ಮಹಾರಾಷ್ಟ್ರದ ನವಿ ಮುಂಬೈನ ವಾಷಿ ಪ್ರದೇಶದ ಸೆಕ್ಟರ್ 14 ರಲ್ಲಿರುವ ರಾಹೇಜಾ ರೆಸಿಡೆನ್ಸಿ ಎಂಬ ಬಹುಮಹಡಿ ನಿವಾಸ ಸಮುಚ್ಚಯದಲ್ಲಿ ದೀಪಾವಳಿಯ ಸಂಭ್ರಮದ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡು ಭೀಕರ ದುರಂತ ಸಂಭವಿಸಿದೆ. ಮಂಗಳವಾರ ಬೆಳಗಿನ ಸುಮಾರಿಗೆ ಸಂಭವಿಸಿದ ಈ ಅಗ್ನಿ ಅವಘಡದಲ್ಲಿ ನಾಲ್ವರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ವರದಿ ಪ್ರಕಾರ, ಬೆಂಕಿ ರಾತ್ರಿ ಸುಮಾರು 12.30ರ ಸುಮಾರಿಗೆ 10ನೇ ಮಹಡಿಯಲ್ಲಿರುವ ಒಂದು ಫ್ಲಾಟ್‌ನಲ್ಲಿ ಕಾಣಿಸಿಕೊಂಡಿದ್ದು, ಅದು ಅತೀ ವೇಗವಾಗಿ 11ನೇ ಹಾಗೂ 12ನೇ ಮಹಡಿಗಳಿಗೆ ಹರಡಿತು. ಬೆಂಕಿಯ ತೀವ್ರತೆಯಿಂದಾಗಿ ಕಟ್ಟಡದ ಒಳಗಿನ ನಿವಾಸಿಗಳು ಸಿಕ್ಕಿಹಾಕಿಕೊಂಡಿದ್ದರು. ಈ ಘಟನೆಯಲ್ಲಿ ಇಬ್ಬರು ಮಹಿಳೆಯರು, ಒಬ್ಬ ಪುರುಷ ಮತ್ತು ಆರು ವರ್ಷದ ಬಾಲಕಿ ಜೀವ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ RSS- ನೂರು ವರ್ಷಗಳು : ಬಿಟ್ಟರೂ ಬಿಡದ ತಾತ್ವಿಕ ಪ್ರಶ್ನೆಗಳು
ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ವಾಷಿಯಲ್ಲಿರುವ ಎರಡು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಗ್ನಿಶಾಮಕ ಇಲಾಖೆಯ 40ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಎಂಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಳಗಿನ ನಾಲ್ಕು ಗಂಟೆ ವೇಳೆಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಯಶಸ್ವಿಯಾದವು.
ಬೆಂಕಿ ಏಕೆ ಕಾಣಿಸಿಕೊಂಡಿತು ಎಂಬುದರ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಾಥಮಿಕವಾಗಿ ಇದು ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಸಂಭವಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ದೀಪಾವಳಿಯ ಸಂಭ್ರಮದ ವೇಳೆ ನಡೆದ ಈ ದುರಂತವು ಸ್ಥಳೀಯರಲ್ಲಿ ದುಃಖ ಮತ್ತು ಆತಂಕವನ್ನು ಉಂಟುಮಾಡಿದೆ.





