ನಿರ್ಮಾ ಗ್ರೂಪ್‌ಗೆ ಸೇರಿದ ನುವೋಕೋ ವಿಸ್ಟಾಸ್ ಕಾರ್ಪೊರೇಷನ್ ಕಂಪನಿ, ಕರ್ನಾಟಕ ಜನರಲ್ ಲೇಬರ್ ಯೂನಿಯನ್‌ನ 84 ಕಾರ್ಮಿಕರಿಗೆ ತಲಾ ಲಕ್ಷಾಂತರ ರೂಪಾಯಿ ಬಾಕಿ ಸಂಬಳವನ್ನು ಕೂಡಲೇ ಪಾವತಿಸಬೇಕೆಂದು ಆದೇಶಿಸಿ ನ್ಯಾಯಾಲಯ ಕಾರ್ಮಿಕರ ಪರವಾಗಿ ತೀರ್ಪು ನೀಡಿದೆ. ಬರೋಬ್ಬರಿ 20 ವರ್ಷಗಳ ನಿರಂತರ ಹೋರಾಟದಿಂದ ಸಿಕ್ಕಿರುವ ಗೆಲುವಿದು. ಆದರೆ ಸಂಬಳವಿನ್ನೂ ಕಾರ್ಮಿಕರ ಕೈ ಸೇರಿಲ್ಲ
–The News Minute ವರದಿ
“ಊಟ ಆದ ಮೇಲೆ ಕರಿಬೇವು ಎಸೆದುಬಿಡುವಂತೆ ನಮ್ಮನ್ನು ಬಿಸಾಡಿದ್ದಾರೆ…” ಇದು ಕರ್ನಾಟಕ ಜನರಲ್ ಲೇಬರ್ ಯೂನಿಯನ್ (KGLU) ಸಂಘಟನೆಯ ಕಾರ್ಯದರ್ಶಿ ಹಾಗೂ ಖಜಾಂಚಿ ಮೋಹನ್ ದಾಸ್ ಗಣೇಶನ್ (51) ಹೇಳಿದ ಅವರದೇ ಅಸಹಾಯಕ ಸ್ಥಿತಿಯ ವಿವರಣೆ.
“ವಾಸ್ತವದಲ್ಲಿ ತಮ್ಮಿಂದ ಶಾಶ್ವತ ಕೆಲಸ ಮಾಡಿಸಿಕೊಂಡರೂ ಕೂಡ ʼಕಾಂಟ್ರಾಕ್ಟ್ ಕಾರ್ಮಿಕರುʼ ಎಂದು ಸುಳ್ಳಾಗಿ ತೋರಿಸಲಾಗಿದೆ” ಎಂದು ಆರೋಪಿಸಿ ನಿರ್ಮಾ ಗ್ರೂಪ್‌ಗೆ ಸೇರಿದ ಕಂಪನಿಗಳ ವಿರುದ್ಧ ಮೋಹನ್‌ದಾಸ್ ಸೇರಿದಂತೆ ಈ ಸಂಘಟನೆಯ 84 ಕಾರ್ಮಿಕ ಸದಸ್ಯರಾದ ಸೇರಿ ಕಾನೂನು ಸಮರ ಸಾರಿದರು. ನಿರ್ಮಾ ಗ್ರೂಪ್‌ಗೆ ಸೇರಿದ ನುವೋಕೋ ವಿಸ್ಟಾಸ್ ಕಾರ್ಪೊರೇಷನ್ ಕಂಪನಿಗೆ, ಕರ್ನಾಟಕ ಜನರಲ್ ಲೇಬರ್ ಯೂನಿಯನ್‌ನ 84 ಕಾರ್ಮಿಕರಿಗೆ ತಲಾ ಲಕ್ಷಾಂತರ ರೂಪಾಯಿ ಬಾಕಿ ಸಂಬಳವನ್ನು ಕೂಡಲೇ ಪಾವತಿಸಬೇಕೆಂದು ಆದೇಶಿಸಿ ನ್ಯಾಯಾಲಯ ಕಾರ್ಮಿಕರ ಪರವಾಗಿ ತೀರ್ಪು ನೀಡಿದೆ. ಬರೋಬ್ಬರಿ 20 ವರ್ಷಗಳ ನಿರಂತರ ಹೋರಾಟದಿಂದ ಸಿಕ್ಕಿರುವ ಗೆಲುವಿದು. ಆದರೆ ಈ ತೀರ್ಪು ಅದೇಕೋ ಕಂಪನಿಗೆ ಒಗ್ಗಲಿಲ್ಲ. ನುವೋಕೋ ಈ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.
ಮೋಹಂದಾಸ್ ಗಣೇಶನ್ 2002ರಲ್ಲಿ ಲಾರ್ಸನ್ ಅಂಡ್ ಟೂಬ್ರೋ (L&T) ಕಂಪನಿಗೆ ಸೇರಿದ ರೆಡಿ-ಮಿಕ್ಸ್ ಕಾಂಕ್ರೀಟ್ (RMC) ತಯಾರಿಕಾ ಘಟಕದಲ್ಲಿ ಕೆಲಸಕ್ಕೆ ಸೇರಿದರು. ಆ ಸಮಯದಲ್ಲಿ L&Tಯು ಬೆಂಗಳೂರಿನಲ್ಲಿ 5 ಮತ್ತು ಮೈಸೂರಿನಲ್ಲಿ ಕೇವಲ 1 RMC ಘಟಕಗಳನ್ನು ಮಾತ್ರ ಹೊಂದಿತ್ತು. ಆಗ ಕಾರ್ಮಿಕರಿಗೆ ಸಂಬಳದ ಜತೆಗೆ ವಿಮೆ (ESI) ಮತ್ತು ಭವಿಷ್ಯ ನಿಧಿ (PF)ಗಳನ್ನೂ ಕಂಪನಿಯೇ ಪಾವತಿಸುತ್ತಿತ್ತು.
2000ರ ಆರಂಭದಲ್ಲಿ, ಕಂಪನಿಯು ಕೆಲವು ಕಾರ್ಮಿಕರನ್ನು ಉಪಗುತ್ತಿಗೆದಾರರ (subcontractors) ಮೂಲಕ ನೇಮಕಗೊಂಡವರಂತೆ ತೋರಿಸಲು ಆರಂಭಿಸಿತು. ಮೋಹಂದಾಸ್ ಸೇರಿದಂತೆ ಹಲವರ ಸಂಬಳವು ಈ ಉಪಗುತ್ತಿಗೆದಾರರಿಂದ ಬರುತ್ತಿದೆ ಎಂದು ದಾಖಲೆಗಳಲ್ಲಿ ತೋರಿಸಲಾಯಿತು. ಆದರೆ ಈ ಕಾರ್ಮಿಕರು ಮಾಡುತ್ತಿದ್ದ ಕೆಲಸ, ಶಾಶ್ವತ ಕಾರ್ಮಿಕರು (permanent workers) ಮಾಡುತ್ತಿದ್ದ ಕೆಲಸದಂತೆಯೇ ಇರುತ್ತಿತ್ತು. ಆ ಸಮಯಕ್ಕೆ, L&Tಯ RMC ಘಟಕಗಳಲ್ಲಿ ಕೆಲಸ ಮಾಡುತ್ತಿದ್ದ ಹಲವಾರು ಕಾರ್ಮಿಕರು ಆ ಹೊತ್ತಿಗಾಗಲೇ ಹಲವು ವರ್ಷಗಳ ಸೇವೆ ಸಲ್ಲಿಸಿದ್ದರು.

ಸುಮಾರು 20 ವರ್ಷಗಳ ನಿರಂತರ ಹೋರಾಟದ ಹಾದಿಯನ್ನು ಮೋಹನ್ ದಾಸ್ ನೆನಪಿಸಿಕೊಳ್ಳುವುದು ಹೀಗೆ…
“ನೀವು ಇಡೀ ವರ್ಷ ಕಷ್ಟಪಟ್ಟು ದುಡಿಯುತ್ತೀರಿ. ಏಪ್ರಿಲ್ ಬಂದಾಗ ಸಂಬಳ ಹೆಚ್ಚಾಗಬಹುದೆಂದು ಆಸೆಯ ಕಣ್ಣಿನಿಂದ ಕಾಯುತ್ತಿರುತ್ತೀರಿ. ಆಗ ದಿನಕ್ಕೆ ಕೇವಲ 15 ಪೈಸೆ ಸಂಬಳ ಹೆಚ್ಚಳ ಸಿಗುತ್ತದೆ ಎಂದರೆ ಹೇಗಿರುತ್ತೆ ಎಂದು ಎಂದಾದರೂ ಊಹಿಸಿಕೊಳ್ಳಬಹುದೇ? 1996ರಿಂದ 2004ರ ನಡುವೆ ನಮ್ಮ ಸಂಬಳ ಹೆಚ್ಚಳಗಳು 15 ಪೈಸೆ, 50 ಪೈಸೆ, 60 ಪೈಸೆ, 20 ಪೈಸೆ ಹೀಗೆಯೇ ಇರುತ್ತಿದ್ದವು. ನಮಗೆ ತುಂಬಾ ಕೋಪ ಬಂತು. ನಮಗೆ ಪರಿಚಯದ ಒಬ್ಬರು ಯೂನಿಯನ್ ಸ್ಥಾಪಿಸಬೇಕು ಎಂದರು. ಅದು ನಮಗೆ ಸ್ವಲ್ಪ ಭದ್ರತೆ ಕೊಡಬಹುದು ಎಂದೂ ಹೇಳಿದರು. ಆದರೆ ಯೂನಿಯನ್ ಸ್ಥಾಪಿಸಿದ ಬಳಿಕವೂ ನಮಗೆ ಯಾವುದೇ ಭದ್ರತೆ ಇರಲಿಲ್ಲ”
ಆರಂಭದಲ್ಲಿ ಈ ಯೂನಿಯನ್ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸಿಸ್ಟ್)ದ ಕಾರ್ಮಿಕ ಸಂಘಟನೆಯಾದ CITU ಜತೆಗೆ ವಿಲೀನವಾಗಿತ್ತು. 2012ರಲ್ಲಿ ಈ ಯೂನಿಯನ್ CITUನಿಂದ ಬೇರ್ಪಟ್ಟು, ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸಿಸ್ಟ್–ಲೆನಿನಿಸ್ಟ್) ಲಿಬರೇಷನ್‌ನ ಕಾರ್ಮಿಕ ಸಂಘಟನೆಯಾದ AICCTUಗೆ ಸೇರ್ಪಡೆಯಾಯಿತು.
“2004ರಲ್ಲಿ ಯೂನಿಯನ್ ಸ್ಥಾಪಿಸಿ ನೋಂದಣಿ ಮಾಡಿದ ತಕ್ಷಣವೇ, ಕಾರ್ಮಿಕರು ತಮ್ಮ ಕೆಲಸವನ್ನು ಶಾಶ್ವತಗೊಳಿಸಬೇಕು ಎಂಬ ಬೇಡಿಕೆ ಇಟ್ಟರು. ಸುಮಾರು ಐದಾರು ತಿಂಗಳ ಕಾಲ, ಅವರು ಉತ್ಪಾದನೆಯನ್ನು ನಿಧಾನಗೊಳಿಸುವ ಮೂಲಕ ಪ್ರತಿಭಟಿಸಿದರು. ಈ ಘಟಕಗಳು ದಿನದ 24 ಗಂಟೆಗಳೂ ಕಾರ್ಯನಿರ್ವಹಿಸುತ್ತಿದ್ದವು ಮತ್ತು ಕಾರ್ಮಿಕರು ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಸಾಮಾನ್ಯವಾಗಿ ದಿನಕ್ಕೆ 80–90 ಲೋಡ್ ರೆಡಿ-ಮಿಕ್ಸ್ ಕಾಂಕ್ರೀಟ್ ಉತ್ಪಾದನೆಯಾಗುತ್ತಿದ್ದರೆ, ಪ್ರತಿಭಟನೆಯ ವೇಳೆ ಅದನ್ನು ಗಂಟೆಗೆ ಒಂದೇ ಲೋಡ್ ಮಟ್ಟಕ್ಕೆ ಇಳಿಸಿ, ದಿನಕ್ಕೆ ಕೇವಲ 17–18 ಲೋಡ್‌ಗಳಷ್ಟೇ ಉತ್ಪಾದಿಸಿದರು”
“ಕಂಪನಿಯೇನೂ ಸುಮ್ಮನೆ ಕೂರಲಿಲ್ಲ. ಕಾರ್ಮಿಕರ ಪ್ರತಿಭಟನೆಗೆ ಪ್ರತಿಯಾಗಿ ಸಂಬಳ ಕಡಿತ, ಬೋನಸ್ ತಡೆಹಿಡಿಯುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿತು. ಕಾರ್ಮಿಕರು ಕೈಗಾರಿಕಾ ವಿವಾದ ಕಾಯ್ದೆ, 1947ರ ಅಡಿಯಲ್ಲಿ ಕಾರ್ಮಿಕ ಇಲಾಖೆಗೆ ದೂರು ನೀಡಿದ ನಂತರ, 2005ರಲ್ಲಿ ಕಂಪನಿಯು ಬಾಕಿ ಸಂಬಳವನ್ನು ಕಾರ್ಮಿಕ ಇಲಾಖೆಯ ಮೂಲಕ ಪಾವತಿಸಬೇಕಾಯಿತು. ಆ ಸಮಯದಲ್ಲಿ ನಮ್ಮ ಸಂಬಳ ತಿಂಗಳಿಗೆ ಸುಮಾರು 4,000 ರೂ. ಇತ್ತು. ಒಪ್ಪಂದದ ನಂತರ ಅದನ್ನು ಸುಮಾರು 8,000 ರೂ.ಗೆ ಹೆಚ್ಚಿಸಿದರು. ಕಾರ್ಮಿಕರು ಶಾಶ್ವತ ನೇಮಕಾತಿಯ ಬೇಡಿಕೆ ಇಟ್ಟರೂ ಕಂಪನಿ ಅದನ್ನು ಸಂಪೂರ್ಣವಾಗಿ ನಿರಾಕರಿಸಿತು”
“2008ರಲ್ಲಿ ಲಾಫಾರ್ಜ್ ಇಂಡಿಯಾ ಲಿಮಿಟೆಡ್ L&Tಯಿಂದ ಈ RMC ಘಟಕಗಳನ್ನು ಸ್ವಾಧೀನಪಡಿಸಿಕೊಂಡಿತು. 2008ರ ಜೂನ್ 24ರಂದು ನಡೆದ ವ್ಯವಹಾರ ವರ್ಗಾವಣೆ ಒಪ್ಪಂದದಲ್ಲಿ, ಯಾವುದೇ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುವುದಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. 2010ರ ನವೆಂಬರ್‌ನಲ್ಲಿ, ಟೋಟಲ್ ಸೊಲ್ಯೂಷನ್ ಬದಲು ‘ವೈಸ್-ಮೆನ್ HR ಸರ್ವೀಸಸ್’ ಎಂಬ ಕಂಪನಿಯನ್ನು ತಂದು, ಎಲ್ಲಾ ಕಾರ್ಮಿಕರನ್ನು ಕೆಲಸದಿಂದ ತೆಗೆಯಲಾಯಿತು. ಇದಕ್ಕೆ ವಿರೋಧವಾಗಿ ಕಾರ್ಮಿಕರು 6 ಘಟಕಗಳಲ್ಲೂ ಕೆಲಸ ನಿಲ್ಲಿಸಿ ಪ್ರತಿಭಟನೆ ನಡೆಸಿದರು. ʼನಾವು ಕಾರ್ಖಾನೆ ಹೊರಗೆ ಟೆಂಟ್ ಹಾಕಿಕೊಂಡು ಕುಳಿತೆವು. ಒಂದು ರೂಪಾಯಿ ಸಂಬಳವಿಲ್ಲದೆ ಅಲ್ಲೇ ಅಡುಗೆ ಮಾಡಿ, ಊಟ ಮಾಡುತ್ತಿದ್ದೆವು. ಪರಿಸ್ಥಿತಿ ಎಷ್ಟು ಹೀನಾಯವಾಗಿತ್ತೆಂದರೆ, ಬದುಕಲು ಜನರ ಬಳಿ ಹಣ ಕೇಳುವ ಸ್ಥಿತಿಗೂ ಬಂದೆವುʼ. ಪ್ರತಿಭಟನೆ ಆರಂಭಿಸಿದ ಹತ್ತು ತಿಂಗಳ ನಂತರ, ಕಾರ್ಮಿಕ ಸಚಿವಾಲಯವು ಈ ಕೆಲಸದಿಂದ ತೆಗೆಯುವ ಕ್ರಮ ಕಾನೂನು ಬಾಹಿರ ಎಂದು ಆದೇಶ ನೀಡಿತು ಮತ್ತು ಕಾರ್ಮಿಕರು ಪುನಃ ಕೆಲಸಕ್ಕೆ ಸೇರಬಹುದೆಂದು ತೀರ್ಮಾನಿಸಿತು”

“ಶಾಶ್ವತ ನೇಮಕದ ಹೋರಾಟ ಮುಂದುವರಿದೇ ಇತ್ತು. 2016ರಲ್ಲಿ ನಿರ್ಮಾ ಗ್ರೂಪ್ ಲಾಫಾರ್ಜ್ ಅನ್ನು ಖರೀದಿಸಿತು. 2017ರಲ್ಲಿ ಕಂಪನಿಯ ಹೆಸರು ನುವೋಕೋ ವಿಸ್ಟಾಸ್ ಕಾರ್ಪೊರೇಷನ್ ಎಂದು ಬದಲಾಯಿತು. ನಿರ್ಮಾ ಗ್ರೂಪ್ (ತನ್ನದೇ ವೆಬ್‌ಸೈಟ್ ಪ್ರಕಾರ) ಭಾರತದಲ್ಲಿನ ಐದನೇ ಅತಿ ದೊಡ್ಡ ಸಿಮೆಂಟ್ ಗ್ರೂಪ್ ಆಗಿದ್ದು, ಪೂರ್ವ ಭಾರತದಲ್ಲಿ ಅತಿ ದೊಡ್ಡ ಸಿಮೆಂಟ್ ಉತ್ಪಾದಕ ಸಂಸ್ಥೆಯಾಗಿದೆ. ಇದರ ವ್ಯಾಪಾರ ಸಿಮೆಂಟ್, ರೆಡಿ-ಮಿಕ್ಸ್ ಕಾಂಕ್ರೀಟ್ ಮತ್ತು ಆಧುನಿಕ ಕಟ್ಟಡ ಸಾಮಗ್ರಿಗಳನ್ನು ಒಳಗೊಂಡಿದೆ. ನುವೋಕೋ ದೇಶಾದ್ಯಂತ 85 ಶಾಖೆ, 13 ಸಿಮೆಂಟ್ ಕಾರ್ಖಾನೆ ಮತ್ತು 53 RMC ಘಟಕಗಳನ್ನು ಹೊಂದಿದೆ”
“KGLU ಯೂನಿಯನ್ 2012ರ ಅ.31ರಂದು ನುವೋಕೋ ಮುಂದೆ ತಮ್ಮ ಬೇಡಿಕೆಗಳ ಪಟ್ಟಿಯನ್ನು ಇಟ್ಟಿತು. ಮತ್ತೆ ಶಾಶ್ವತ ನೇಮಕವೇ ಮುಖ್ಯ ಬೇಡಿಕೆಯಾಗಿತ್ತು. ಕಂಪನಿ ಸಕಾರಾತ್ಮಕ ಪ್ರತಿಕ್ರಿಯೆ ನೀಡದ ಕಾರಣ, ಯೂನಿಯನ್ ಕೈಗಾರಿಕಾ ವಿವಾದ ಕಾಯ್ದೆ, 1947ರ ಅಡಿಯಲ್ಲಿ ಕಾರ್ಮಿಕ ಇಲಾಖೆಗೆ ದೂರು ಸಲ್ಲಿಸಿತು. ಸಂಧಾನ ವಿಫಲವಾದ ನಂತರ, 2013ರ ನ.22ರಂದು ಕಾರ್ಮಿಕ ಇಲಾಖೆ ಈ ಪ್ರಕರಣವನ್ನು ಕೈಗಾರಿಕಾ ನ್ಯಾಯಮಂಡಳಿಗೆ ವರ್ಗಾಯಿಸಿತು. ಶಾಶ್ವತ ನೇಮಕವು ಕಾರ್ಮಿಕರಿಗೆ ದೊಡ್ಡ ಆರ್ಥಿಕ ಲಾಭವನ್ನು ತರುತ್ತಿತ್ತು. ಶಾಶ್ವತ ಕಾರ್ಮಿಕರಿಗೆ, ನನಗೂ (ಮೋಹನ್ ದಾಸ್) ಮತ್ತು ಇತರ ಕಾಂಟ್ರ್ಯಾಕ್ಟ್ ಕಾರ್ಮಿಕರಿಗೆ ಸಿಗುತ್ತಿದ್ದ ಸಂಬಳದ ಕನಿಷ್ಠ ಎರಡುಪಟ್ಟು ಸಂಬಳ ಸಿಗುತ್ತಿತ್ತು”
“ನಾನು ಲೋಡರ್ ಮತ್ತು ಯಂತ್ರ ನಿರ್ವಾಹಕನಾಗಿ ಕೆಲಸ ಮಾಡಿದೆ. ಹೇಳಿಕೊಳ್ಳಲು ತಿಂಗಳಿಗೆ ಸುಮಾರು 45,000 ರೂ. ಸಂಬಳ. ಆದರೆ ಕೈಗೆ ಸಿಗುತ್ತಿದ್ದದ್ದು ಇದರಲ್ಲಿನ ಅರ್ಧದಷ್ಟೇ. 12 ಗಂಟೆಗಳ ಶಿಫ್ಟ್ ಕೆಲಸ, 8 ಗಂಟೆ ನಿಯಮಿತ ಕೆಲಸ, 4 ಗಂಟೆ ಓವರ್‌ಟೈಮ್. ಆ ಓವರ್‌ಟೈಮ್ ಹಣ ಇಲ್ಲದಿದ್ದರೆ ನಮಗೆ ಅರ್ಧ ಸಂಬಳವೂ ಸಿಗುವುದಿಲ್ಲ. ನಮ್ಮಷ್ಟೇ ಕೆಲಸ ಮಾಡುವ ಶಾಶ್ವತ ಕಾರ್ಮಿಕರಿಗೆ ತಿಂಗಳಿಗೆ ಸುಮಾರು 75,000 ರೂ. ಸಂಬಳ ಸಿಗುತ್ತದೆ. ಸಂಘಟನೆಯನ್ನು ಒಡೆಯಲು ಕಂಪನಿಯ ಮ್ಯಾನೇಜ್‌ಮೆಂಟ್ ಘಟಕ ಉದ್ದೇಶಪೂರ್ವಕವಾಗಿ 8 ಜನರನ್ನು ಮಾತ್ರ ಶಾಶ್ವತ ಉದ್ಯೋಗಿಗಳನ್ನಾಗಿ ಮಾಡಿಕೊಂಡಿದೆ. 2010ರಲ್ಲಿ ಮಾತ್ರ ಶಾಶ್ವತ ಹುದ್ದೆಗಳನ್ನು ಸೃಷ್ಟಿಸಿ, ಪ್ರತಿ ಘಟಕದಲ್ಲೂ ಇಬ್ಬರನ್ನು ನೇಮಕ ಮಾಡಲಾಗಿದೆ”
“2005ರಿಂದ ಟೋಟಲ್ ಸಲ್ಯೂಷನ್ ಮತ್ತು 2008ರಿಂದ ವೈಸ್-ಮೆನ್ ಎಂಬ ಕಾಂಟ್ರ್ಯಾಕ್ಟರ್ ಸಂಸ್ಥೆಗಳನ್ನು ಬಳಸಿಕೊಂಡು ಅಸಲಿ ಕಾರ್ಮಿಕರನ್ನು ಕಾಂಟ್ರ್ಯಾಕ್ಟ್ ಕಾರ್ಮಿಕರೆಂದು ತೋರಿಸಲಾಯಿತು, ಆದರೆ ಕೈಗಾರಿಕಾ ನ್ಯಾಯಮಂಡಳಿ ಈ ವ್ಯವಸ್ಥೆಯನ್ನು ನಕಲಿ ಮತ್ತು ಮೋಸದದ್ದೆಂದು ಘೋಷಿಸಿತು”
2025 ಸೆ.1ರ ತೀರ್ಪಿನಲ್ಲಿ ನ್ಯಾಯಮಂಡಳಿ, 2013ರಿಂದ ಕಾರ್ಮಿಕರನ್ನು ಶಾಶ್ವತಗೊಳಿಸಿ 12 ವರ್ಷಗಳ ಬಾಕಿ ಉಳಿಸಿಕೊಂಡಿರುವ ಲಕ್ಷಾಂತರ ಸಂಬಳ ಮತ್ತು ಸೌಲಭ್ಯಗಳನ್ನು ನೀಡಬೇಕೆಂದು ಆದೇಶಿಸಿತು. ಇದರಿಂದ ಪ್ರತಿಯೊಬ್ಬ ಕಾರ್ಮಿಕನಿಗೆ ಲಕ್ಷಾಂತರ ರೂಪಾಯಿ ಬಾಕಿ ಬರುತ್ತದೆ. ತೀರ್ಪಿನ ಬಳಿಕ ನುವೋಕೋ, ಸೆ.26ರಂದು ಬೆಂಗಳೂರಿನ 5 ಮತ್ತು ಮೈಸೂರಿನ 1 ಸೇರಿ ಒಟ್ಟು 6 ಪ್ಲಾಂಟ್‌ಗಳನ್ನು ನಷ್ಟದ ಕಾರಣ ನೀಡಿ ಮುಚ್ಚುವುದಾಗಿ ನೋಟಿಸ್ ನೀಡಿತು. ಬಳಿಕ 26 ಕಾರ್ಮಿಕರಿಗೆ ₹6–9 ಲಕ್ಷದ ಪರಿಹಾರ ಚೆಕ್‌ಗಳನ್ನು ನೀಡಿ ಕೆಲಸದಿಂದ ತೆಗೆದುಹಾಕಲಾಯಿತು. ಇದನ್ನು ಯೂನಿಯನ್ ನ್ಯಾಯಾಲಯದ ಆದೇಶದಿಂದ ತಪ್ಪಿಸಿಕೊಳ್ಳಲು ಮಾಡಿರುವ ಕ್ರಮವೆಂದು ಮೋಹನ್ ದಾಸ್ ಆರೋಪಿಸಿದ್ದಾರೆ.
ನುವೋಕೋ, 1970ರ ಕಾಂಟ್ರ್ಯಾಕ್ಟ್ ಲೇಬರ್ (ನಿಯಂತ್ರಣ ಮತ್ತು ರದ್ದುಪಡಿಸುವಿಕೆ) ಕಾಯ್ದೆಯ ಸೆಕ್ಷನ್ 10ನ್ನು ಉಲ್ಲೇಖಿಸಿ, ಈ ವಿಧಿಯ ಪ್ರಕಾರ ಯಾವುದೇ ಕೈಗಾರಿಕೆಯಲ್ಲಿ ಕಾಂಟ್ರ್ಯಾಕ್ಟ್ ಕಾರ್ಮಿಕರ ಬಳಕೆಯನ್ನು ನಿಷೇಧಿಸುವ ಅಧಿಕಾರ ಸರ್ಕಾರಕ್ಕಿದೆ. ಎಂದು ವಾದಿಸಿತು. ವಾದಕ್ಕೆ ಬೆಂಬಲವಾಗಿ ಹಲವು ನ್ಯಾಯಾಲಯದ ತೀರ್ಪುಗಳನ್ನು ಉಲ್ಲೇಖಿಸಿತು. ಆದರೆ ಕೈಗಾರಿಕಾ ನ್ಯಾಯಮಂಡಳಿ ಆ ಉಲ್ಲೇಖಗಳನ್ನು ತಳ್ಳಿಹಾಕಿತು. ನ್ಯಾಯಮಂಡಳಿ 2001ರ ಸುಪ್ರೀಂ ಕೋರ್ಟ್, ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ವಿರುದ್ಧ ಇಂಟರ್‌ನ್ಯಾಷನಲ್ ಏರ್ ಕಾರ್ಗೋ ವರ್ಕರ್ಸ್ ಯೂನಿಯನ್ ಪ್ರಕರಣವನ್ನು ಆಧಾರವನ್ನಾಗಿ ಮಾಡಿಕೊಂಡು ಕಾರ್ಮಿಕರ ಪರವಾಗಿ ತೀರ್ಪು ನೀಡಿತು.
ಆ ತೀರ್ಪಿನಲ್ಲಿ ನ್ಯಾಯಮೂರ್ತಿ ಪಿ. ಸಾಥಸಿವಂ ಅವರು, CLRA ಕಾಯ್ದೆಯ ಸೆಕ್ಷನ್ 10 ಅಡಿಯಲ್ಲಿ ಸರ್ಕಾರದಿಂದ ಯಾವುದೇ ಅಧಿಕೃತ ಅಧಿಸೂಚನೆ (notification) ಇಲ್ಲದಿದ್ದರೂ ಸಹ, ಕಾಂಟ್ರ್ಯಾಕ್ಟ್ ವ್ಯವಸ್ಥೆ ನಕಲಿಯೇ (sham) ಅಥವಾ ಮೋಸದ್ದೋ ಎಂಬುದನ್ನು ಪರಿಶೀಲಿಸುವ ಸಂಪೂರ್ಣ ಅಧಿಕಾರ ಕೈಗಾರಿಕಾ ನ್ಯಾಯಮಂಡಳಿಗೆ ಇದೆ ಎಂದು ಸ್ಪಷ್ಟವಾಗಿ ಹೇಳಿದರು.
ಇದನ್ನೂ ಓದಿ: 2025ರಲ್ಲಿ AI ಪ್ರಭಾವ; ತಂತ್ರಜ್ಞಾನದಡಿ ಕಲಿಕೆ-ಆರೈಕೆ!
2023–24 ಆರ್ಥಿಕ ವರ್ಷದಲ್ಲಿ ನುವೋಕೋ ತೆರಿಗೆ ಮೊದಲು ₹207 ಕೋಟಿ ಲಾಭ ಗಳಿಸಿದ್ದರೂ ಪ್ಲಾಂಟ್ ಮುಚ್ಚುವ ಮೂಲಕ ಕಾರ್ಮಿಕರನ್ನು ಹೊರಹಾಕಲಾಗುತ್ತಿದೆ ಎಂದು ಯೂನಿಯನ್ ಆರೋಪಿಸಿದೆ. ಇದೇ ಡಿ.15ರಂದು ಕರ್ನಾಟಕ ಹೈಕೋರ್ಟ್, ಕೈಗಾರಿಕಾ ನ್ಯಾಯಮಂಡಳಿಯ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದ್ದು, ವಿಚಾರಣೆ ಇನ್ನೂ ಬಾಕಿಯಿದೆ. ಈ ನಡುವೆ 50 ವರ್ಷ ಮೀರಿದ ಕಾರ್ಮಿಕರು ಉದ್ಯೋಗ ಭವಿಷ್ಯದ ಭಯದೊಂದಿಗೆ ಪ್ಲಾಂಟ್‌ಗಳ ಮುಂದೆ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಪ್ರಕರಣವು ದೇಶದ ಕೈಗಾರಿಕೆಗಳು ಕಾರ್ಮಿಕರನ್ನು ಹೇಗೆ ವರ್ಷಗಳ ಕಾಲ ದುಡಿಸಿಕೊಂಡು, ವೇತನ, ಹಕ್ಕುಗಳ ವಿಷಯ ಬಂದಾಗ ಏಕಾಏಕಿ ಆಚೆ ದಬ್ಬುತ್ತದೆ ಎಂಬ ಕಠಿಣ ವಾಸ್ತವವನ್ನು ಬಯಲಿಗೆಳೆಯುತ್ತದೆ. ನ್ಯಾಯಾಲಯ ಕಾರ್ಮಿಕರ ಪರವಾಗಿ ತೀರ್ಪು ನೀಡಿದ ಕ್ಷಣದಲ್ಲೇ ಪ್ಲಾಂಟ್ ಮುಚ್ಚುವ ನಿರ್ಧಾರ ತೆಗೆದುಕೊಳ್ಳುವುದು, ಹಕ್ಕುಗಳ ಅನುಷ್ಠಾನದಿಂದ ತಪ್ಪಿಸಿಕೊಳ್ಳಲು ಕೈಗಾರಿಕೆಗಳು ಬಳಸುವ ಕುಟಿಲ ತಂತ್ರವಾಗಿದೆ. ಲಾಭದಲ್ಲಿರುವ ಕಂಪನಿಗಳೂ ನಷ್ಟದ ಕಾರಣ ಹೇಳಿ ಕಾರ್ಮಿಕರನ್ನು ಬಲಿಗೆಡವುತ್ತಿರುವುದು ಸರಿಯಲ್ಲ. ವಯಸ್ಸು ಮೀರಿದ ಕಾರ್ಮಿಕರಿಗೆ ಪರ್ಯಾಯ ಉದ್ಯೋಗದ ಅವಕಾಶಗಳೇ ಇಲ್ಲದ ಸ್ಥಿತಿಯಲ್ಲಿ, ಈ ರೀತಿಯ ನಿರ್ಧಾರಗಳು ಅವರ ಬದುಕನ್ನೇ ಅಸುರಕ್ಷಿತಗೊಳಿಸುತ್ತವೆ. ದೇಶದಾದ್ಯಂತ ಅನೇಕ ಕಾರ್ಮಿಕರು ಅನುಭವಿಸುತ್ತಿರುವ ನಿತ್ಯದ ಶೋಷಣೆಯೂ ಇದೇ. ಕಾರ್ಮಿಕ ಕಾನೂನುಗಳು ಕಾಗದದಕ್ಕಷ್ಟೇ ಉಳಿಯದೆ, ನೆಲಮಟ್ಟದಲ್ಲಿ ಜಾರಿಯಾಗಬೇಕಾದ ಅಗತ್ಯವನ್ನು ಈ ಪ್ರಕರಣ ಸ್ಪಷ್ಟವಾಗಿಸುತ್ತದೆ.
ವರದಿ : Anisha Sheth The News Minute
ಈ ವರದಿಯನ್ನು The News Minute ನ Anisha Sheth ಅವರು ಮಾಡಿದ್ದು, ಈದಿನ.ಕಾಮ್‌ನಲ್ಲಿ ಪ್ರಕಟವಾಗಿರುವುದು ಅದರ ಯಥಾನುವಾದ. ಈ ಮಹತ್ವದ ವರದಿಯನ್ನು ಅನುವಾದಿಸಿ ಪ್ರಕಟಿಸಲು ಅನುಮತಿಸಿದ್ದಕ್ಕೆ ನಾವು ಅವರಿಗೆ ಆಭಾರಿಗಳಾಗಿದ್ದೇವೆ.
The News Minute ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ, ವಿಶೇಷವಾಗಿ ದಕ್ಷಿಣ ಭಾರತವನ್ನು ಆದ್ಯತೆಯಾಗಿಟ್ಟುಕೊಂಡು ಕೆಲಸ ಮಾಡುವ ಇಂಗ್ಲಿಷ್ ಡಿಜಿಟಲ್ ಮಾಧ್ಯಮವಾಗಿದೆ. Anisha Sheth ಅವರು ಅಲ್ಲಿ ಸಹ ಸಂಪಾದಕಿಯಾಗಿದ್ದಾರೆ.
ಮೂಲ ಇಂಗ್ಲಿಷ್ ಲೇಖನವನ್ನು ಓದಬಯಸುವವರು ಈ ಲಿಂಕ್ ಮೇಲೆ ಕ್ಲಿಕ್ ಮಾಡಬಹುದು…
https://www.thenewsminute.com/karnataka/karnataka-workers-win-20-year-court-battle-against-nirma-group-still-await-wages





