ಹರಿಯಾಣದ ಪಾಣಿಪತ್‌ನಲ್ಲಿರುವ ಸಾರ್ವಜನಿಕ ವಲಯದ ತೈಲ ಸಂಸ್ಕರಣಾಗಾರ ಮತ್ತು ಪೆಟ್ರೋಕೆಮಿಕಲ್ ಸಂಕೀರ್ಣದಲ್ಲಿ ದುಡಿಯುತ್ತಿರುವ ಸಾವಿರಾರು ಕಾರ್ಮಿಕರು ಸಿಡಿದೆದ್ದಿದ್ದಾರೆ. 12 ಗಂಟೆಗಳ ಕಾಲ ಕೆಲಸ ಮಾಡಬೇಕೆಂಬ ನೀತಿಯ ವಿರುದ್ಧ ಸೋಮವಾರದಿಂದ (ಫೆ.3) ಬೃಹತ್ ಮುಷ್ಕರ ಆರಂಭಿಸಿದ್ದಾರೆ. ನಿಗದಿತ 8 ಗಂಟೆಗಳ ಕೆಲಸದ ಬದಲು 12 ಗಂಟೆಗಳ ಕಾಲ ಕೆಲಸ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಈ ಕಾರ್ಮಿಕರ ವಿರೋಧಿ ಧೋರಣೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಮುಷ್ಕರ ನಡೆಸುತ್ತಿರುವ ಹೆಚ್ಚಿನ ಕಾರ್ಮಿಕರು ಸಾರ್ವಜನಿಕ ವಲಯದ ದೈತ್ಯ ಸಂಸ್ಥೆ ‘ಇಂಡಿಯನ್ ಆಯಿಲ್ ಕಾರ್ಪೊರೇಷನ್’ (ಐಒಸಿ) ಒಡೆತನದ ತೈಲ ಸಂಸ್ಕರಣಾಗಾರ ಮತ್ತು ಪೆಟ್ರೋಕೆಮಿಕಲ್ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪಾಣಿಪತ್‌ನಲ್ಲಿರುವ ಘಟಕವು ದಕ್ಷಿಣ ಏಷ್ಯಾದಲ್ಲಿಯೇ ಅತಿದೊಡ್ಡ ಸಂಸ್ಕರಣಾಗಾರಗಳಲ್ಲಿ ಒಂದಾಗಿದೆ. ಇದೀಗ, ಈ ಘಟಕದಲ್ಲಿನ ಕಾರ್ಮಿಕರಿಗೆ ಪ್ರತಿದಿನ 12 ಗಂಟೆಗಳ ಕಾಲ ಕೆಲಸ ಮಾಡುವಂತೆ ಒತ್ತಾಯಿಸಲಾಗುತ್ತಿದೆ.
ಸಂಸ್ಥೆಯ ಕಾರ್ಮಿಕರ ವಿರೋಧಿ ನೀತಿಯ ವಿರುದ್ಧ ಘಟಕದ ಸಾವಿರಾರು ಕಾರ್ಮಿಕರು ಬೀದಿಗಿಳಿದಿದ್ದಾರೆ. ದಿನಕ್ಕೆ 12 ಗಂಟೆಗಳ ಕಾಲ ದುಡಿಯಬೇಕೆಂಬ ನೀತಿಯನ್ನು ಹಿಂಪಡೆಯಬೇಕು, ವೇತನವನ್ನು ನಿಯಮಿತವಾಗಿ ಮತ್ತು ಸಕಾಲಿಕವಾಗಿ ಪಾವತಿಸಬೇಕು, ಸಾಪ್ತಾಹಿಕ ರಜಾದಿನಗಳು ಹಾಗೂ ಕೆಲಸದ ಸ್ಥಳದಲ್ಲಿ ಹಲವಾರು ಸುಧಾರಣೆಗಳನ್ನು ತರಬೇಕು ಎಂದು ಒತ್ತಾಯಿಸಿ ಅನಿರ್ಧಿಷ್ಠಾವಧಿ ಧರಣಿ ನಡೆಸುತ್ತಿದ್ದಾರೆ. ಕಾರ್ಮಿಕರ ಮುಷ್ಕರಕ್ಕೆ ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು), ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಹಾಗೂ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ನಂತಹ ಹಲವಾರು ಪ್ರಮುಖ ಕಾರ್ಮಿಕ ಸಂಘಗಳು ಬೆಂಬಲ ನೀಡಿವೆ.
ಸಾರ್ವಜನಿಕ ತೈಲ ಉದ್ದಿಮೆಗಳಲ್ಲಿ ದುಡಿಯುತ್ತಿರುವ ಹಲವಾರು ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿಲ್ಲ. ಕಾರ್ಮಿಕರ ಭವಿಷ್ಯ ನಿಧಿಗಳು (ಕಡ್ಡಾಯ ಮತ್ತು ಸರ್ಕಾರಿ ಬೆಂಬಲಿತ ನಿವೃತ್ತಿ ಉಳಿತಾಯ) ನಂತಹ ಮೂಲಭೂತ ಕಾನೂನು ರಕ್ಷಣೆಗಳಿಂದ ವಂಚಿಸಲಾಗಿದೆ ಎಂದು ಧರಣಿನಿರತ ಕಾರ್ಮಿಕರು ಆರೋಪಿಸಿದ್ದಾರೆ.
ಶಾಂತಿಯುತ ಮುಷ್ಕರವನ್ನು ಹತ್ತಿಕ್ಕಲು ಆಡಳಿತವು ಬಲಪ್ರಯೋಗ ನಡೆಸಿದೆ. ಸೋಮವಾರ, ಘಟಕದ ಮುಖ್ಯದ್ವಾರವನ್ನು ಮುಚ್ಚಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರನ್ನು ಬೆದರಿಸಲು ಭದ್ರತಾ ಸಿಬ್ಬಂದಿಗಳಿಂದ ದಾಳಿ ನಡೆಸಿದೆ. ಭದ್ರತಾ ಸಿಬ್ಬಂದಿಗಳು ನಡೆಸಿದ ದಾಳಿಯಲ್ಲಿ ಹಲವಾರು ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಧರಣಿ ನಿರತರು ಹೇಳಿದ್ದಾರೆ.
ಯಾವುದೇ ಬಲಪ್ರಯೋಗಕ್ಕೆ ಮಣಿಯದ ಕಾರ್ಮಿಕರು ತಮ್ಮ ಮುಷ್ಕರವನ್ನು ಮುಂದುವರೆಸಿದ್ದಾರೆ. ಇದೀಗ, ಆಡಳಿತ ಮಂಡಳಿ ಮತ್ತು ಕಾರ್ಮಿಕರ ಪ್ರತಿನಿಧಿಗಳ ನಡುವೆ ವಿವಿಧ ಸುತ್ತಿನ ಮಾತುಕತೆಗಳನ್ನು ನಡೆಯುತ್ತಿವೆ.
ಬುಧವಾರ, ಕಾರ್ಮಿಕರು ಎತ್ತಿದ ಎಲ್ಲ ಬೇಡಿಕೆಗಳಿಗೆ ಒಪ್ಪಿಕೊಂಡಿರುವುದಾಗಿ ಆಡಳಿತ ಮಂಡಳಿ ಹೇಳಿಕೊಂಡಿದೆ. ಆದರೆ, ಆ ಬಗ್ಗೆ ಆಡಳಿತ ಮಂಡಳಿಯು ಲಿಖಿತ ಭರವಸೆ ನೀಡುವವರೆಗೆ ಮುಷ್ಕರ ನಿಲ್ಲುವುದಿಲ್ಲವೆಂದು ಕಾರ್ಮಿಕರು ಹೇಳಿದ್ದಾರೆ.
ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಸಿಐಟಿಯು, “ಪಾಣಿಪತ್‌ನ ಧರಣಿನಿರತ ಸ್ಥಳದ ಚಿತ್ರಗಳು ಮತ್ತು ವೀಡಿಯೊಗಳು ದೇಶಾದ್ಯಂತ ಕಾರ್ಮಿಕ ವರ್ಗದಲ್ಲಿ ದೃಢನಿಶ್ಚಯ ಮತ್ತು ಭರವಸೆಯನ್ನು ಹುಟ್ಟುಹಾಕಿದೆ. ಈ ಹೋರಾಟವು ದೇಶಾದ್ಯಂತ ಹರಡಲಿದೆ” ಎಂದು ಹೇಳಿದೆ.
ಈ ಲೇಖನ ಓದಿದ್ದೀರಾ?: ಕೇಂದ್ರದ ಜಾತಿವಾರು ಸಮೀಕ್ಷೆಯಲ್ಲಿ ಅಲೆಮಾರಿಗಳ ಪ್ರಶ್ನೆ
ಗುರುವಾರ, ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿರುವ ಸಿಐಟಿಯು ಹರಿಯಾಣ ರಾಜ್ಯ ನಾಯಕ ಜೈ ಭಗವಾನ್, “ಕೋರ್ಪರೇಟ್ ಪರವಾಗಿರುವ ಸರ್ಕಾರವು ಕಾರ್ಮಿಕರ ಹಕ್ಕುಗಳನ್ನು ದಮನ ಮಾಡುತ್ತಿದೆ. ಪಾಣಿಪತ್ ಹೋರಾಟವನ್ನು ‘ಪ್ರತ್ಯೇಕ’ ಘಟನೆಯಾಗಿ ನೋಡಬಾರದು, ಬದಲಿಗೆ ಇದು ದೇಶಾದ್ಯಂತ ನಡೆಯಲಿರುವ ಕಾರ್ಮಿಕರ ಹೋರಾಟದ ಪ್ರತಿರೋಧದ ಭಾಗವಾಗಿದೆ” ಎಂದು ಹೇಳಿದ್ದಾರೆ.
ನಾಲ್ಕು ಹೊಸ ಕಾರ್ಮಿಕ ನೀತಿಗಳು ಕೆಲಸದ ಅವಧಿಯ ವಿಸ್ತರಿಸುತ್ತವೆ, ಗುತ್ತಿಗೆ ಪದ್ಧತಿಯನ್ನು ಸಾಮಾನ್ಯಗೊಳಿಸುತ್ತವೆ, ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುತ್ತವೆ, ಮುಷ್ಕರ ನಡೆಸುವ ಹಕ್ಕನ್ನು ದಮನಿಸುತ್ತವೆ ಎಂದು ಭಗವಾನ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಮತ್ತು ಇತರ ಪ್ರತಿಗಾಮಿ ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಗಳ (CTU) ಒಕ್ಕೂಟದ ಬ್ಯಾನರ್ ಅಡಿಯಲ್ಲಿ ದೇಶದ ಎಲ್ಲ ಪ್ರಮುಖ ಕಾರ್ಮಿಕ ಸಂಘಟನೆಗಳು ಫೆಬ್ರವರಿ 12 ರಂದು ರಾಷ್ಟ್ರೀಯ ಮುಷ್ಕರಕ್ಕೆ ಕರೆ ನೀಡಿದ್ದವು.




