ಭಾರತದಲ್ಲಿ 5 ವರ್ಷದೊಳಿಗನ ಸುಮಾರು 37.07% ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾಗಿದೆ. ಅವರು ಕುಬ್ಜತೆಗೆ ತುತ್ತಾಗಿದ್ದಾರೆ ಎಂದುಯ ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದೆ.
ನಡೆಯುತ್ತಿರುವ ಮುಂಗಾರು ಸಂಸತ್ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಕೇಳಲಾಗಿದ್ದ ಪ್ರಶ್ನೆಯೊಂದಕ್ಕೆ ಹಾಯಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸಾವಿತ್ರಿ ಠಾಕೂರ್ ಉತ್ತರ ನೀಡಿದ್ದಾರೆ. “ಪೋಷಣ ಟ್ರ್ಯಾಕರ್‌ನಲ್ಲಿ ನೋಂದಾಯಿಸಿಕೊಂಡಿರುವ ಐದು ವರ್ಷದೊಳಗಿನ ಮಕ್ಕಳಲ್ಲಿ 37.07% ಮಕ್ಕಳು ಕುಬ್ಜತೆಯನ್ನು ಎದುರಿಸುತ್ತಿದ್ದಾರೆ. ಅಲ್ಲದೆ, 15.93% ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ. 5.46% ಮಕ್ಕಳು ಕೃಶಕಾಯಕ್ಕೆ ತುತ್ತಾಗಿದ್ದಾರೆ” ಎಂದು ವಿವರಿಸಿದ್ದಾರೆ.
ಮಕ್ಕಳ ಬೆಳವಣಿಗೆ ಕುಂಠಿತದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳೇ ಮೊದಲ ನಾಲ್ಕು ಸ್ಥಾನಗಳಲ್ಲಿವೆ. ಉತ್ತರ ಪ್ರದೇಶದಲ್ಲಿ 48.83% ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಕಂಡುಬಂದಿದ್ದು, ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ನಂತರದ ಮೂರು ಸ್ಥಾನಗಳಲ್ಲಿ – ಜಾರ್ಖಂಡ್ (ಶೇ.43.26), ಬಿಹಾರ (ಶೇ.42.68) ಹಾಗೂ ಮಧ್ಯಪ್ರದೇಶ (ಶೇ.42.09) ರಾಜ್ಯಗಳಿವೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ, 2025ರ ಜೂನ್‌ವರೆಗೆ ಆರು ವರ್ಷದೊಳಗಿನ ಸುಮಾರು 8.61 ಕೋಟಿ ಮಕ್ಕಳು ಪೋಷಣ ಟ್ರ್ಯಾಕರ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಕಳೆದ ವರ್ಷ ಈ ಸಂಖ್ಯೆಯು 8.91 ಕೋಟಿ ಮಕ್ಕಳನ್ನು ಒಳಗೊಂಡಿತ್ತು. ಈ ವರ್ಷ, ನೋಂದಾಯಿತ ಮಕ್ಕಳ ಸಂಖ್ಯೆ ಇಳಿಕೆ ಕಂಡಿದೆ.




