ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕದ ನಡುವೆಯೇ, 92,700 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಎರಡು ಭಾರತೀಯ ಹಡಗುಗಳು ಮಾರ್ಚ್ 16 ಮತ್ತು 17 ರಂದು ಗುಜರಾತ್‌ನ ಬಂದರುಗಳಿಗೆ ಆಗಮಿಸಲಿವೆ. ಇನ್ನೊಂದೆಡೆ, ಪರ್ಷಿಯನ್ ಕೊಲ್ಲಿಯಲ್ಲಿರುವ ಎಲ್ಲ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಹಡಗುಯಾನ ಸಚಿವಾಲಯ ತಿಳಿಸಿದೆ.
“ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿರುವ ಎಲ್ಲ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಹಾರ್ಮುಜ್ ಜಲಸಂಧಿಯ ಪಶ್ಚಿಮಕ್ಕೆ ಪರ್ಷಿಯನ್ ಕೊಲ್ಲಿಯಲ್ಲಿ 24 ಭಾರತೀಯ-ಧ್ವಜದ ಹಡಗುಗಳಿದ್ದವು. ಇವುಗಳಲ್ಲಿ ‘ಶಿವಾಲಿಕ್’ ಮತ್ತು ‘ನಂದಾದೇವಿ’ ಎಂಬ ಎರಡು ಎಲ್‌ಪಿಜಿ ಸಾಗಿಸುವ ಹಡಗುಗಳು ಸೇರಿವೆ,” ಎಂದು ಹಡಗುಯಾನ ಸಚಿವಾಲಯದ ಅಧಿಕಾರಿ ರಾಜೇಶ್ ಕುಮಾರ್ ಸಿನ್ಹಾ ಮಾಹಿತಿ ನೀಡಿದ್ದಾರೆ.
”ಈ ಎರಡೂ ಹಡಗುಗಳು ನಿನ್ನೆ ತಡರಾತ್ರಿ ಅಥವಾ ಇಂದು ಮುಂಜಾನೆ ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದ್ದು, ಪ್ರಸ್ತುತ ಭಾರತದತ್ತ ಪ್ರಯಾಣ ಬೆಳೆಸುತ್ತಿವೆ. ಈ ಹಡಗುಗಳು ಸರಿಸುಮಾರು 92,700 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತು ತರುತ್ತಿದ್ದು, ಮಾರ್ಚ್ 16 ಮತ್ತು 17 ರಂದು ಗುಜರಾತ್‌ನ ಮುಂದ್ರಾ ಮತ್ತು ಕಾಂಡ್ಲಾ ಬಂದರುಗಳನ್ನು ತಲುಪುವ ನಿರೀಕ್ಷೆಯಿದೆ. ಇದರೊಂದಿಗೆ, ಈಗ ಪರ್ಷಿಯನ್ ಕೊಲ್ಲಿಯಲ್ಲಿ 611 ನಾವಿಕರನ್ನು ಒಳಗೊಂಡ 22 ಭಾರತೀಯ ಹಡಗುಗಳು ಮಾತ್ರ ಉಳಿದಿವೆ” ಎಂದು ಅವರು ವಿವರಿಸಿದ್ದಾರೆ.
ಇದನ್ನು ಓದಿದ್ದೀರಾ? ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ
ದೇಶದಲ್ಲಿನ ಇಂಧನ ಲಭ್ಯತೆಯ ಕುರಿತು ಪ್ರತಿಕ್ರಿಯಿಸಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, “ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಕಚ್ಚಾ ತೈಲ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಿಲ್ಲ. ಎಲ್‌ಪಿಜಿ ಪೂರೈಕೆಯ ಬಗ್ಗೆ ಕಳವಳವಿದೆಯಾದರೂ, ಸದ್ಯಕ್ಕೆ ಎಲ್ಲಿಯೂ ಸಂಪೂರ್ಣ ಕೊರತೆಯಾದ ಬಗ್ಗೆ ವರದಿಯಾಗಿಲ್ಲ” ಎಂದು ತಿಳಿಸಿದ್ದಾರೆ.
ತಮಿಳುನಾಡು: ಇಂಡಕ್ಷನ್ ಒಲೆ ಬಳಸುವ ಹೋಟೆಲ್‌ಗಳಿಗೆ ತಲಾ 2 ರೂ. ವಿದ್ಯುತ್ ಸಬ್ಸಿಡಿ
ಫೆಬ್ರವರಿ 28 ರಂದು ಪಶ್ಚಿಮ ಏಷ್ಯಾದಲ್ಲಿ ಆರಂಭವಾದ ಸಂಘರ್ಷದ ಬಳಿಕ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ನಿಭಾಯಿಸಲು ತಮಿಳುನಾಡು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬದಲಿಗೆ ವಿದ್ಯುತ್ (ಇಂಡಕ್ಷನ್) ಒಲೆಗಳಿಗೆ ಬದಲಾಗುವ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಟೀ ಸ್ಟಾಲ್‌ಗಳಿಗೆ ಪ್ರತಿ ಯೂನಿಟ್ ವಿದ್ಯುತ್‌ಗೆ 2 ರೂಪಾಯಿ ಸಬ್ಸಿಡಿ ನೀಡುವುದಾಗಿ ಪ್ರಕಟಿಸಿದೆ.
ಬಿಕ್ಕಟ್ಟು ಆರಂಭವಾದಾಗಿನಿಂದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ನಿರಂತರವಾಗಿ ಪರಿಶೀಲನಾ ಸಭೆಗಳನ್ನು ನಡೆಸುತ್ತಿದ್ದಾರೆ. ಶನಿವಾರ ನಡೆದ ಸಭೆಯಲ್ಲಿ, ಇಂಡಕ್ಷನ್ ಒಲೆಗಳನ್ನು ಬಳಸುವ ಹೋಟೆಲ್‌ಗಳು, ಟೀ ಅಂಗಡಿಗಳು ಮತ್ತು ಕ್ಲೌಡ್ ಕಿಚನ್‌ಗಳು ಬಳಸುವ ಹೆಚ್ಚುವರಿ ವಿದ್ಯುತ್‌ಗೆ ಪ್ರತಿ ಯೂನಿಟ್‌ಗೆ 2 ರೂ. ಸಬ್ಸಿಡಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್, “ಕೇಂದ್ರ ಸರ್ಕಾರವು ಘೋಷಿಸಿರುವ ವಾಣಿಜ್ಯ ಎಲ್‌ಪಿಜಿ ಬಳಕೆಯ ಮೇಲಿನ ನಿರ್ಬಂಧಗಳು ಎಲ್ಲಿಯವರೆಗೆ ಜಾರಿಯಲ್ಲಿರುತ್ತದೆಯೋ, ಅಲ್ಲಿಯವರೆಗೆ ಈ ವಿದ್ಯುತ್ ಸಬ್ಸಿಡಿಯೂ ಚಾಲ್ತಿಯಲ್ಲಿರುತ್ತದೆ,” ಎಂದು ತಿಳಿಸಿದ್ದಾರೆ.





