ್ಲಿ ರಾಹುಲ್ ಗಾಂಧಿ ದೂರಿದ್ದಾರೆ.




