ಒಂದೇ ದಿನದಲ್ಲಿ ₹15,000 ಏರಿಕೆ ಕಂಡು ಕೆಜಿಗೆ ಬರೋಬ್ಬರಿ ₹2.65 ಲಕ್ಷ ತಲುಪಿ ಬೆಳ್ಳಿ ಸಾರ್ವಕಾಲಿಕ ದಾಖಲೆ ಬರೆದಿದೆ. ಸಾಮಾನ್ಯವಾಗಿ ನಿಧಾನಗತಿಯಲ್ಲೇ ತೆವಳುತ್ತಿದ್ದ ಬಿಳಿ ಲೋಹದ ದರ ಏಕಾಏಕಿ ಇಷ್ಟು ಮೇಲಕ್ಕೆ ಜಿಗಿದಿರುವುದು ಹೂಡಿಕೆದಾರರು ಹಾಗೂ ಆರ್ಥಿಕ ತಜ್ಞರ ಗಮನವನ್ನು ಏಕಕಾಲಕ್ಕೆ ಹಿಡಿದಿಟ್ಟಿದೆ.
ಈ ಅಸಾಧಾರಣ ಏರಿಕೆ ತಾತ್ಕಾಲಿಕ ಉತ್ಸಾಹದ ಫಲವೇ ಅಥವಾ ಜಾಗತಿಕ ಆರ್ಥಿಕ ಸ್ಥಿತಿಗತಿಯಲ್ಲಿನ ಬದಲಾವಣೆಗಳ ಸೂಚನೆಯೇ ಎಂಬ ಪ್ರಶ್ನೆ ಸದ್ಯ ಮಾರುಕಟ್ಟೆಯ ಚರ್ಚೆಯ ವಸ್ತುವಾಗಿದೆ. ಈ ಜಿಗಿತವನ್ನು ಅರ್ಥ ಮಾಡಿಕೊಳ್ಳಲು ಕಳೆದ ಕೆಲ ವರ್ಷಗಳ ಏರಿಳಿತ ಪ್ರವೃತ್ತಿ, ಜಾಗತಿಕ ಬೇಡಿಕೆ ಮತ್ತು ಹೂಡಿಕೆಯ ಮನಸ್ಥಿತಿ ಬದಲಾವಣೆಗಳನ್ನೂ ವಿಶ್ಲೇಷಿಸಬೇಕಿದೆ. ಚಿನ್ನದೊಂದಿಗೇ ಪೈಪೋಟಿಗಿಳಿದಿರುವಂತೆ ಬೆಳ್ಳಿ ತನ್ನ ಬೆಲೆ ಏರಿಸಿಕೊಂಡಿರುವ ಈ ಸಂದರ್ಭ ಹೂಡಿಕೆದಾರರಿಗೆ ಸಕಾಲವಾಗಬಹುದು ಎನ್ನಲಾಗುತ್ತಿದೆ. ಆದರೂ ಹೂಡಿಕೆ ಮಾಡುವ ಮೊದಲು ತಜ್ಞರ ಅಭಿಪ್ರಾಯಗಳು ಮುಖ್ಯವಾಗುತ್ತವೆ.
ಬೆಳ್ಳಿ ಬೆಲೆ ಈ ಪಾಟಿ ಹೆಚ್ಚಾಗಲು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿರುವ ರಾಜಕೀಯ ಬಿಕ್ಕಟ್ಟು ಹಾಗೂ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಕಡಿತ ಮಾಡುವ ನಿರೀಕ್ಷೆಯೇ ಕಾರಣ ಎನ್ನುವುದು ತಜ್ಞರ ಅಭಿಪ್ರಾಯ. ಜಾಗತಿಕ ಅನಿಶ್ಚಿತತೆ ಮತ್ತು ಹೂಡಿಕೆದಾರರ ಮನಸ್ಥಿತಿಯ ಬದಲಾವಣೆ ಬೆಳ್ಳಿ ಧಾರಣೆ ಏರಿಕೆಗೆ ಇನ್ನಷ್ಟು ಬಲ ನೀಡಿದೆ. ಜಾಗತಿಕ ಯುದ್ಧ ಪರಿಸ್ಥಿತಿ, ಬಡ್ಡಿದರ ಕಡಿತದ ನಿರೀಕ್ಷೆಗಳು ಹೂಡಿಕೆದಾರರನ್ನು ಸುರಕ್ಷಿತ ಆಸ್ತಿಗಳತ್ತ ತಳ್ಳಿವೆ. ಹಿಂದೆ ಚಿನ್ನಕ್ಕೆ ಮಾತ್ರ ಸೀಮಿತವಾಗಿದ್ದ ಸುರಕ್ಷಿತ ಹೂಡಿಕೆ ಮನೋಭಾವ ಈಗ ಬೆಳ್ಳಿಯತ್ತವೂ ಹರಿಯುತ್ತಿದೆ. ಜೊತೆಗೆ futures ಹಾಗೂ ETFಗಳ ಮೂಲಕ ನಡೆಯುತ್ತಿರುವ ಊಹಾಪೋಹದ ವಹಿವಾಟುಗಳು ಕಡಿಮೆ ಅವಧಿಯಲ್ಲಿ ದರವನ್ನು ಇನ್ನಷ್ಟು ವೇಗವಾಗಿ ಮೇಲಕ್ಕೆ ಕೊಂಡೊಯ್ದಿವೆ.

ಕೈಗಾರಿಕಾ ಬೇಡಿಕೆಯ ತೀವ್ರ ಹೆಚ್ಚಳವೂ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನಿಸಿದೆ. ಬೆಳ್ಳಿ ಉತ್ಪಾದನೆಯ ಬಹುಪಾಲು ಸೋಲಾರ್ ಪ್ಯಾನಲ್, ಎಲೆಕ್ಟ್ರಿಕ್ ವಾಹನ, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಉದ್ಯಮಗಳಿಗೆ ಹೋಗುತ್ತಿದೆ. ಹಸಿರು ಇಂಧನದತ್ತ ಜಗತ್ತು ಸಾಗುತ್ತಿರುವ ಹಿನ್ನೆಲೆಯಲ್ಲಿ ಈ ಬೇಡಿಕೆ ಮುಂದಿನ ವರ್ಷಗಳಲ್ಲಿಯೂ ಕಡಿಮೆಯಾಗುವ ಸಾಧ್ಯತೆ ಇಲ್ಲ. ಜತೆಗೆ ಜಾಗತಿಕವಾಗಿ ಬೆಳ್ಳಿ ಉತ್ಪಾದನೆ ತಕ್ಷಣ ಹೆಚ್ಚಿಸಲು ಸಾಧ್ಯವಿಲ್ಲದ ಸ್ಥಿತಿ ಇದೆ. ಹೊಸ ಗಣಿಗಳು ಕಡಿಮೆ, ಉತ್ಪಾದನಾ ವೆಚ್ಚವೂ ಹೆಚ್ಚಾಗಿದೆ. ಬೇಡಿಕೆ ಮತ್ತು ಸರಬರಾಜಿನ ಈ ಅಂತರವೇ ಬೆಳ್ಳಿ ಬೆಲೆಯನ್ನು ಮೇಲಕ್ಕೆ ತಳ್ಳುತ್ತಿರುವ ಪ್ರಮುಖ ಕಾರಣ ಎನ್ನುವುದು ವಾಣಿಜ್ಯ ಮಾರ್ಕೆಟ್ಟಿಗರ ವಿಶ್ಲೇಷಣೆ.
ಕಳೆದ 5 ವರ್ಷಗಳಿಂದ ಬೆಳ್ಳಿ ಏರಿಕೆಯ ಹಂತಗಳು
| ವರ್ಷ | ಬೆಳ್ಳಿ ಸರಾಸರಿ ದರ (₹/kg) | ದರದ ಸ್ಥಿತಿ |
| 2021 | ₹62,000 | ಸ್ಥಿರ (ಕಳೆದ ವರ್ಷದಷ್ಟೇ) |
| 2022 | ₹55,000 | ಇಳಿಕೆ |
| 2023 | ₹78,000 | ಪುನಶ್ಚೇತನ, ಏರಿಕೆ |
| 2024 | ₹95,000 | ನಿಧಾನ ಆದರೆ ನಿರಂತರ ಏರಿಕೆ |
| 2025 (ಡಿಸೆಂಬರ್) | ₹2,09,000 | ಭಾರೀ ಜಿಗಿತ |
| 2026 (ಜನವರಿ) | ₹2,65,000 | ಸರ್ವಕಾಲಿಕ ದಾಖಲೆ |
ಕಳೆದ ಐದು ವರ್ಷಗಳ ಬೆಳ್ಳಿ ದರ ಹಂತ ಹಂತವಾಗಿ ದಿಕ್ಕು ಬದಲಿಸಿದೆ. 2021ರಲ್ಲಿ ಸ್ಥಿರವಾಗಿದ್ದ ಬೆಳ್ಳಿ ದರ 2022ರಲ್ಲಿ ಜಾಗತಿಕ ಬಡ್ಡಿದರ ಏರಿಕೆ ಮತ್ತು ಆರ್ಥಿಕ ಸ್ಥಿರತೆಯಿಂದ ಇಳಿಮುಖ ಕಂಡಿತ್ತು. ಆದರೆ 2023ರಿಂದ ಕೈಗಾರಿಕಾ ಬೇಡಿಕೆ ಮತ್ತು ಹೂಡಿಕೆ ಆಸಕ್ತಿ ಮತ್ತೆ ಬಲ ಪಡೆದಂತೆ ಬೆಳ್ಳಿ ಪುನಶ್ಚೇತನಗೊಂಡಿತು. 2024ರವರೆಗೆ ಕಂಡ ಏರಿಕೆ ಕ್ರಮೇಣವಾದರೂ, 2025ರಲ್ಲಿ ಭಾರೀ ಪ್ರಮಾಣದಲ್ಲಿ ಏರಿತು. ಪರಿಣಾಮವಾಗಿ ಒಂದು ವರ್ಷದಲ್ಲೇ ದ್ವಿಗುಣಕ್ಕಿಂತ ಹೆಚ್ಚು ಏರಿಕೆ ಕಂಡು, 2026ರ ಆರಂಭದಲ್ಲಿಯೇ ಸಾರ್ವಕಾಲಿಕ ದಾಖಲೆ ಮಟ್ಟ ತಲುಪಿದೆ. ಈ ಪ್ರವೃತ್ತಿ ಬೆಳ್ಳಿ ಇನ್ನು ಮುಂದೆ ಹೂಡಿಕೆಯ ಪ್ರಮುಖ ಆಸ್ತಿಯಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ.
ಈ ಕುರಿತು ಪ್ರತಿಕ್ರಿಯಿಸಿದ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಮುಖಂಡ ಹಾಗೂ ಆರ್ಥಿಕ ವಿಶ್ಲೇಷಕ ರಾಯಚೂರಿನ ರಜಾಕ್ ಉಸ್ತಾದ್ ಅವರು, “ಇತ್ತೀಚಿನ ದಿನಗಳಲ್ಲಿ ಬಂಗಾರ ಮತ್ತು ಬೆಳ್ಳಿ ಎರಡೂ ಬಡವರು ಹಾಗೂ ಮಧ್ಯಮ ವರ್ಗದ ಕೈಗೆಟುಕದ ಮಟ್ಟಕ್ಕೆ ತಲುಪಿವೆ. ಒಂದು ಕಾಲದಲ್ಲಿ ಮದುವೆ, ಸಮಾರಂಭಗಳ ಅವಿಭಾಜ್ಯವಾಗಿದ್ದ ಬಂಗಾರದ ತಾಳಿ, ಬೆಳ್ಳಿಯ ಆಭರಣಗಳು ಇಂದು ಅನೇಕ ಕುಟುಂಬಗಳಿಗೆ ಭಾರವಾಗಿವೆ. ಬೆಳ್ಳಿ ಕೂಡ ಈಗ ಚಿನ್ನದ ಸಾಲಿಗೆ ಸೇರಿರುವುದು ದೇಶದ ಆರ್ಥಿಕ ದಿವಾಳಿತನದ ಸೂಚನೆ ಎನ್ನಬಹುದು. ಬಂಗಾರ–ಬೆಳ್ಳಿ ದರ ಏರಿಕೆಯ ಮೂಲ ಕಾರಣಗಳಲ್ಲಿ ಇಂಪೋರ್ಟ್–ಎಕ್ಸ್‌ಪೋರ್ಟ್ ನೀತಿಯ ದೋಷ ಮತ್ತು ಡಾಲರ್ ಎದುರು ರೂಪಾಯಿ ದುರ್ಬಲತೆಯೂ ಪ್ರಮುಖವಾಗಿದೆ. ದೇಶದ ಜನಸಂಖ್ಯೆಗೆ ಅನುಗುಣವಾಗಿ ವರ್ಷಕ್ಕೆ ಸುಮಾರು 10 ಟನ್ ಬಂಗಾರ ಉತ್ಪಾದನೆಯಾಗಬೇಕು. ಆದರೆ ಆಗುತ್ತಿರುವುದು ಕೇವಲ 2-3 ಟನ್ ಮಾತ್ರ. ಹಾಗಾಗಿ ಸಹಜವಾಗಿ ಆಮದು ಅವಲಂಬನೆ ಹೆಚ್ಚಾಗಿದೆ”
ಡಾಲರ್ ಎದುರು ರೂಪಾಯಿ ಬಿದ್ದಿರುವುದರಿಂದ ಆಮದು ಸುಂಕ ಹೆಚ್ಚಾಗುತ್ತದೆ. ಈ ನಿಯಮ ಎಲ್ಲಾ ಆಮದು ವಸ್ತುಗಳಿಗೂ ಅನ್ವಯಿಸುತ್ತದೆ. ರೂಪಾಯಿ ಮೌಲ್ಯ ಗಟ್ಟಿಯಾಗದ ಹೊರತು ದರಗಳು ಇಳಿಯುವ ಸಾಧ್ಯತೆ ಕಡಿಮೆ. ಶ್ರೀಮಂತರಿಗೆ ಬೆಲೆ ಏರಿಕೆಯ ಬಿಸಿ ತಟ್ಟದಿದ್ದರೂ, ಬಡವರು ಮತ್ತು ಮಧ್ಯಮ ವರ್ಗಕ್ಕೆ ಇದು ನೇರ ಹೊಡೆತವಾಗುತ್ತಿದೆ. ಇಂದಿನ ಪರಿಸ್ಥಿತಿ ನೋಡಿದರೆ, ಖರೀದಿಸಿ ಹೂಡಿಕೆ ಮಾಡುವುದಕ್ಕಿಂತ ಮಾರುವುದು ಸರಿಯೆನಿಸುತ್ತದೆ. ಬೆಲೆ ಕಡಿಮೆ ಇದ್ದಾಗ ಕೊಳ್ಳುವ ಮತ್ತು ಹೆಚ್ಚಾದಾಗ ಮಾರುವ ತಂತ್ರವೇ ಸೂಕ್ತ. ಜೊತೆಗೆ ಜಾಗತಿಕ ಯುದ್ಧಗಳು ಮತ್ತು ಗಲಭೆಗಳೂ ಮಾರುಕಟ್ಟೆಯನ್ನು ಇನ್ನಷ್ಟು ಅಸ್ಥಿರಗೊಳಿಸುತ್ತವೆ. ಈಗ ಹೂಡಿಕೆ ಮಾಡಿ, ಕೆಲವೇ ದಿನಗಳಲ್ಲಿ ಮತ್ತೆ ದರ ಬಿದ್ದಾಗ ಅಸುರಕ್ಷತೆ ಅನುಭವಿಸುವ ಬದಲು ಯೋಚಿಸುವುದು ಸೂಕ್ತ” ಎಂದು ಸಲಹೆ ನೀಡಿದರು.
ಅರ್ಥಶಾಸ್ತ್ರ ಪ್ರಾಧ್ಯಾಪಕ, ಆರ್ಥಿಕ ವಿಶ್ಲೇಷಕ ಟಿ ಆರ್ ಚಂದ್ರಶೇಖರ್ ಹೀಗೆನ್ನುತ್ತಾರೆ.. “ಭಾರತದಂತಹ ಸಾಂಪ್ರದಾಯಿಕ ದೇಶಗಳಲ್ಲಿ ಬೆಳ್ಳಿ, ಬಂಗಾರ, ಆಭರಗಳ ಮೇಲಿನ ವ್ಯಾಮೋಹ ಎಂದಿಗೂ ಕಡಿಮೆಯಾಗಲ್ಲ. ಬೇಡಿಕೆ ಪ್ರಮಾಣ ನಿರಂತರವಾಗಿ ಏರುತ್ತಲೇ ಇರುತ್ತದೆ. ಕಳೆದ 10-15 ವರ್ಷಗಳಿಂದ ಬ್ಯಾಂಕ್‌ಗಳು ನೀಡುವ ಠೇವಣಿಯ ಬಡ್ಡಿದರಗಳು ಅಷ್ಟೇನೂ ಆಕರ್ಷಕವಾಗಿಲ್ಲ. ತೀರಾ ಕಡಿಮೆ. ಹಾಗಾಗಿ ಹೂಡಿಕೆದಾರರು ತಮ್ಮ ಉಳಿತಾಯವನ್ನು ಆಭರಣಗಳ ಮೇಲೆ ಹೂಡಲು ಮುಂದಾಗುತ್ತಾರೆ. ಪ್ರಸ್ತುತ ಜಗತ್ತೇ ಯುದ್ಧಗಳ ನಡುವೆ ಬದುಕುತ್ತಿದೆ. ರಷ್ಯಾ-ಉಕ್ರೇನ್, ಇಸ್ರೇಲ್-ಹಮಾಸ್ ಸಂಘರ್ಷ, ಬಾಂಗ್ಲಾ, ನೇಪಾಳಗಳ ಆಂತರಿಕ ಅರಾಜಕತೆ ಜಾಗತಿಕವಾಗಿ ಪರಿಣಾಮ ಬೀರುತ್ತಿದೆ. ಎಲ್ಲಿ ಯುದ್ಧದ ವಾತಾವರಣವಿರುತ್ತದೆಯೋ ಅಲ್ಲಿ ಜನ ಶೇರು ಮಾರುಕಟ್ಟೆಗಳಿಗೆ ಬದಲಾಗಿ ಚಿನ್ನ, ಬೆಳ್ಳಿ, ಖನಿಜಗಳಂತಹ ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡುತ್ತಾರೆ”

“ಭಾರತದ ಆರ್ಥಿಕ ಡೋಲಾಯಮಾನ ಸ್ಥಿತಿಯೂ ಈ ಮಟ್ಟಿನ ದರ ಏರಿಕೆಗೆ ಮುಖ್ಯ ಕಾರಣವಾಗಿದೆ. ಈ ಜಾಗತಿಕ ಅನಿಶ್ಚಿತತೆ ಎಲ್ಲಾ ದೇಶಗಳ ಮೇಲೂ ಪರಿಣಾಮ ಬೀರುತ್ತಿದೆ. ಈ ಸಮಯದಲ್ಲಿ ಹೂಡಿಕೆ ಮಾಡುವುದು ಸೂಕ್ತವಲ್ಲ ಎನಿಸುತ್ತದೆ. ಯಾವುದೇ ಹೂಡಿಕೆ ವಸ್ತುವಿನ ಬೆಲೆ ಕಡಿಮೆ ಇದ್ದಾಗ ಕೊಂಡು, ಏರಿದಾಗ ಮಾರುವುದು ಸೂಕ್ತ” ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಚಿನ್ನದ ಆಸೆಬಿಟ್ಟು ಬೆಳ್ಳಿಯ ಬೆನ್ನತ್ತಿದ ಆಭರಣಪ್ರಿಯರು
ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಪ್ರಕಾರ, ಬೆಳ್ಳಿ ಬೆಲೆ ಶೇ.6ರಷ್ಟು ಏರಿಕೆಯಾಗಿ, ಎಲ್ಲಾ ತೆರಿಗೆಗಳನ್ನು ಒಳಗೊಂಡು ಪ್ರತಿ ಕಿಲೋಗೆ ₹2,65,000 ತಲುಪಿದೆ. “ಬಂಗಾರ ಪ್ರತಿ ಔನ್ಸ್‌ಗೆ 4,600 ಡಾಲರ್ ಮಟ್ಟಕ್ಕೆ ಜಿಗಿದರೆ, ಬೆಳ್ಳಿ ತೀವ್ರ ಏರಿಕೆ ಕಂಡು ಪ್ರತಿ ಔನ್ಸ್‌ಗೆ 84 ಡಾಲರ್ ತಲುಪಿದೆ” ಎಂದು ಲೆಮನ್ ಮಾರ್ಕೆಟ್ಸ್ ಡೆಸ್ಕ್‌ನ ಸಂಶೋಧನಾ ವಿಶ್ಲೇಷಕ ಗೌರವ್ ಗರ್ಗ್ ಹೇಳಿದ್ದಾರೆ. “ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಹೆಚ್ಚುತ್ತಿರುವುದು ಮತ್ತು ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಕಡಿತದ ಸಾಧ್ಯತೆಗಳ ನಿರೀಕ್ಷೆ ಹೆಚ್ಚುತ್ತಿರುವ ಹಿನ್ನೆಲೆ, ಬೆಳ್ಳಿ ಹೊಸ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ” ಎಂದು ಆಗ್ಮಾಂಟ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥೆ ರೆನಿಷಾ ಚೈನಾನಿ ತಿಳಿಸಿದ್ದಾರೆ.
ಈ ಮಟ್ಟದ ಬೆಳ್ಳಿ ಧಾರಣೆ ಏರಿಕೆ ಅಸಾಮಾನ್ಯವಾಗಿದ್ದು, ಮುಂದಿನ ದಿನಗಳಲ್ಲಿ ದಿಢೀರ್ ಕುಸಿಯಲೂಬಹುದು ಎನ್ನುವುದು ಇನ್ನೊಂದು ವರ್ಗದ ವಾದ. ಹೂಡಿಕೆದಾರರ ಮನಸ್ಥಿತಿ, ಜಾಗತಿಕ ಅನಿಶ್ಚಿತತೆ, ರಾಜಕೀಯ ಬಿಕ್ಕಟ್ಟುಗಳು ಮತ್ತು ಅಮೆರಿಕದ ಬಡ್ಡಿದರ ನಿರೀಕ್ಷೆಗಳು ಬೆಳ್ಳಿ ದರವನ್ನು ಭಾರೀ ಪ್ರಮಾಣದಲ್ಲಿ ಮೇಲಕ್ಕೆತ್ತಿವೆ. ಇದು ಬಡವರು ಹಾಗೂ ಮಧ್ಯಮ ವರ್ಗದ ಹಿತಾಸಕ್ತಿಗೆ ನೇರ ಹೊಡೆತವಾಗಿದ್ದು, ಖರೀದಿ ಶಕ್ತಿ ಕುಗ್ಗಿದೆ. ಅಸ್ಥಿರ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಕ್ಕಿಂತ, ಬೆಲೆ ಕಡಿಮೆ ಇದ್ದಾಗ ಖರೀದಿಸಿ, ಹೆಚ್ಚಾದಾಗ ಮಾರುವ ಕ್ರಮವನ್ನು ಅನುಸರಿಸಬೇಕೆನ್ನುವ ತಜ್ಞರ ಸಲಹೆಯನ್ನು ಪರಿಗಣಿಸುವುದು ಹೆಚ್ಚು ಸುರಕ್ಷಿತ.





