ಭಾರತ ಮತ್ತು ಅಮೆರಿಕ ನಡುವಿನ ವಾಣಿಜ್ಯ ಒಪ್ಪಂದದ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಸ್ತಾವಿತ ಒಪ್ಪಂದದ ಸ್ವರೂಪವು ಭಾರತದ ಹಿತಾಸಕ್ತಿಗೆ ಮಾರಕವಾಗಿದ್ದು, ಇದರಿಂದ ದೇಶದ ಹತ್ತಿ ಬೆಳೆಗಾರರು ಮತ್ತು ಒಟ್ಟಾರೆ ಜವಳಿ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, ‘18% ವರ್ಸಸ್ 0% ಸುಂಕ’ದ ನೀತಿಯನ್ನು ಪ್ರಶ್ನಿಸುವ ಮೂಲಕ ಅವರು ಸರ್ಕಾರದ ಆರ್ಥಿಕ ಕಾರ್ಯತಂತ್ರವನ್ನು ಟೀಕಿಸಿದ್ದಾರೆ.
ಭಾರತೀಯ ಜವಳಿ ಮತ್ತು ಸಿದ್ಧ ಉಡುಪುಗಳು ಅಮೆರಿಕಕ್ಕೆ ರಫ್ತಾಗುವಾಗ ಅಲ್ಲಿನ ಮಾರುಕಟ್ಟೆಯಲ್ಲಿ ಸುಮಾರು ಶೇ. 18ರಷ್ಟು ಆಮದು ಸುಂಕವನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ ಭಾರತದ ಉತ್ಪನ್ನಗಳು ದುಬಾರಿಯಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಯನ್ನು ಕಳೆದುಕೊಳ್ಳುತ್ತವೆ. ಆದರೆ, ಇದಕ್ಕೆ ಪ್ರತಿಯಾಗಿ ಅಮೆರಿಕದ ಹೂಡಿಕೆದಾರರಿಗೆ ಅಥವಾ ಉತ್ಪನ್ನಗಳಿಗೆ ಭಾರತದಲ್ಲಿ ಶೂನ್ಯ (0%) ಸುಂಕದ ಲಾಭ ಅಥವಾ ವಿಶೇಷ ರಿಯಾಯಿತಿ ದೊರೆಯುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಈ ತಾರತಮ್ಯದ ನೀತಿಯು ದೇಶೀಯ ಉತ್ಪಾದನೆಗೆ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆಸ್ಪತ್ರೆಯಲ್ಲಿ ರಕ್ತಪೂರಣ ಮಾಡಿಸಿಕೊಳ್ತೀರಲ್ಲ, ಆಗ ಜಾತಿ ಯಾಕೆ ಮುಖ್ಯ ಆಗುವುದಿಲ್ಲ?
ಈ ಒಪ್ಪಂದವು ಕೇವಲ ಆರ್ಥಿಕ ಅಸಮತೋಲನವಷ್ಟೇ ಅಲ್ಲ, ರೈತರಿಗೂ ಮಾರಕವಾಗಬಲ್ಲದು ಎಂದು ಎಚ್ಚರಿಸಿರುವ ರಾಹುಲ್ ಗಾಂಧಿ, ವಿದೇಶಿ ಹತ್ತಿ ಅಥವಾ ಸಂಬಂಧಿತ ಉತ್ಪನ್ನಗಳು ಸುಲಭವಾಗಿ ಮತ್ತು ಕಡಿಮೆ ದರದಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಿದರೆ, ದೇಶೀಯ ಹತ್ತಿ ಬೆಳೆಗಾರರಿಗೆ ತಮ್ಮ ಬೆಳೆಗೆ ಸೂಕ್ತ ಬೆಲೆ ಸಿಗುವುದು ಕಷ್ಟವಾಗುತ್ತದೆ.
ಈಗಾಗಲೇ ಚೀನಾ, ಬಾಂಗ್ಲಾದೇಶ ಮತ್ತು ವಿಯೆಟ್ನಾಂನಂತಹ ದೇಶಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಎದುರಿಸುತ್ತಿರುವ ಭಾರತದ ಜವಳಿ ಉದ್ಯಮಕ್ಕೆ, ಅಮೆರಿಕದ ಮಾರುಕಟ್ಟೆಯಲ್ಲಿ ಸುಂಕ ರಿಯಾಯಿತಿ ಪಡೆಯಲು ಸರ್ಕಾರ ವಿಫಲವಾಗಿರುವುದು ದೊಡ್ಡ ಹಿನ್ನಡೆಯಾಗಿದೆ. ಇದು ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳನ್ನು ಬಲಹೀನಗೊಳಿಸಿ, ಕೇವಲ ಬೃಹತ್ ವಿದೇಶಿ ಕಂಪನಿಗಳಿಗೆ ಲಾಭ ಮಾಡಿಕೊಡುವ ತಂತ್ರವಾಗಿದೆ ಎಂದು ಹೇಳಿದ್ದಾರೆ.





