ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಸೋಮ್‌ಥಾನಾ ಗ್ರಾಮದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪ್ರಸಾದ ಸೇವಿಸಿ ಸುಮಾರು 300ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.
ದೇಗುಲದಲ್ಲಿ ಒಂದು ವಾರ ನಡೆಯುವ ಹರಿರಾಮ್ ಸಂಪತ್ ಧಾರ್ಮಿಕ ಕಾರ್ಯಕ್ರಮದ ಕೊನೆಯ ದಿನವಾದ ಇಂದು ಸ್ಥಳೀಯ ಸೋಮ್‌ಥಾನಾ ಹಾಗೂ ಕಪ್ರಖೇಡ್ ಹಳ್ಳಿಗಳ ಗ್ರಾಮಸ್ಥರು ಫೆ.20 ರಂದು ರಾತ್ರಿ 10 ಗಂಟೆಗೆ ಪ್ರಸಾದ ಸೇವಿಸಿದ ನಂತರ ಹೊಟ್ಟೆ ನೋವು, ವಾಂತಿ, ವಾಕರಿಗೆ ತೊಂದರೆಯುಂಟಾಗಿದೆ.
ಅಸ್ವಸ್ಥಗೊಂಡವರನ್ನು ಬಿಬಿ ಗ್ರಾಮದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಹಾಸಿಗೆಗಳ ಕೊರತೆಯಿಂದ ಬಹುತೇಕ ರೋಗಿಗಳನ್ನು ರಸ್ತೆಯ ಹೊರಗಡೆಯೆ ಚಿಕಿತ್ಸೆ ನೀಡಲಾಯಿತು. ರೋಗಿಗಳಿಗೆ ನೀಡುವ ಸಲೈನ್ ಬಾಟಲ್‌ಗಳನ್ನು ಮರಗಳ ಸಹಾಯದೊಂದಿಗೆ ಹಗ್ಗಕ್ಕೆ ನೇತುಹಾಕಿ ಚಿಕಿತ್ಸೆ ನೀಡಲಾಯಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆರಕ್ಷಕ ಇಲಾಖೆ ಯಾತಕ್ಕಾಗಿ, ಪೊಲೀಸರು ಇರುವುದು ಯಾರ ರಕ್ಷಣೆಗಾಗಿ?
“ಸೋಮ್‌ಥಾನಾದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದ 6ನೇ ದಿನ ಇದಾಗಿದೆ.ಪ್ರಸಾದವನ್ನು 400 ರಿಂದ 500 ಮಂದಿಗೆ ನೀಡಲಾಗಿದೆ. ಪ್ರಸಾದ ಸೇವಿಸಿದ ಬಹುತೇಕರು ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ರೋಗಿಗಳ ಪರಿಸ್ಥಿತಿ ಸದ್ಯ ಸ್ಥಿರವಾಗಿದೆ. ಬಹುತೇಕರು ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಪಾಟೀಲ್ ತಿಳಿಸಿದ್ದಾರೆ.
ವೈದ್ಯಕೀಯ ತುರ್ತು ಸೇವೆಗಳಿಗಾಗಿ ಆಂಬ್ಯುಲೆನ್ಸ್‌ನಲ್ಲಿ ಅಗತ್ಯ ಚಿಕಿತ್ಸಾ ಸಾಮಗ್ರಿಯೊಂದಿಗೆ ಒಂದು ವೈದ್ಯರ ತಂಡವನ್ನು ನಿಯೋಜಿಸಲಾಗಿದೆ. ಪ್ರಸಾದದ ಮಾದರಿಗಳನ್ನು ಪ್ರಯೋಗಾಲಕ್ಕೆ ಕಳುಹಿಸಿಕೊಡಲಾಗಿದೆ ಎಂದು ಪಾಟೀಲ್ ತಿಳಿಸಿದ್ದಾರೆ.





