ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿರುವ ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಆಟಗಾರ್ತಿಯರು ಲೈಂಗಿಕ ದೌರ್ಜನ್ಯಕ್ಕೊಳಗಾದ ಘಟನೆ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.
ಗುರುವಾರ (ಅಕ್ಟೋಬರ್ 23) ದಂದು ಮೋಟಾರ್‌ಸೈಕಲ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಕಿರುಕುಳ ನೀಡಿದ ಘಟನೆ ಇಂದೋರ್‌ನ ಖಜ್ರಾನ ರಸ್ತೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಎರಡು ದಿನಗಳ ಮೊದಲು ಸಂಭವಿಸಿದೆ.
ಪೊಲೀಸರ ಪ್ರಕಾರ, ಆರೋಪಿಯು ಇಬ್ಬರು ಕ್ರಿಕೆಟಿಗರನ್ನು ಹಿಂಬಾಲಿಸಿದ್ದು, ಅವರಲ್ಲಿ ಒಬ್ಬರನ್ನು ಅನುಚಿತವಾಗಿ ಮುಟ್ಟಿದ್ದಾನೆ. ಘಟನೆಯ ಸಮಯದಲ್ಲಿ ಕ್ರಿಕೆಟಿಗರು ರಾಡಿಸನ್ ಬ್ಲೂ ಹೋಟೆಲ್‌ನಿಂದ ಕೆಫೆಗೆ ತೆರಳುತ್ತಿದ್ದರು.
“ಕ್ರಿಕೆಟಿಗರು ಹೋಟೆಲ್‌ನಿಂದ ಕೆಫೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಮೋಟಾರ್‌ಸೈಕಲ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಅವರನ್ನು ಹಿಂಬಾಲಿಸಿದ್ದಾನೆ. ಆತ ಒಬ್ಬ ಕ್ರಿಕೆಟಿಗರನ್ನು ಅನುಚಿತವಾಗಿ ಮುಟ್ಟಿ ಪರಾರಿಯಾಗಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಮೋಟಾರ್‌ಸೈಕಲ್‌ನ ಸಂಖ್ಯೆಯನ್ನು ಒಬ್ಬ ಸಾಕ್ಷಿಯಿಂದ ಗುರುತಿಸಲಾಗಿದ್ದು, ಆ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನು ಓದಿದ್ದೀರಾ? IND vs AUS | ರೋಚಕ ಹಣಾಹಣಿಯಲ್ಲಿ ಸರಣಿ ಸೋತ ಭಾರತ
ಆಟಗಾರ್ತಿಯರು ತಮ್ಮ ತಂಡದ ಭದ್ರತಾ ಅಧಿಕಾರಿ ಡ್ಯಾನಿ ಸಿಮನ್ಸ್‌ಗೆ ಸಂಪರ್ಕಿಸಿದ್ದು, ಅವರು ಸ್ಥಳೀಯ ಭದ್ರತಾ ಸಂಪರ್ಕ ಅಧಿಕಾರಿಗಳೊಂದಿಗೆ ಸಮನ್ವಯಗೊಂಡು ವಾಹನವನ್ನು ಕಳುಹಿಸಿದರು. ಸಹಾಯಕ ಪೊಲೀಸ್ ಆಯುಕ್ತೆ ಹಿಮಾನಿ ಮಿಶ್ರಾ ಕ್ರಿಕೆಟಿಗರನ್ನು ಭೇಟಿಯಾಗಿ, ಅವರ ಹೇಳಿಕೆ ದಾಖಲಿಸಿ, ಎಂಐಜಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 74 (ಮಹಿಳೆಯ ಮಾನಹಾನಿಗೆ ಕಾರಣವಾಗುವ ಕ್ರಿಮಿನಲ್ ಶಕ್ತಿಯ ಬಳಕೆ) ಮತ್ತು 78 (ಹಿಂಬಾಲಿಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಒಂದು ವಾರದಿಂದ ಇಂದೋರ್‌ನಲ್ಲಿದೆ. ಘಟನೆಗೆ ಒಂದು ದಿನ ಮೊದಲು ಬುಧವಾರ ಅವರು ಇಂಗ್ಲೆಂಡ್ ವಿರುದ್ಧ ಆಡಿದ್ದರು. ಆಸ್ಟ್ರೇಲಿಯಾ ತಂಡವು ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದ್ದು, ನಂತರ ಸೆಮಿಫೈನಲ್‌ಗೆ ಗುವಾಹಟಿ ಅಥವಾ ಮುಂಬೈಗೆ ಪ್ರಯಾಣಿಸಲಿದೆ.





