ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದು ಚಂಡೀಪುರ ವೈರಸ್ ಸೋಂಕು ಶಂಕೆ ವ್ಯಕ್ತವಾಗಿದೆ. ಇನ್ನೂ ಇಬ್ಬರು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಶನಿವಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಬ್ಬರು ಮಕ್ಕಳು ಜಿಲ್ಲೆಯ ಹಿಮ್ಮತ್‌ನಗರದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ನಾಲ್ವರು ಮಕ್ಕಳ ಪೈಕಿ ಒಬ್ಬರು ಸಬರಕಾಂತ ಜಿಲ್ಲೆಯವರಾದರೆ ಮತ್ತಿಬ್ಬರು ನೆರೆಯ ಅರಾವಳಿ ಜಿಲ್ಲೆಯವರಾಗಿದ್ದಾರೆ. ನಾಲ್ಕನೇ ಮಗು ರಾಜಸ್ಥಾನ ಮೂಲದ ಮಗುವಾಗಿದೆ.
ಜ್ವರ ಕಾಣಿಸಿಕೊಳ್ಳುವುದು, ಜ್ವರವಿರುವಂತೆ ಕೆಲವು ಲಕ್ಷಣಗಳು, ತೀವ್ರವಾದ ಮೆದುಳಿನ ಉರಿಯೂತವು ಚಂಡೀಪುರ ವೈರಸ್ ಸೋಂಕಿನ ಲಕ್ಷಣಗಾಗಿದೆ. ಈ ಸೋಂಕು ಸೊಳ್ಳೆ, ಉಣ್ಣಿ, ನೊಣದಿಂದ ಹರಡುತ್ತದೆ.
ಎಲ್ಲಾ ಆರು ಮಕ್ಕಳ ರಕ್ತದ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ (ಎನ್‌ಐವಿ) ಕಳುಹಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ ಎಂದು ಸಬರಕಾಂತ ಮುಖ್ಯ ಜಿಲ್ಲಾ ಆರೋಗ್ಯ ಅಧಿಕಾರಿ ರಾಜ್ ಸುತಾರಿಯಾ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಶಿವಮೊಗ್ಗದಲ್ಲಿ ಝೀಕಾ ವೈರಸ್‌ಗೆ ಮೊದಲ ಬಲಿ
ಜುಲೈ 10ರಂದು ನಾಲ್ಕು ಮಕ್ಕಳು ಸಾವನ್ನಪ್ಪಿದ ನಂತರ ಹಿಮ್ಮತ್‌ನಗರ ಸಿವಿಲ್ ಆಸ್ಪತ್ರೆಯ ಮಕ್ಕಳ ವೈದ್ಯರು ಚಂಡಿಪುರ ವೈರಸ್‌ನ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಇತರ ಇಬ್ಬರು ಮಕ್ಕಳಲ್ಲಿಯೂ ಇದೇ ರೀತಿಯ ಲಕ್ಷಣಗಳು ಕಾಣಿಸಿಕೊಂಡಿವೆ. ಈ ಮಕ್ಕಳು ಕೂಡಾ ಅದೇ ವೈರಸ್‌ಗೆ ಒಳಗಾಗಿದ್ದಾರೆ ಎಂದು ರಾಜ್ ಸುತಾರಿಯಾ ಶಂಕಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಮಕ್ಕಳು ಕೂಡ ರಾಜಸ್ಥಾನ ಮೂಲದವರು ಎಂದು ತಿಳಿಸಿದ್ದಾರೆ. ಶಂಕಿತ ವೈರಲ್ ಸೋಂಕಿನಿಂದ ಮಗುವಿನ ಸಾವಿನ ಬಗ್ಗೆ ರಾಜಸ್ಥಾನದ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಸೋಂಕನ್ನು ತಡೆಗಟ್ಟಲು, ಪೀಡಿತ ಪ್ರದೇಶಗಳಲ್ಲಿ ನೊಣಗಳ ನಾಶಕ್ಕೆ ಬೇಕಾದ ಕ್ರಮಗಳನ್ನು ನಡೆಸಲು ಜಿಲ್ಲಾ ಅಧಿಕಾರಿಗಳು ತಂಡಗಳನ್ನು ನಿಯೋಜಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




