23 ವರ್ಷದ ಯುವತಿಯನ್ನು ಒಂದೇ ದಿನ ಇಬ್ಬರು ಪ್ರತ್ಯೇಕ ಸಂದರ್ಭಗಳಲ್ಲಿ ಅತ್ಯಾಚಾರ ಮಾಡಿ ಕಟ್ಟಡದಿಂದ ನೂಕಿ ಕೊಲೆ ಮಾಡಿರುವ ಘಟನೆ ಒಡಿಶಾದ ತರೇನಿಗಡ ಪ್ರದೇಶದಲ್ಲಿ ನಡೆದಿದೆ.
ಫೆಬ್ರವರಿ 23ರಂದು ನಾಲ್ಕು ಅಂತಸ್ತಿನ ಮನೆಯಿಂದ ಬಿದ್ದು ಯುವತಿಯೊಬ್ಬಳು ಸಾವನ್ನಪ್ಪಿದ್ದಳು. ಆದರೆ ಈ ಯುವತಿನ್ನು ಇಬ್ಬರು, ಒಂದೇ ದಿನ ಬೇರೆ ಬೇರೆ ಸ್ಥಳದಲ್ಲಿ ಅತ್ಯಾಚಾರ ಮಾಡಿ, ನಂತರ ಕಟ್ಟಡದ ಮೇಲ್ಛಾವಣಿಯಿಂದ ತಳ್ಳಿದ್ದಾರೆ ಎಂದು ಪ್ಯಾರದೀಪ್ ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? 2011ರ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿ ಜೈಲಿನಿಂದ ಪರಾರಿ
ಮೊದಲು ಯುವತಿಯ ಸ್ನೇಹಿತ ಧಿಂಕಿಯಾದ ಸೋಮನಾಥ್ ಓಜಾ ಅತ್ಯಾಚಾರ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಆಕೆಯನ್ನು ರಕ್ಷಣೆ ಮಾಡುವ ನೆಪದಲ್ಲಿ ಜಾರ್ಖಂಡ್‌ನ ಧನ್ಬಾದ್‌ನ ಸುವಾ ಕುಮಾರ್ ಸಿಂಗ್ (24) ತನ್ನೊಂದಿಗೆ ಕರೆದೊಯ್ದಿದ್ದು, ತರೇನಿಗಡದಲ್ಲಿರುವ ಕಟ್ಟಡವೊಂದರಲ್ಲಿ ಅತ್ಯಾಚಾರ ಎಸಗಿ ಛಾವಣಿಯಿಂದ ತಳ್ಳಿ ಕೊಂದಿದ್ದಾನೆ ಎಂದು ಜಗತ್ಸಿಂಗ್‌ಪುರ ಎಸ್‌ಪಿ ಅಂಕಿತ್ ವರ್ಮಾ ಹೇಳಿದ್ದಾರೆ.
ಕಳೆದ ಭಾನುವಾರ (ಫೆಬ್ರವರಿ 22) ಯುವತಿ ಓಜಾ ಜತೆ ದೇವಸ್ಥಾನಕ್ಕೆ ತೆರಳಿದ್ದಳು. ಆದರೆ ಆತ ಬೇರೆಡೆ ಕರೆದೊಯ್ದು ಅತ್ಯಾಚಾರ ಎಸಗಿ, ಆಕೆಯನ್ನು ರಹಮಾ ಬಸ್ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಅದೇ ರಾತ್ರಿ, ಸಿಂಗ್ ಅಂಗುಲ್‌ನಿಂದ ಮೋಟಾರ್ ಸೈಕಲ್‌ನಲ್ಲಿ ಹಿಂತಿರುಗುತ್ತಿದ್ದಾಗ, ಸಂತ್ರಸ್ತೆ ರಹಮಾದಲ್ಲಿ ಒಬ್ಬಂಟಿಯಾಗಿ ನಿಂತಿರುವುದನ್ನು ನೋಡಿದ್ದಾನೆ. ಸಹಾಯ ಮಾಡುವ ನೆಪದಲ್ಲಿ ಆಕೆಯನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಘಟನೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಆಕೆಯನ್ನು ಕಟ್ಟಡದಿಂದ ಕೆಳಕ್ಕೆ ನೂಕಿದ್ದಾನೆ ಎಂದು ಆರೋಪಿಸಲಾಗಿದೆ.
ಮರುದಿನ, ಸ್ಥಳೀಯ ನಿವಾಸಿಗಳು ಗೇಟ್ ಬಳಿ ಸಂತ್ರಸ್ತೆಯ ಅರೆಬೆತ್ತಲೆ ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ಆಕೆ ಕಟ್ಟಡದಿಂದ ಕೆಳಕ್ಕೆ ಜಿಗಿದಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಸ್ಥಳೀಯ ನಿವಾಸಿಗಳಿಗೆ ಆಕೆಯ ಹಿನ್ನೆಲೆ ತಿಳಿದಿಲ್ಲದ ಕಾರಣ ಪೊಲೀಸರು ಶವವನ್ನು ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ. ಸಿಂಗ್ ಸೇರಿದಂತೆ ಆ ಕಟ್ಟಡದಲ್ಲಿ ವಾಸಿಸುತ್ತಿದ್ದ ಏಳು ಯುವಕರನ್ನು ಪ್ರಶ್ನಿಸಿದ್ದಾರೆ. ಕಟ್ಟಡದ ಪರಿಶೀಲನೆ ಮಾಡಿದಾಗ ಮಹಿಳೆಯ ಒಳ ಉಡುಪು, ಬಟ್ಟೆ ಮತ್ತು ಚಪ್ಪಲಿ ಸಿಂಗ್ ಹಾಸಿಗೆಯ ಕೆಳಗೆ ಸಿಕ್ಕಿದೆ. ಆಕೆಯ ಮೊಬೈಲ್ ಫೋನ್ ಮನೆಯ ಅಡುಗೆಮನೆಯಲ್ಲಿಯೂ ಕಂಡುಬಂದಿದೆ. ಫೋನ್ ಆನ್ ಮಾಡಿದ ನಂತರ, ಆಕೆಯ ಗುರುತು ದೃಢವಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರವು ಒಂದು ಗಂಭೀರ ಸಾಮಾಜಿಕ ದುಷ್ಕೃತ್ಯ. ಈ ಕ್ರೂರ ಕೃತ್ಯವು ಸಮಾಜದ ನೈತಿಕತೆ ಮತ್ತು ಮಾನವೀಯತೆಯನ್ನು ಕುಂದಿಸುತ್ತದೆ. ಅತ್ಯಾಚಾರವನ್ನು ತಡೆಯುವುದು ಮತ್ತು ಅತ್ಯಾಚಾರ ಮುಕ್ತ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಹಿಳೆಯರು ಭಯಮುಕ್ತವಾಗಿ ಬದುಕಲು ಹೆಣ್ಣುಮಕ್ಕಳ ಸುರಕ್ಷತೆ, ಗೌರವ ಮತ್ತು ನ್ಯಾಯವನ್ನು ಕಾಪಾಡಲು ನಾವು ಒಗ್ಗೂಡಿ ಹೋರಾಡಬೇಕು.ಅತ್ಯಾಚಾರದ ವಿರುದ್ಧ ಕಠಿಣ ಕಾನೂನು ಜಾರಿಯಾಗಬೇಕು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ನಮ್ಮ ಕುಟುಂಬಗಳಲ್ಲಿ, ಶಾಲೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಜೊತೆ ಗೌರವ ಮತ್ತು ಸಂವೇದನೆಯಿಂದ ನಡೆದುಕೊಳ್ಳಬೇಕು. ಮಹಿಳೆಯರ ರಕ್ಷಣೆಯ ಹೊಣೆ ನಮ್ಮೆಲ್ಲರದ್ದಾಗಿದೆ.





