ಉತ್ತರ ಪ್ರದೇಶದ ನೋಯ್ಡಾದಲ್ಲಿ ಪ್ರೇಮಿಗಳ ದಿನದಂದೇ (ವ್ಯಾಲೆಂಟೈನ್ಸ್ ಡೇ) ಕಾರಿನೊಳಗೆ ಶವವಾಗಿ ಪತ್ತೆಯಾದ ಸುಮಿತ್ ಮತ್ತು ರೇಖಾ ಅವರ ಸಾವಿನ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. 15 ವರ್ಷಗಳ ಸುದೀರ್ಘ ಪ್ರೀತಿಯ ನಂತರ ಈ ಜೋಡಿ ದುರಂತ ಅಂತ್ಯ ಕಂಡಿದ್ದು, ಸಾವಿಗೂ ಮುನ್ನ ಸುಮಿತ್ ಬರೆದಿದ್ದಾನೆ ಎನ್ನಲಾದ ಒಂದು ‘ವಾಟ್ಸಾಪ್ ಮೆಸೇಜ್’ ಈಗ ತನಿಖೆಯ ದಿಕ್ಕನ್ನೇ ಬದಲಿಸಿದೆ. ಪೊಲೀಸರು ಇದೊಂದು ಆತ್ಮಹತ್ಯೆ ಎಂದು ಶಂಕಿಸಿದ್ದರೆ, ಮೃತರ ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪಿಸುತ್ತಿದ್ದಾರೆ
ಮೃತರನ್ನು ದೆಹಲಿಯ ತ್ರಿಲೋಕಪುರಿ ನಿವಾಸಿ ಸುಮಿತ್ (32) ಮತ್ತು ನೋಯ್ಡಾದ ಸೆಕ್ಟರ್ 101ರ ನಿವಾಸಿ ರೇಖಾ (26) ಎಂದು ಗುರುತಿಸಲಾಗಿದೆ. ಶನಿವಾರದಂದು ಸೆಕ್ಟರ್ 107ರ ಸಮೀಪವಿರುವ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರಿನೊಳಗೆ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಇಬ್ಬರ ದೇಹಗಳ ಮೇಲೂ ಗುಂಡೇಟಿನ ಗಾಯಗಳಿದ್ದು, ಕಾರು ಒಳಗಿನಿಂದ ಲಾಕ್ ಆಗಿತ್ತು. ಸುಮಿತ್ ಕೈಯಲ್ಲಿ ಪಿಸ್ತೂಲು ಪತ್ತೆಯಾಗಿರುವುದರಿಂದ, ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣದಂತೆ ಕಂಡುಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ 3.39ಕ್ಕೆ ಸುಮಿತ್ ಟೈಪ್ ಮಾಡಿದ್ದಾನೆ ಎನ್ನಲಾದ ವಾಟ್ಸಾಪ್ ಸಂದೇಶವನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಆ ಸಂದೇಶದಲ್ಲಿ, “ನಾನು ಮತ್ತು ರೇಖಾ ಕಳೆದ 15 ವರ್ಷಗಳಿಂದ ಪ್ರೀತಿಸುತ್ತಿದ್ದೆವು ಮತ್ತು ಮದುವೆಯಾಗಲು ನಿರ್ಧರಿಸಿದ್ದೆವು. ಆದರೆ ರೇಖಾ ಇತ್ತೀಚೆಗೆ ಬೇರೆಯವರನ್ನು ಮದುವೆಯಾಗಲು ನಿರ್ಧರಿಸಿದ್ದಾಳೆ,” ಎಂದು ಬರೆಯಲಾಗಿದ್ದು, ಈ ಬೆಳವಣಿಗೆಯೇ ತಾನು ಅಂತಿಮ ನಿರ್ಧಾರ ತೆಗೆದುಕೊಳ್ಳಲು ಕಾರಣ ಎಂದು ಉಲ್ಲೇಖಿಸಲಾಗಿದೆ. ಆದರೆ, ಈ ಸಂದೇಶವನ್ನು ಯಾರಿಗಾದರೂ ಕಳುಹಿಸಲಾಗಿದೆಯೇ ಅಥವಾ ಅದು ಡ್ರಾಫ್ಟ್ ರೂಪದಲ್ಲಿ ಉಳಿದಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇದನ್ನು ಓದಿದ್ದೀರಾ? ಬ್ಯಾಟ್ ಬೀಸಿದ ‘ಫಿನಿಶರ್’ಗೆ ಕ್ಲೀನ್ ಬೌಲ್ಡ್ ಆದ ಸಂಸದೆ
ಈ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು, ಎರಡೂ ಕುಟುಂಬಗಳು ಭಿನ್ನ ಹೇಳಿಕೆಗಳನ್ನು ನೀಡಿವೆ. ಪೊಲೀಸರ ಆತ್ಮಹತ್ಯೆ ವರದಿಯನ್ನು ಸುಮಿತ್ ಕುಟುಂಬದವರು ತಳ್ಳಿಹಾಕಿದ್ದಾರೆ. “ಇಬ್ಬರನ್ನೂ ಜಾತಿ ದ್ವೇಷದ ಕಾರಣದಿಂದ ಕೊಲೆ ಮಾಡಲಾಗಿದೆ. ಇಬ್ಬರೂ 10 ವರ್ಷಕ್ಕೂ ಹೆಚ್ಚು ಕಾಲ ಒಟ್ಟಿಗೆ ಇದ್ದರು ಮತ್ತು ಅವರ ಸಂಬಂಧದ ಬಗ್ಗೆ ಎರಡೂ ಕುಟುಂಬಗಳಿಗೆ ತಿಳಿದಿತ್ತು. ರೇಖಾ ನಮ್ಮ ಮನೆಯ ಹಲವಾರು ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾಳೆ,” ಎಂದು ಸುಮಿತ್ ಸಂಬಂಧಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ, ಸುಮಿತ್ ಕುಟುಂಬಕ್ಕೆ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದವು ಎಂದೂ ಅವರು ಆರೋಪಿಸಿದ್ದಾರೆ.
ರೇಖಾ ಕುಟುಂಬದವರು ಬೇರೆಯದೇ ಆಯಾಮವನ್ನು ತೆರೆದಿಟ್ಟಿದ್ದಾರೆ. ಸುಮಿತ್ ಈ ಹಿಂದೆ ರೇಖಾಳಿಗೆ ಕಿರುಕುಳ ನೀಡಿದ್ದ ಮತ್ತು ಈ ಬಗ್ಗೆ ದೂರು ನೀಡಲಾಗಿತ್ತು, ನಂತರ ಸುಮಿತ್ ಕ್ಷಮೆ ಕೇಳಿದ ಮೇಲೆ ವಿವಾದ ಬಗೆಹರಿದಿತ್ತು ಎಂದು ಅವರು ಹೇಳಿದ್ದಾರೆ. ಇಬ್ಬರ ಜಾತಿ ಬೇರೆಯಾಗಿದ್ದರಿಂದ ರೇಖಾ ಮನೆಯವರು ಆಕೆಗೆ ಬೇರೆಡೆ ಮದುವೆ ನಿಗದಿಪಡಿಸಿದ್ದರು. ಈ ಕಾರಣದಿಂದ ಇತ್ತೀಚೆಗೆ ಅವರ ಸಂಬಂಧ ಹಳಸಿತ್ತು. ಅಲ್ಲದೆ, ತಮ್ಮ ಗ್ರಾಮವಾದ ಸಾಲಾರ್‌ಪುರದಿಂದ ಕೇವಲ ಕೆಲವು ನೂರು ಮೀಟರ್‌ಗಳ ದೂರದಲ್ಲಿ ಕಾರು ಪತ್ತೆಯಾಗಿರುವುದು ಸಂಶಯಾಸ್ಪದವಾಗಿದೆ ಎಂದು ರೇಖಾ ಸಹೋದರ ಆರೋಪಿಸಿದ್ದಾರೆ.
ಸುಮಿತ್ ಕೈಯಲ್ಲಿ ಪಿಸ್ತೂಲು ಸಿಕ್ಕಿರುವುದು ಮತ್ತು ಕಾರು ಒಳಗಿನಿಂದ ಲಾಕ್ ಆಗಿರುವುದು ಆತ್ಮಹತ್ಯೆಯ ಕಡೆಗೆ ಬೊಟ್ಟು ಮಾಡುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಂಡಗಳು ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿನ ನೈಜ ಕಾರಣ ತಿಳಿಯಲಿದೆ. ಎರಡೂ ಕುಟುಂಬಗಳ ಆರೋಪಗಳನ್ನು ಒಳಗೊಂಡಂತೆ ಎಲ್ಲಾ ಆಯಾಮಗಳಿಂದಲೂ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.





