ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಯಮುನಾ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪ್ರದೇಶದ ಕೆಲವು ಭಾಗಗಳಲ್ಲಿದ್ದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ನದಿ ಉಕ್ಕಿ ಹರಿಯುತ್ತಿದ್ದಂತೆ ಯಮುನಾ ಬಜಾರ್‌ನಂತಹ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಹಲವಿ ಮನೆಗಳ ನೆಲ ಮಹಡಿಗಳು ಜಲಾವೃತಗೊಂಡಿವೆ. ವಸ್ತುಗಳು ಹಾನಿಗೊಂಡಿವೆ ಎಂದು ವರದಿಗಳು ತಿಳಿಸಿವೆ.
ಕೇಂದ್ರ ಜಲ ಆಯೋಗದ (ಸಿಡಬ್ಲ್ಯೂಸಿ) ಪ್ರಕಾರ, ಬೆಳಿಗ್ಗೆ 9 ಗಂಟೆಗೆ, ಹಳೆಯ ಯಮುನಾ ಸೇತುವೆಯಲ್ಲಿ (ಒವೈಬಿ) ನದಿಯ ನೀರು 205.81 ಮೀಟರ್‌ನಲ್ಲಿ ಹರಿಯುತ್ತಿದ್ದು, ಅಪಾಯದ ಮಟ್ಟವನ್ನು 205.33 ಮೀಟರ್ ಮೀರಿದೆ ಎಂದು ತಿಳಿದುಬಂದಿದೆ.
ಈ ಮಟ್ಟವು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದ್ದು, ರಾತ್ರಿ 8 ಗಂಟೆಗೆ 206.41 ಮೀಟರ್ ತಲುಪವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.





