ಛತ್ತೀಸ್‌ಗಢದ ಬಸ್ತಾರ್ ವಿಭಾಗದಲ್ಲಿ ಶುಕ್ರವಾರ ಸುಮಾರು 208 ಮಾವೋವಾದಿ ನಾಯಕರು ಮುಖ್ಯವಾಹಿನಿಗೆ ಶರಣಾಗಿದ್ದಾರೆ. ಜತೆಗೆ ಅಧಿಕಾರಿಗಳಿಗೆ 153 ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಮಾವೋವಾದಿ ನಾಯಕರು ಸಾಮೂಹಿಕವಾಗಿ ಮುಖ್ಯವಾಹಿನಿಗೆ ಬರುತ್ತಿರುವುದು ಎಂದು ಹೇಳಲಾಗಿದೆ. 208 ಮಂದಿಯಲ್ಲಿ 110 ಮಹಿಳೆಯರು, 98 ಪುರುಷರಾಗಿದ್ದಾರೆ.
ಮಾವೋವಾದಿ ವಕ್ತಾರ ಮತ್ತು ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕೇಂದ್ರ ಸಮಿತಿ ಸದಸ್ಯ (ಸಿಸಿಎಂ) ರೂಪೇಶ್ ಅಲಿಯಾಸ್ ಸತೀಶ್ ಕೂಡ ಮುಖ್ಯವಾಹಿನಿಗೆ ಬಂದಿದ್ದಾರೆ. ಈ ಹಿಂದೆ ರೂಪೇಶ್ ಬಗ್ಗೆ ಸುಳಿವು ನೀಡಿದವರಿಗೆ 1 ಕೋಟಿ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿತ್ತು. ಇವರೊಂದಿಗೆ ನಾಯಕಿ ರಾಣಿತಾ ಮತ್ತು ಕಮಾಂಡರ್‌ಗಳಾದ ಭಾಸ್ಕರ್ ಮತ್ತು ರಾಜು ಸಲಾಂ ಸೇರಿದಂತೆ ಇತರ ಉನ್ನತ ನಾಯಕರೂ ಮುಖ್ಯವಾಹಿನಿಗೆ ಬಂದಿದ್ದಾರೆ.
ಇದನ್ನು ಓದಿದ್ದೀರಾ? ಛತ್ತೀಸ್‌ಗಢ | 1.18 ಕೋಟಿ ರೂ. ಬಹುಮಾನ ಹೊಂದಿದ್ದ 23 ನಕ್ಸಲ್ ನಾಯಕರು ಮುಖ್ಯವಾಹಿನಿಗೆ
ಮಾವೋವಾದಿಗಳು 19 ಎಕೆ -47 ಗಳು, 17 ಎಸ್‌ಎಲ್‌ಆರ್ ರೈಫಲ್‌ಗಳು, 23 ಐಎನ್‌ಎಸ್‌ಎಎಸ್ ರೈಫಲ್‌ಗಳು ಮತ್ತು ಇತರ ವಿವಿಧ ಬಂದೂಕುಗಳು ಸೇರಿದಂತೆ 153 ಶಸ್ತ್ರಾಸ್ತ್ರಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರ ಸಮ್ಮುಖದಲ್ಲಿ ಈ ಪ್ರಕ್ರಿಯೆ ನಡೆದಿದೆ.
ಈ ಹಿಂದೆ ಅಕ್ಟೋಬರ್ 14ರಂದು ಭೂಪತಿ ಎಂದೂ ಕರೆಯಲ್ಪಡುವ ಹಿರಿಯ ಮಾವೋವಾದಿ ನಾಯಕ ಮಲ್ಲೊಜುಲ ವೇಣುಗೋಪಾಲ್ ರಾವ್ ಅವರು ಸುಮಾರು 60 ಮಾವೋವಾದಿಗಳೊಂದಿಗೆ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಮುಖ್ಯವಾಹಿನಿಗೆ ಬಂದಿದ್ದಾರೆ. ಅದಾದ ಬಳಿಕ ಅಕ್ಟೋಬರ್ 15ರಂದು ಛತ್ತೀಸ್‌ಗಢದ ಕಂಕೇರ್, ಸುಕ್ಮಾ ಮತ್ತು ಕೊಂಡಗಾಂವ್ ಜಿಲ್ಲೆಗಳಲ್ಲಿ 78 ಮಾವೋವಾದಿಗಳು ಮುಖ್ಯವಾಹಿನಿಗೆ ಬಂದಿದ್ದಾರೆ.
VIDEO | Jagdalpur, Chhattisgarh: 208 Naxalites will surrender with 135 weapons today. Maoists are being brought to the Police lines.
— Press Trust of India (@PTI_News) October 17, 2025
(Full video available on PTI Videos – https://t.co/n147TvqRQz) pic.twitter.com/9xuv6bHADB
ಪೊಲೀಸರಿಂದ ಆದಿವಾಸಿಗಳ ಹತ್ಯೆ, ದೌರ್ಜನ್ಯ
2024ರ ಜನವರಿಯಿಂದ 2025 ಅಕ್ಟೋಬರ್‌ವರೆಗೆ ಛತ್ತೀಸ್‌ಗಢದಲ್ಲಿ ಸುಮಾರು 400ಕ್ಕೂ ಅಧಿಕ ಮಾವೋವಾದಿಗಳನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದೆ. 2025ರಲ್ಲೇ ಸುಮಾರು 252 ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ. ನಕ್ಸಲ್ ವಿರೋಧಿ ಕಾರ್ಯಾಚರಣೆ ನೆಪದಲ್ಲಿ ಆದಿವಾಸಿಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಮಾನವ ಹಕ್ಕು ಹೋರಾಟಗಾರರು ಮತ್ತು ಬುಡಕಟ್ಟು ಸಮುದಾಯಗಳು ನಿರಂತರವಾಗಿ ಆರೋಪಿಸುತ್ತಿದೆ. ಆದಿವಾಸಿಗಳ ಮೇಲೆ ಲೈಂಗಿಕ ದೌರ್ಜನ್ಯ, ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ದೂರಲಾಗಿದೆ.
ಅದರಲ್ಲೂ ಮಾವೋವಾದಿ ನಾಯಕರುಗಳ ವಿರುದ್ಧ ಕಾರ್ಯಾಚರಣೆ ವೇಳೆ ಮುಗ್ಧ ಗ್ರಾಮಸ್ಥರನ್ನು ಭದ್ರತಾಪಡೆ, ಪೊಲೀಸರು ಹತ್ಯೆ ಮಾಡಿದ್ದಾರೆ. 2021ರಲ್ಲಿ ನಡೆದ ಇಂತಹ ಘಟನೆ ಬಳಿಕ ಭದ್ರತಾ ಪಡೆಗಳ ವಿರುದ್ಧ ಆಕ್ರೋಶ ಹೆಚ್ಚಾದ ಬಳಿಕ ಕೊನೆಗೂ ಮಾವೋವಾದಿಗಳು ಎಂದು ಭಾವಿಸಿ ನಾಗರಿಕರನ್ನು ಹತ್ಯೆ ಮಾಡಿರುವುದಾಗಿ ಭದ್ರತಾ ಪಡೆಗಳು ಒಪ್ಪಿಕೊಂಡಿದ್ದವು.





