ಸುಡಾನ್‌ನಿಂದ ಜಿದ್ದಾಗೆ 1,100 ಭಾರತೀಯರ ಸ್ಥಳಾಂತರ
ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡ ವಿದೇಶಾಂಗ ಸಚಿವ
ಯುದ್ಧಪೀಡಿತ ಸುಡಾನ್‌ನಲ್ಲಿ ಸಿಲುಕಿದ್ದ ಸಾವಿರಾರು ಜನರ ಪೈಕಿ 360 ಭಾರತೀಯರು ಬುಧವಾರ ತಡರಾತ್ರಿ ಸುರಕ್ಷಿತವಾಗಿ ದೆಹಲಿಗೆ ಬಂದಿಳಿದಿದ್ದಾರೆ. ಈಗಲೂ ಸುಡಾನ್ ಹಲವೆಡೆ ಸಿಲುಕಿಕೊಂಡಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದೆ.
ಸುಡಾನ್‌ನಿಂದ ದೆಹಲಿಗೆ ಸುರಕ್ಷಿತವಾಗಿ ಮರಳಿದ ಭಾರತೀಯರ ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿದೇಶಾಂಗ ಸಚಿವ ಜೈಶಂಕರ್ ʼಆಪರೇಶನ್ ಕಾವೇರಿʼ ಮೂಲಕ ʼಸುಡಾನ್‌ನ ವಿವಿಧ ಪ್ರದೇಶಗಳಲ್ಲಿ ಸಿಲುಕಿದ್ದ 1,100 ಮಂದಿ ಭಾರತೀಯರನ್ನು ಸುರಕ್ಷಿತವಾಗಿ ಸೌದಿ ಅರೇಬಿಯಾದ ʼಜಿದ್ದಾʼಗೆ ಸ್ಥಳಾಂತರಿಸಲಾಗಿದೆ. ಈ ಪೈಕಿ 360 ಮಂದಿಯ ಮೊದಲ ತಂಡವನ್ನು ಜಿದ್ದಾದಿಂದ ಭಾರತಕ್ಕೆ ಕರೆತರಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಹಕ್ಕಿಪಿಕ್ಕಿ ಜನಾಂಗದವರು ಸೇರಿದಂತೆ ಸುಡಾನ್‌ನಲ್ಲಿ 3 ಸಾವಿರಕ್ಕೂ ಹೆಚ್ಚು ಭಾರತೀಯರು ಸಿಲುಕಿಕೊಂಡಿದ್ದರು ಎನ್ನಲಾಗಿದೆ. ನೌಕಾಪಡೆಯ ʼಐಎನ್‌ಎಸ್ ಸುಮೇಧʼ ನೌಕೆ ಮತ್ತು ವಾಯಸೇನೆಯ ವಿಮಾನಗಳನ್ನು ಬಳಸಿ ಈವರೆಗೆ ಸಾವಿರಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಉಳಿದವರ ರಕ್ಷಣಾ ಕಾರ್ಯಾಚರಣೆ ಕೂಡ ಜಾರಿಯಲ್ಲಿದೆ.
ಸುಡಾನ್‌ನ ಸೇನಾ ಸಂಘರ್ಷದಲ್ಲಿ ಈವರೆಗೆ 400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ವಿದ್ಯುತ್, ಕುಡಿಯುವ ನೀರಿನ ಸರಬರಾಜು ಎಲ್ಲವೂ ಸ್ಥಗಿತಗೊಂಡಿವೆ. ಹಲವು ದಿನಗಳಿಂದ ಅಂಗಡಿ ಮುಂಗಟ್ಟುಗಳು ಕೂಡ ಮುಚ್ಚಲ್ಪಟ್ಟಿದ್ದು, ಜನಸಾಮಾನ್ಯರು ಆಹಾರಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.





