13 ವರ್ಷದ ದಲಿತ ಬಾಲಕಿಯ ಮೇಲೆ ಯುವಕನೋರ್ವ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಫರ್ಸತ್‌ಗಂಜ್ ಪ್ರದೇಶದಲ್ಲಿ ನಡೆದಿದೆ ಎಂದು ಬುಧವಾರ ಪೊಲೀಸರು ಮಾಹಿತಿ ನಿಡಿದ್ದಾರೆ. ಡಿಸೆಂಬರ್ 30ರಂದು ಬಾಲಕಿ ಹೊಲಕ್ಕೆ ಹೋಗಿದ್ದಾಗ ದುಷ್ಕರ್ಮಿ ಈ ಕೃತ್ಯವನ್ನು ಎಸಗಿದ್ದಾರೆ ಎಂದು ವರದಿಯಾಗಿದೆ.
ಅದೇ ಗ್ರಾಮದ ಯುವಕನೊಬ್ಬ ಆಕೆಯನ್ನು ಕೊಳವೆ ಬಾವಿ ಬಳಿ ಎಳೆದೊಯ್ದು ಅತ್ಯಾಚಾರ ಎಸಗಿ, ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಭಯಗೊಂಡ ಬಾಲಕಿ ಮನೆಗೆ ಹಿಂತಿರುಗಿ ತನ್ನ ತಾಯಿಗೆ ತಿಳಿಸಿದ್ದು, ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನು ಓದಿದ್ದೀರಾ? ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; 42 ಆರೋಪಿಗಳ ಬಂಧನ
ಈ ಬಗ್ಗೆ ಮಾಹಿತಿ ನೀಡಿದ ಫರ್ಸತ್‌ಗಂಜ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ನಂದ್ ಹೌಸ್ಲಾ ಯಾದವ್, “ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆತನನ್ನು ಬಂಧಿಸಲು ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆತನ ಬಂಧನ ಮಾಡಲಾಗುವುದು” ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಗಳ ಪ್ರಕಾರ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಹಾಗೆಯೇ ದೇಶದಲ್ಲೇ ಅಧಿಕ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿರುವ ರಾಜ್ಯ ಉತ್ತರ ಪ್ರದೇಶವಾಗಿದೆ. ಇತ್ತೀಚಿನ(2023) ಎನ್‌ಸಿಆರ್‌ಬಿ ದತ್ತಾಂಶದ ಪ್ರಕಾರ ಉತ್ತರ ಪ್ರದೇಶದಲ್ಲಿ 66,381 ಮಹಿಳಾ ವಿರೋಧಿ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.
ಅದರಲ್ಲೂ ದಲಿತ ಮಹಿಳೆಯರ, ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದ ರಾಜ್ಯಗಳ ಪಟ್ಟಿಯಲ್ಲಿಯೂ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ! 2025ರ ಮೊದಲ ಆರು ತಿಂಗಳಲ್ಲಿ (ಜನವರಿಯಿಂದ ಜೂನ್) ಯೋಗಿ ಆದಿತ್ಯನಾಥ್ ಆಡಳಿತದ ರಾಜ್ಯದಲ್ಲಿ ಸುಮಾರು 34 ಜಾತಿ ಆಧಾರಿತ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.





