ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಉದ್ವಿಗ್ನತೆಯ ನಡುವೆ, ಹಾರ್ಮುಜ್ ಜಲಸಂಧಿ ಬಳಿ ಸಿಲುಕಿರುವ ಭಾರತೀಯ ಹಡಗುಗಳಲ್ಲಿರುವ ಇಂಧನ ಪೂರೈಕೆಯ ಬಗ್ಗೆ ಕಳವಳ ವ್ಯಕ್ತವಾಗಿದೆ.
ಬುಧವಾರ ನಡೆದ ಅಂತರ್-ಸಚಿವಾಲಯಗಳ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಅವರು, ಪರ್ಷಿಯನ್ ಕೊಲ್ಲಿಗೆ ಪ್ರವೇಶಿಸುವ ಮಾರ್ಗದಲ್ಲಿರುವ ಭಾರತೀಯ-ಧ್ವಜ ಹೊತ್ತ ಟ್ಯಾಂಕರ್‌ಗಳಲ್ಲಿ ಪ್ರಸ್ತುತ 2 ಲಕ್ಷ ಮೆಟ್ರಿಕ್ ಟನ್ ದ್ರವೀಕೃತ ನೈಸರ್ಗಿಕ ಅನಿಲ (LNG) ಮತ್ತು 16.7 ಲಕ್ಷ ಮೆಟ್ರಿಕ್ ಟನ್ (LMT) ಕಚ್ಚಾ ತೈಲವಿದೆ ಎಂದು ತಿಳಿಸಿರುರುವುದಾಗಿ ದಿ ಹಿಂದೂ ವರದಿ ಮಾಡಿದೆ.
”ಹಾರ್ಮುಜ್ ಜಲಸಂಧಿಯ ಪಶ್ಚಿಮ ಭಾಗದಲ್ಲಿರುವ ಭಾರತೀಯ ಹಡಗುಗಳಲ್ಲಿ ಅಂದಾಜು 2 ಲಕ್ಷ ಮೆಟ್ರಿಕ್ ಟನ್ ಎಲ್ಎನ್‌ಜಿ ಹಾಗೂ 16.7 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲವಿದೆ ಎಂದು ನಮಗೆ ಮಾಹಿತಿ ಲಭಿಸಿದೆ” ಎಂದು ಸಿನ್ಹಾ ವಿವರಿಸಿದರು.
ಇದರ ಜೊತೆಗೆ, ಹಾರ್ಮುಜ್ ಜಲಸಂಧಿಯ ಪಶ್ಚಿಮ ಭಾಗದಲ್ಲಿ ಸಾಗುತ್ತಿರುವ ಹಡಗುಗಳಲ್ಲಿ 3 ಲಕ್ಷ ಮೆಟ್ರಿಕ್ ಟನ್ ಎಲ್‌ಪಿಜಿ ಕೂಡ ಇದೆ. ಪ್ರಸ್ತುತ, ಪರ್ಷಿಯನ್ ಕೊಲ್ಲಿ ಭಾಗದಲ್ಲಿ ಒಟ್ಟು 22 ಹಡಗುಗಳು ಕಾರ್ಯಾಚರಣೆ ನಡೆಸುತ್ತಿವೆ. ಇವುಗಳಲ್ಲಿ ಒಂದು ಟ್ಯಾಂಕರ್ ಎಲ್ಎನ್‌ಜಿ, ನಾಲ್ಕು ಟ್ಯಾಂಕರ್‌ಗಳು ಕಚ್ಚಾ ತೈಲ ಮತ್ತು ಆರು ಟ್ಯಾಂಕರ್‌ಗಳು ಎಲ್‌ಪಿಜಿಯನ್ನು ಸಾಗಿಸುತ್ತಿವೆ.
ಈ ವಾರದ ಆರಂಭದಲ್ಲಿ, ‘ಶಿವಾಲಿಕ್’ ಮತ್ತು ‘ನಂದಾದೇವಿ’ ಎಂಬ ಎರಡು ಎಲ್‌ಪಿಜಿ ವಾಹಕಗಳು ಮುದ್ರಾ ಮತ್ತು ಕಾಂಡ್ಲಾ ಬಂದರುಗಳಿಗೆ ತಮ್ಮ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಈ ಹಡಗುಗಳು ಒಟ್ಟಾರೆಯಾಗಿ ಸುಮಾರು 92,712 ಮೆಟ್ರಿಕ್ ಟನ್ ಅಡುಗೆ ಅನಿಲವನ್ನು ಹೊಂದಿದ್ದವು.
ಇದನ್ನು ಓದಿದ್ದೀರಾ? ಟ್ರಂಪ್‌ಗೆ ಚಿತ್ತಭ್ರಮೆಯೇ?; ಅಮೆರಿಕ ಅಧ್ಯಕ್ಷರ ಮಾನಸಿಕ ಆರೋಗ್ಯದ ಸುತ್ತ ಅನುಮಾನದ ಹುತ್ತ
ಇದರ ಜೊತೆಗೆ, ಕಚ್ಚಾ ತೈಲ ಸಾಗಣೆಯ ಹಡಗು ‘ಜಗ್ ಲಾಡ್ಕಿ’ ಕೂಡ ಬುಧವಾರ ಮುದ್ರಾ ಬಂದರನ್ನು ತಲುಪಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ (ಯುಎಇ) ಸುಮಾರು 81,000 ಮೆಟ್ರಿಕ್ ಟನ್ ಮರ್ಬನ್ ಕಚ್ಚಾ ತೈಲವನ್ನು ಈ ಹಡಗು ಸಾಗಿಸುತ್ತಿತ್ತು. ವಿಶೇಷವೆಂದರೆ, ಫುಜೈರಾ ಟರ್ಮಿನಲ್‌ನಲ್ಲಿ ಕಚ್ಚಾ ತೈಲವನ್ನು ತುಂಬಿಸಿಕೊಳ್ಳುತ್ತಿದ್ದಾಗ ದಾಳಿ ನಡೆದಿದ್ದರೂ, ಈ ಹಡಗು ಸ್ವಲ್ಪದರಲ್ಲೇ ಪಾರಾಗಿತ್ತು.
ಪರ್ಷಿಯನ್ ಕೊಲ್ಲಿ ಪ್ರದೇಶದ ಮೂಲಕ ಹಾದುಹೋಗುವ ಭಾರತೀಯ-ಧ್ವಜ ಹೊತ್ತ ಹಡಗುಗಳಿಗೆ ಬೆಂಗಾವಲು ಒದಗಿಸಲು ಭಾರತೀಯ ನೌಕಾಪಡೆಯು ತನ್ನ ಯುದ್ಧನೌಕೆಗಳನ್ನು ನಿಯೋಜಿಸಿದೆ ಎಂದು ಮೂಲಗಳು ದಿ ಹಿಂದೂಗೆ ತಿಳಿಸಿವೆ. ಈಗಾಗಲೇ ಸುರಕ್ಷಿತವಾಗಿ ತಲುಪಿರುವ ‘ಶಿವಾಲಿಕ್’, ‘ಜಗ್ ಲಾಡ್ಕಿ’ ಮತ್ತು ‘ನಂದಾದೇವಿ’ ಹಡಗುಗಳಿಗೆ ನೌಕಾಪಡೆಯು ಬೆಂಗಾವಲು ಒದಗಿಸಿತ್ತು.





