ತಮಿಳುನಾಡಿನ ಕರೂರಿನಲ್ಲಿ ನಟ-ರಾಜಕೀಯ ಪಕ್ಷದ ನಾಯಕ ವಿಜಯ್ ಅವರ ತಮಿಳಗ ವೆಟ್ಟ್ರಿ ಕಳಗಮ್ (TVK) ಪಕ್ಷದ ಪ್ರಚಾರ ಸಭೆಯಲ್ಲಿ ಇಂದು ಭಾರೀ ದುರಂತ ಸಂಭವಿಸಿದೆ. ಕಾಲ್ತುಳಿತದಲ್ಲಿ ಮೂವರು ಮಕ್ಕಳು ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಭೆಗೆ ಆಗಮಿಸಿದ್ದ ಸಾವಿರಾರು ಜನ ವಿಜಯ್‌ರನ್ನು ನೋಡುವ ನಿರೀಕ್ಷೆಯಲ್ಲಿ ಆರು ಗಂಟೆಗಳಿಗೂ ಹೆಚ್ಚು ಕಾಲ ಕಾಯುತ್ತಿದ್ದರು. ವಿಜಯ್ ತಡವಾಗಿ ವೇದಿಕೆಗೆ ಬಂದು ಭಾಷಣ ಆರಂಭಿಸುತ್ತಿದ್ದಂತೆಯೇ ಜನಸಮೂಹದಲ್ಲಿ ತಳ್ಳಾಟ-ಗದ್ದಲ ಉಂಟಾಗಿ ಹಲವರು ಬಿದ್ದು ಮೃತಪಟ್ಟಿದ್ದಾರೆ.
ಅತಿಯಾದ ಜನಸಂದಣಿಯಿಂದಾಗಿ ಹಲವಾರು ಕಾರ್ಯಕರ್ತರು ಮತ್ತು ಮಕ್ಕಳು ಅಸ್ವಸ್ಥರಾದರು. ವಿಜಯ್ ತಮ್ಮ ಭಾಷಣವನ್ನು ನಿಲ್ಲಿಸಿ ಶಾಂತಿಯನ್ನು ಕಾಪಾಡಲು ಮನವಿ ಮಾಡಿದರು. ಅಸ್ವಸ್ಥರಿಗೆ ನೀರಿನ ಬಾಟಲ್‌ಗಳನ್ನು ಹಂಚಲಾಯಿತು. ಆಂಬುಲೆನ್ಸ್‌ಗಳಿಗೆ ದಾರಿ ಕಲ್ಪಿಸಿ ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿ ದ್ವೇಷ ರಾಜಕಾರಣವನ್ನು ಸದೆಬಡಿಯದಿದ್ದರೆ ಉಳಿಗಾಲವಿಲ್ಲ
ಗೊಂದಲದ ನಡುವೆ ಒಂಬತ್ತು ವರ್ಷದ ಬಾಲಕಿ ಕಾಣೆಯಾಗಿರುವ ಘಟನೆ ಕೂಡ ವರದಿಯಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ವಿಜಯ್, ಪೊಲೀಸರ ಸಹಾಯವನ್ನು ಕೋರಿದರು ಹಾಗೂ ತಮ್ಮ ಪಕ್ಷದ ಕಾರ್ಯಕರ್ತರನ್ನು ಹುಡುಕಾಟದಲ್ಲಿ ಕೈಜೋಡಿಸಲು ಮನವಿ ಮಾಡಿದರು.
2026ರ ವಿಧಾನಸಭಾ ಚುನಾವಣೆಯ ಪೂರ್ವಸಿದ್ಧತೆಯ ಭಾಗವಾಗಿ ವಿಜಯ್ ರಾಜ್ಯವ್ಯಾಪಿ ಪ್ರಚಾರ ಯಾತ್ರೆ ನಡೆಸುತ್ತಿದ್ದಾರೆ. ಆದರೆ ಕರೂರಿನಲ್ಲಿ ಸಂಭವಿಸಿದ ಈ ದುರಂತವು ಅವರ ಪಕ್ಷದ ಪ್ರಚಾರಕ್ಕೆ ತೀವ್ರ ಆಘಾತ ತಂದಿದೆ.





