ನಗರ ಸಭೆ ಮತ್ತು ರಾಜ್ಯ ಕಂದಾಯ ಇಲಾಖೆ ನಡುವಿನ ಹಗ್ಗಜಗ್ಗಾಟದಿಂದಾಗಿ ಗ್ರಾಮವೊಂದರ 360ಕ್ಕೂ ಹೆಚ್ಚು ಕುಟುಂಬಗಳು ಸುಮಾರು 40 ವರ್ಷಗಳಿಂದ ವಿದ್ಯುತ್, ಕುಡಿಯುವ ನೀರು, ರಸ್ತೆ, ಒಳಚರಂಡಿ ಹಾಗೂ ನೈರ್ಮಲ್ಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ದೀರ್ಘಕಾಲದಿಂದಲೂ ಮೂಲಭೂತ ಸೌಕರ್ಯಗಳಿಲ್ಲದೆ ಬಳಲುತ್ತಿದ್ದಾರೆ.
ತಮಿಳುನಾಡಿನ ಮಧುರೈ ನಗರ ವ್ಯಾಪ್ತಿಯ ವಂಡಿಯೂರ್ ಬಳಿಯ ತೀರ್ಥಕಾಡು ಗ್ರಾಮದ ಜನರು ಸೌಲಭ್ಯಳಿಲ್ಲದೆ ಜೀವಿಸುತ್ತಿದ್ದಾರೆ. ಈ ಗ್ರಾಮವು ಮಧುರೈ ನಗರ ಸಭೆಯ 38ನೇ ವಾರ್ಡ್ ವ್ಯಾಪ್ತಿಯಲ್ಲಿದೆ. ಇಲ್ಲಿನ ಕುಟುಂಬಗಳಿಗೆ ‘ಭೂ ಪಟ್ಟಾ’ ನೀಡುವ ವಿಚಾರದಲ್ಲಿ ನಗದ ಸಭೆ ಮತ್ತು ರಾಜ್ಯ ಕಂದಾಯ ಇಲಾಖೆ ನಡುವಿನ ಹಗ್ಗಜಗ್ಗಾಟ ನಡೆದಿದೆ. ಪರಿಣಾಮ, ಇಲ್ಲಿನ 1,200 ನಿವಾಸಿಗಳ ಜೀವನವು ಹೇಳಲಾಗದ, ಕೇಳದ ಹಾಗೂ ಅಧಿಕಾರಿಗಳಿಗೆ ಕಾಣದ ವಿಷಯವಾಗಿ ಉಳಿದಿದೆ.
ಗ್ರಾಮದ ನಿವಾಸಿಗಳ ಪ್ರಕಾರ, ಹಲವಾರು ಬಡ ದಲಿತ ಕುಟುಂಬಗಳು ನಗರದ ಹೊರವಲಯದಲ್ಲಿರುವ ಬಂಜರು ಭೂಮಿಯಲ್ಲಿ ನೆಲೆಸಿದ್ದಾರೆ. ಅವರಿಗೆ ಈ 40 ವರ್ಷಗಳಲ್ಲಿ ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳು 9 ಎಕರೆ 13 ಸೆಂಟ್ಸ್ ಭೂಮಿಗೆ ಪಟ್ಟಾ ನೀಡುವ ಭರವಸೆ ನೀಡಿವೆ. ಆದರೆ, ಈವರೆಗೆ ಭರವಸೆ ಈಡೇರಿಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಕೇವಲ 68 ಕುಟುಂಬಗಳಿಗೆ ಮಾತ್ರ ಇ-ಪಟ್ಟಾಗಳನ್ನು ಒದಗಿಸಿದ್ದಾರೆ.
ಪಟ್ಟಾಗಳನ್ನು ನೀಡುವಲ್ಲಿನ ವಿಳಂಬಕ್ಕೆ ರಾಜ್ಯ ಕಂದಾಯ ಇಲಾಖೆಯು ಭೂಮಿಯನ್ನು ನಗರ ನಿಗಮಕ್ಕೆ ವರ್ಗಾಯಿಸಲು ಹಿಂದೇಟು ಹಾಕಿರುವುದೇ ಕಾರಣವೆಂದು ಹೇಳಲಾಗಿದೆ. ಅಧಿಕಾರಿಗಳ ನಿರಾಸಕ್ತಿಯನ್ನು ಇನ್ನು ಮುಂದೆ ಸಹಿಸಲು ಇಚ್ಛಿಸದ ‘ತೀರ್ಥಕಾಡು ದಲಿತ ನಿವಾಸಿಗಳ ರಕ್ಷಣಾ ಕಲ್ಯಾಣ ಸಂಘ’ವು ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದೆ. ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವವರೆಗೆ ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ ಎಂಬ ಪೋಸ್ಟರ್‌ಗಳನ್ನು ಗ್ರಾಮದ ಸುತ್ತಲೂ ಅಂಟಿಸಿದ್ದಾರೆ.
“40 ವರ್ಷಗಳಿಗೂ ಹೆಚ್ಚು ಕಾಲದ ಈ ನಿರ್ಲಕ್ಷ್ಯವನ್ನು ವಿರೋಧಿಸಿ ನಾವು ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ. ಮುಂದಿನ ಕೆಲವು ದಿನಗಳಲ್ಲಿ ಚೆನ್ನೈನಲ್ಲಿ ರ್ಯಾಲಿ ನಡೆಸಲು ಯೋಜಿಸುತ್ತಿದ್ದೇವೆ” ಎಂದು ಸಂಘದ ಅಧ್ಯಕ್ಷ ಮುತ್ತಮಿಲ್ ಪಾಂಡಿಯನ್ ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಈ ಲೇಖನ ಓದಿದ್ದೀರಾ?: ಮೋದಿ-ಟ್ರಂಪ್ ವ್ಯಾಪಾರ ಒಪ್ಪಂದ: ರೈತರ ಬದುಕಿಗೆ ಕೊಡಲಿಯಾಗುವುದೇ?
“ನಾವು ಮನೆಗಳನ್ನು ನಿರ್ಮಿಸಿದ್ದರೂ, ನಗರ ಸಭೆಯು ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಿರಾಕರಿಸಿದೆ. ನೀರಿನ ಪೈಪ್‌ಲೈನ್‌ಗಳ ಕೊರತೆಯಿಂದಾಗಿ, 100 ಲೀಟರ್ ಬೋರ್‌ವೆಲ್ ನೀರಿಗೆ (ಕುಡಿಯಲು ಯೋಗ್ಯವಲ್ಲದ) 80 ರೂ. ಮತ್ತು ಕುಡಿಯುವ ನೀರಿಗೆ 15 ರೂ. ಪಾವತಿಸಬೇಕಾಗಿದೆ” ಎಂದು ಹೇಳಿಕೊಂಡಿದ್ದಾರೆ.
ವಿದ್ಯುತ್ ಸಂಪರ್ಕದ ಕೊರತೆಯು ಗ್ರಾಮವನ್ನು ಬಾಧಿಸುತ್ತಿದೆ. ದುಷ್ಕರ್ಮಿಗಳು ಆಗಾಗ್ಗೆ ಈ ಪ್ರದೇಶವನ್ನು ಅಕ್ರಮ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. “ನಾವು ದಿನಗೂಲಿ ಕಾರ್ಮಿಕರು ಮತ್ತು ಬೇರೆಡೆ ಬಾಡಿಗೆ ಮನೆಗಳಲ್ಲಿ ವಾಸಿಸಲು ಶಕ್ತರಲ್ಲ. ಸ್ಥಳವು ಕತ್ತಲೆಯಾಗಿರುವುದರಿಂದ ಸೂರ್ಯೋದಯಕ್ಕೆ ಮೊದಲು ಕೆಲಸಕ್ಕೆ ಹೋಗಲು ಅಥವಾ ಸೂರ್ಯಾಸ್ತದ ನಂತರ ಮನೆಗೆ ಮರಳಲು ನಮಗೆ ಸಾಧ್ಯವಿಲ್ಲ. ವಿಷಕಾರಿ ಕೀಟಗಳು ಮತ್ತು ಹಾವುಗಳ ಭಯ ಪ್ರತಿ ರಾತ್ರಿ ನಮ್ಮನ್ನು ಕಾಡುತ್ತದೆ” ಎಂದು ಹೇಳಿದ್ದಾರೆ.
“ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ, ವಿದ್ಯಾರ್ಥಿಗಳು ಮೇಣದಬತ್ತಿಯ ಬೆಳಕಿನಲ್ಲಿಯೇ ಅಧ್ಯಯನ ಮಾಡಬೇಕಾಗಿದೆ. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡಲಾಗುವ ಉಚಿತ ಲ್ಯಾಪ್‌ಟಾಪ್‌ಗಳು ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಾವು ಬಳಸಲು ಸಾಧ್ಯವಾಗುತ್ತಿಲ್ಲ. ಲ್ಯಾಪ್‌ಟಾಪ್‌ಗಳು ಬಳಕೆಯಾಗದೆ ಉಳಿದಿವೆ. ಕಳೆದ 40 ವರ್ಷಗಳಲ್ಲಿ ನಮ್ಮ ಹಳ್ಳಿಯ ಒಂದೇ ಒಂದು ಮಗುವೂ ಪದವಿ ಪಡೆದಿಲ್ಲ. ಮೂಲಭೂತ ಅವಶ್ಯಕತೆಗಳಿಗೂ ನಾವು ಹಣವನ್ನು ಖರ್ಚು ಮಾಡಬೇಕಾಗಿದೆ. ವಿದ್ಯುತ್ ಇರುವ ಹತ್ತಿರದ ಪ್ರದೇಶಗಳಿಗೆ ತೆರಳಿ, ಹಣ ಪಾವತಿಸಿ ಫೋನ್‌ಗಳನ್ನು ಚಾರ್ಜ್ ಮಾಡುತ್ತಿದ್ದೇವೆ” ಎಂದು ಗ್ರಾಮದ ನಿವಾಸಿ ರೇಣುಕಾ (30) ಹೇಳಿದ್ದಾರೆ.
“ನಾವು ಗ್ರಾಮದ ಸಮಸ್ಯೆಯನ್ನು ಪರಿಶೀಲಿಸುತ್ತಿದ್ದೇವೆ. ವಿದ್ಯುತ್ ಮತ್ತು ನೀರಿನ ಸಂಪರ್ಕ ಸೇರಿದಂತೆ ಗ್ರಾಮಸ್ಥರ ಬೇಡಿಕೆಗಳನ್ನು ಪೂರೈಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ” ಎಂದು ಕಂದಾಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ.




