ವಾಣಿಜ್ಯ ನಗರಿ ಮುಂಬೈಗೆ ಬಂದಿಳಿದ ವಿದೇಶಿ ಪ್ರವಾಸಿಗರೊಬ್ಬರಿಂದ ಟ್ಯಾಕ್ಸಿ ಚಾಲಕನೊಬ್ಬ ಕೇವಲ 400 ಮೀಟರ್ ದೂರದ ಹೋಟೆಲ್‌ಗೆ ಕರೆದೊಯ್ಯಲು ಬರೋಬ್ಬರಿ 18,000 ರೂಪಾಯಿ (200 ಡಾಲರ್) ವಸೂಲಿ ಮಾಡಿರುವ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ವಿದೇಶಿ ಪ್ರವಾಸಿಗರೊಬ್ಬರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ (ಟ್ವಿಟರ್) ತಮ್ಮ ಕಹಿ ಅನುಭವವನ್ನು ಹಂಚಿಕೊಂಡ ನಂತರ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತ ಮಹಿಳೆ ಪೋಸ್ಟ್ ಮಾಡಿರುವ ಪ್ರಕಾರ, ಅವರು ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅಲ್ಲಿಂದ ಸಮೀಪದ ‘ಹಿಲ್ಟನ್ ಹೋಟೆಲ್’ಗೆ ತೆರಳಲು ಟ್ಯಾಕ್ಸಿ ಒಂದನ್ನು ಬಾಡಿಗೆಗೆ ಪಡೆದರು.
ಆದರೆ, ಟ್ಯಾಕ್ಸಿ ಚಾಲಕ ಮತ್ತು ಆತನೊಂದಿಗಿದ್ದ ಮತ್ತೊಬ್ಬ ವ್ಯಕ್ತಿ ಅವರನ್ನು ನೇರವಾಗಿ ಹೋಟೆಲ್‌ಗೆ ಕರೆದೊಯ್ಯುವ ಬದಲು, ದಾರಿ ತಪ್ಪಿಸಿ ಅಪರಿಚಿತ ಸ್ಥಳವೊಂದಕ್ಕೆ ಕರೆದೊಯ್ದಿದ್ದಾರೆ. ಅಂತಿಮವಾಗಿ ವಿಮಾನ ನಿಲ್ದಾಣದಿಂದ ಕೇವಲ 400 ಮೀಟರ್ ದೂರದಲ್ಲಿದ್ದ ಹೋಟೆಲ್‌ಗೆ ತಲುಪಿಸಿ, ಪ್ರಯಾಣ ದರದ ಹೆಸರಿನಲ್ಲಿ 200 ಡಾಲರ್ (ಅಂದಾಜು ₹18,000) ಹಣವನ್ನು ಪೀಕಿಸಿದ್ದಾರೆ ಎಂದು ಆರೋಪಿಸಲಾಗಿದೆ. ವಂಚನೆ ಎಸಗಿದ ಟ್ಯಾಕ್ಸಿ ಸಂಖ್ಯೆ MH 01 BD 5405 ಎಂದು ಸಂತ್ರಸ್ತರು ಉಲ್ಲೇಖಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮನೆಮುರುಕ ಮಹಾ‘ನಾಯಕ’ ಮೊದಲಿಗನಲ್ಲ, ಕಡೆಯವನೂ ಆಗಿರುವುದಿಲ್ಲ!
ವೈರಲ್ ಆಗಿರುವ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸರು, “ನಾವು ನಿಮ್ಮನ್ನು ಫಾಲೋ ಮಾಡಿದ್ದೇವೆ. ದಯವಿಟ್ಟು ನಿಮ್ಮ ಸಂಪರ್ಕ ವಿವರಗಳನ್ನು ಡಿಎಂ (Direct Message) ಮೂಲಕ ಹಂಚಿಕೊಳ್ಳಿ,” ಎಂದು ಸೂಚಿಸಿದ್ದಾರೆ. ಆದರೆ, ಚಾಲಕನ ವಿರುದ್ಧ ಈವರೆಗೆ ಯಾವ ರೀತಿಯ ಶಿಸ್ತು ಕ್ರಮ ಜರುಗಿಸಲಾಗಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಈ ಘಟನೆಯು ಮುಂಬೈ ಹಾಗೂ ಭಾರತದ ಪ್ರವಾಸೋದ್ಯಮದ ಘನತೆಗೆ ಧಕ್ಕೆ ತರುವಂತಿದೆ ಎಂದು ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ”ಇದು ಮಹಾರಾಷ್ಟ್ರ ಮತ್ತು ಭಾರತದಲ್ಲಿ ಪ್ರವಾಸಿಗರನ್ನು ನಡೆಸಿಕೊಳ್ಳುವ ರೀತಿಯಲ್ಲ. ಕೂಡಲೇ ಚಾಲಕನ ಪರವಾನಗಿ ರದ್ದುಗೊಳಿಸಿ, ಆತನನ್ನು ಜೈಲಿಗಟ್ಟಬೇಕು. ಪ್ರವಾಸಿಗರು ಪೊಲೀಸ್ ಠಾಣೆಗೆ ಅಲೆಯುವಂತಾಗಬಾರದು, ಆನ್‌ಲೈನ್ ಸಾಕ್ಷ್ಯಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಿ,” ಎಂದು ಬಳಕೆದಾರರೊಬ್ಬರು ಆಗ್ರಹಿಸಿದ್ದಾರೆ.ಇನ್ನೊಬ್ಬರು, “ಓಲಾ ಅಥವಾ ಊಬರ್ ಆಪ್‌ಗಳ ಮೂಲಕ ಬುಕ್ ಮಾಡಿದ್ದರೆ, ನಿಖರವಾದ ದರ ತಿಳಿಯುತ್ತಿತ್ತು,” ಎಂದು ಸಲಹೆ ನೀಡಿದ್ದಾರೆ.





