ವಿಶ್ವದಲ್ಲಿ ಅತೀ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ದೇಶಗಳ ಪೈಕಿ ಭಾರತವು ಎರಡನೇ ಸ್ಥಾನದಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ನೀಡಿದ ವರದಿ ಪ್ರಕಾರ 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ 14% ಜನರು ಮಧುಮೇಹಕ್ಕೆ ತುತ್ತಾಗಿದ್ದಾರೆ.
WHO ಅಡಿಯಲ್ಲಿ ಲ್ಯಾನ್ಸೆಟ್ ಜಾಗತಿಕ ಆರೋಗ್ಯ ವರದಿಯನ್ನು ಬಿಡುಗಡೆ ಮಾಡಲಾಗಿದೆ. ವರದಿಯು; ಭಾರತದಲ್ಲಿರುವ ಮಧುಮೇಹ ರೋಗಿಗಳ ಪೈಕಿ ಪ್ರತಿ 10 ಮಂದಿಯಲ್ಲಿ 4 ಮಂದಿಗೆ ತಮಗೆ ಮಧುಮೇಹ ರೋಗವಿದೆ ಎಂಬುದರ ಅರಿವು ಇಲ್ಲ ಎಂದು ಹೇಳಿದೆ.
ಭಾರತದಲ್ಲಿ ಮುಂಬೈ ಇಂಟರ್‌ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಾಪ್ಯುಲೇಶನ್ ಸೈನ್ಸಸ್ ಮತ್ತು ಮಿಚಿಗನ್, ಹಾರ್ವರ್ಡ್ ವಿವಿಯ ಟಿಎಚ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಸಹಯೋಗದಲ್ಲಿ ಸಮೀಕ್ಷೆ ನಡೆಸಲಾಗಿದೆ. 45 ವರ್ಷ ಮೇಲ್ಪಟ್ಟ ಒಟ್ಟು 57,080 ಜನರನ್ನು ಅಧ್ಯಯನಕ್ಕೆ ಒಳಗಪಡಿಸಲಾಗಿದೆ. ಅವರಲ್ಲಿ, 20% ಜನರು ಮಧುಮೇಹಕ್ಕೆ ತುತ್ತಾಗಿದ್ದಾರೆ. ಬದಲಾದ ಜೀವನಶೈಲಿ ಮತ್ತು ಆಹಾರ ಪದ್ದತಿಯ ಪರಿಣಾಮವಾಗಿ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗುತ್ತಿರುವ ಕಾರಣ, ಹಲವರಲ್ಲಿ ಮಧುಮೇಹ ಕಾಣಿಸಿಕೊಳ್ಳುತ್ತಿದೆ. ಇದು ಗ್ರಾಮೀಣ ಪ್ರದೇಶಗಳಿಗಿಂತ ನಗರ ಭಾಗದಲ್ಲಿ ಹೆಚ್ಚಾಗಿ ಕಂಡುಬಂದಿದೆ ಎಂದು ವರದಿ ಹೇಳಿದೆ.
ಡಯಾಬಿಟಿಸ್ ಜೊತೆಗೆ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆಯು ಕೂಡಾ ಗಣನೀಯವಾಗಿ ಏರಿಕಯಾಗುತ್ತಿದೆ ಎನ್ನುವ ಆಘಾತಕಾರಿ ಮಾಹಿತಿಯನ್ನು ವರದಿಯು ಉಲ್ಲೇಖಿಸಿದೆ.
ಸಾಮನ್ಯವಾಗಿ ವಯಸ್ಕರನ್ನು ಕಾಡುತ್ತಿದ್ದ ಮಧುಮೇಹವು ಈಗ ಸಣ್ಣ ಮಕ್ಕಳಲ್ಲೂ ಕಾಣಿಸಿಕೊಳ್ಳತೊಡಗಿದೆ. ಚಟುವಟಿಕೆ ರಹಿತ ಜೀವನ ಪದ್ದತಿ ಮತ್ತು ಅತಿಯಾದ ಜಂಕ್ ಫುಡ್ ಸೇವನೆಯ ಪರಿಣಾಮವಾಗಿ 18 ವರ್ಷದ ಒಳಗಿನವರನ್ನೂ ಈ ಡಯಾಬಿಟಿಸ್ ಮತ್ತು ಅಧಿಕ ರಕ್ತದೊತ್ತಡ ಆವರಿಸಿಕೊಂಡಿದೆ. ಆರಂಭದಲ್ಲಿಯೇ ರೋಗ ಲಕ್ಷಣಗಳನ್ನು ಪತ್ತೆಹಚ್ಚಿದರೆ ಕಣ್ಣು, ಮೂತ್ರಪಿಂಡ, ಹೃದಯ ಮತ್ತು ದೇಹದ ಇತರ ಭಾಗಗಳಿಗೆ ಆಗುವ ಅಪಾಯವನ್ನು ತಡೆಯಬಹುದು ಎಂದು ವರದು ಸೂಚಿಸಿದೆ
ದೇಶದಲ್ಲಿ 2019ರಲ್ಲಿ ಸಾವಿಗೀಡಾದ ಜನರ ಪೈಕಿ 3% ಮಂದಿ ಮಧುಮೇಹದ ಕಾರಣಕ್ಕಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯು ತಿಳಿಸಿದೆ.




