ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದಿಂದ ಇಂದು ಒಂದೇ ದಿನ ದೇಶಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡಿದ್ದು, ಸಂಸ್ಥೆಯ ವಿಮಾನಯಾನ ಸೇವೆ ಸಹಜ ಸ್ಥಿತಿಗೆ ಮರಳಲು ಡಿ.10 ರಿಂದ ಡಿ.15ರಗರೆಗೆ ಸಮಯ ಬೇಕು ಎಂದು ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ತಿಳಿಸಿದ್ದಾರೆ.
ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್, “ಕಳೆದ ಕೆಲವು ದಿನಗಳಿಂದ ನಮ್ಮ ಕಾರ್ಯಾಚರಣೆಯಲ್ಲಿ ತೀವ್ರ ಅಡಚಣೆಗಳು ಉಂಟಾಗಿವೆ. ಇಂದು (ಡಿಸೆಂಬರ್ 5) ಅತ್ಯಂತ ತೀವ್ರ ಪ್ರಭಾವಿತ ದಿನವಾಗಿದ್ದು, 1,000ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ” ಎಂದು ಹೇಳಿದರು. ಸಂಪೂರ್ಣ ಸಹಜ ಸ್ಥಿತಿಗೆ ಮರಳಲು 5-10 ದಿನಗಳು ಬೇಕಾಗಬಹುದು ಎಂದು ಅಂದಾಜಿಸಿದ ಅವರು, ಡಿಸೆಂಬರ್ 10 ರಿಂದ 15ರ ನಡುವೆ ಕ್ರಮೇಣ ಸುಧಾರಣೆಯಾಗಲಿದೆ” ಎಂದು ತಿಳಿಸಿದ್ದಾರೆ.
ರದ್ದಾದ ವಿಮಾನಗಳ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರದಂತೆ ಕೋರಿದ ಎಲ್ಬರ್ಸ್, ತಡೆಗಳು ಮತ್ತು ರದ್ದತಿಗಳಿಂದ ಉಂಟಾದ ತೊಂದರೆಗೆ ಇಂಡಿಗೋ ಪರವಾಗಿ ಕ್ಷಮೆಯಾಚಿಸಿದರು. “ನಮ್ಮ ಗ್ರಾಹಕರಿಗೆ ಉಂಟಾದ ತೀವ್ರ ಅನಾನುಕೂಲತೆಗೆ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಸಂಸ್ಥೆಯು ಗ್ರಾಹಕ ಸಂಪರ್ಕ, ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡುವುದು ಮತ್ತು ಸಿಬ್ಬಂದಿ ಸಾಮರ್ಥ್ಯ ಹೆಚ್ಚಿಸುವ ಮೂಲಕ ಸಮಸ್ಯೆಯನ್ನು ನಿಭಾಯಿಸುತ್ತಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೋಮುವಾದಿಗಳ ಅಜೆಂಡಾ ಅರ್ಥ ಮಾಡಿಕೊಳ್ಳದ ಕಾಂಗ್ರೆಸ್; ಪುಂಡಾಟಕ್ಕೆ ಕಡಿವಾಣ ಯಾವಾಗ?
ಶನಿವಾರ ರದ್ದತಿಗಳು 1,000ಕ್ಕಿಂತ ಕಡಿಮೆ ಇರಲಿವೆ ಎಂದು ಭರವಸೆ ನೀಡಿದ ಎಲ್ಬರ್ಸ್, ಸಂಸ್ಥೆಯ ವ್ಯವಸ್ಥೆಗಳು ಮತ್ತು ವೇಳಾಪಟ್ಟಿಯನ್ನು ರೀಬೂಟ್ ಮಾಡುವುದು ಅನಿವಾರ್ಯವಾಗಿತ್ತು. ಡಿಜಿಸಿಎಯಿಂದ ಎಫ್‌ಡಿಟಿಎಲ್ ನಿಯಮಗಳಲ್ಲಿ ತಾತ್ಕಾಲಿಕ ಸಡಿಲಿಕೆ ದೊರೆತಿರುವುದು ಸಹಾಯಕವಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಡಿಜಿಸಿಎ ಸಹಕಾರದೊಂದಿಗೆ ಸ್ಥಿರತೆಯತ್ತ ಸಾಗುತ್ತಿದ್ದೇವೆ ಎಂದರು.
ಈ ಅಡಚಣೆಗಳು ಪ್ರಯಾಣಿಕರಲ್ಲಿ ಇಂಡಿಗೋದ 19 ವರ್ಷಗಳಲ್ಲಿ ನಿರ್ಮಿಸಿದ ನಂಬಿಕೆಯನ್ನು ಕಸಿದಿದೆ ಎಂದು ಒಪ್ಪಿಕೊಂಡ ಎಲ್ಬರ್ಸ್, ಇದನ್ನು ಮರಳಿ ಪಡೆಯಲು ಮತ್ತು ಬಲಪಡಿಸಲು ಎಲ್ಲ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಡಿಸೆಂಬರ್ 5 ರಿಂದ 15ರವರೆಗಿನ ಬುಕಿಂಗ್‌ಗಳಿಗೆ ಪೂರ್ಣ ಹಣಪರುಪಾವತಿ ಮತ್ತು ವೇಳಾಪಟ್ಟಿ ಬದಲಾವಣೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.





