ಭಾರತದ ಸೇವಾ ವಲಯವು ಕಳೆದ 6 ವರ್ಷಗಳಲ್ಲಿ ಸುಮಾರು 4 ಕೋಟಿ (40 ಮಿಲಿಯನ್) ಉದ್ಯೋಗಗಳನ್ನು ಸೃಷ್ಟಿಸಿದೆ. ದೇಶದ ಉದ್ಯೋಗ ಬೆಳವಣಿಗೆಯಲ್ಲಿ ಪ್ರಮುಖ ಕೊಡುಗೆ ನೀಡಿದೆ ಎಂದು ನೀತಿ ಆಯೋಗ ಹೇಳಿಕೊಂಡಿದೆ.
ನೀತಿ ಆಯೋಗವು ‘ಭಾರತದ ಸೇವಾ ವಲಯ: ಉದ್ಯೋಗ ಪ್ರವೃತ್ತಿಗಳು ಮತ್ತು ರಾಜ್ಯ ಮಟ್ಟದ ಚಲನಶೀಲತೆ’ ಹೆಸರಿನಲ್ಲಿ ಮಂಗಳವಾರ ವರದಿ ಬಿಡುಗಡೆ ಮಾಡಿದೆ. ವರದಿಯ ಪ್ರಕಾರ, ಸೇವಾ ವಲಯವು 2023–24ರಲ್ಲಿ ಸುಮಾರು 18.8 ಕೋಟಿ ಕಾರ್ಮಿಕರನ್ನು ಒಳಗೊಂಡಿದೆ. ಕೃಷಿಯ ನಂತರ ಎರಡನೇ ಅತಿದೊಡ್ಡ ಉದ್ಯೋಗದಾತ ವಲಯವಾಗಿ ಹೊರಹೊಮ್ಮಿದೆ.
ಆರ್ಥಿಕ ಚೇತರಿಕೆಯಲ್ಲಿಯೂ ಸೇವಾ ವಲಯವು ತನ್ನ ಸ್ಥಿತಿಸ್ಥಾಪಕತ್ವವನ್ನು (ಪುನಶ್ಚೈತನ್ಯ) ಸಾಬೀತುಪಡಿಸಿದೆ. ಕೋವಿಡ್ ನಂತರದಲ್ಲಿಯೂ ಈ ವಲಯದ ಪುನಶ್ಚೈತನ್ಯ ಶಕ್ತಿಯು ಗಮನಾರ್ಹವಾಗಿದೆ. ಆರ್ಥಿಕತೆಯಲ್ಲಿ ನಿರ್ಮಾಣ ಮತ್ತು ಸೇವಾ ವಲಯಗಳು ಮಾತ್ರ ಸ್ಥಿರವಾದ ಉದ್ಯೋಗ ಸೃಷ್ಟಿಕರ್ತ ವಲಯಗಳಾಗಿ ಎದ್ದು ಕಾಣುತ್ತವೆ. ಉತ್ಪಾದನಾ ವಲಯವು ಉತ್ಪಾದನೆಯ ಲಾಭಗಳ ಮೇಲೆ ಹೆಚ್ಚು ಕೇಂದ್ರೀಕರಿಸಿದ್ದು, ದುರ್ಬಲ ಉದ್ಯೋಗ ಸೃಷ್ಠಿಯೊಂದಿಗೆ ಹಿಂದುಳಿದಿವೆ ಎಂದು ವರದಿ ವಿವರಿಸಿದೆ.
ಆದಾಗ್ಯೂ, ಸೇವಾ ಆರ್ಥಿಕತೆಯು ‘ದ್ವಂದ್ವ ಭಿನ್ನತೆ’ಯಿಂದ ನಿರೂಪಿಸಲ್ಪಟ್ಟಿದೆ: ಮಾಹಿತಿ ತಂತ್ರಜ್ಞಾನ, ಹಣಕಾಸು ಹಾಗೂ ವೃತ್ತಿಪರ ಸೇವೆಗಳಂತಹ ಹೆಚ್ಚು ಬಂಡವಾಳದ ವಿಭಾಗಗಳಲ್ಲಿ ಉತ್ಪಾದಕತೆಯು ಸಮೃದ್ಧವಾಗಿದೆ. ಆದರೆ, ಸಣ್ಣ ನೆಲೆಯನ್ನು ಬಳಸಿಕೊಂಡಿವೆ. ವ್ಯಾಪಾರ ಮತ್ತು ಸಾರಿಗೆಯಂತಹ ಸಾಂಪ್ರದಾಯಿಕ ಉಪ-ವಲಯಗಳು ಉದ್ಯೋಗ ಸೃಷ್ಟಿಯಲ್ಲಿ ಪ್ರಾಬಲ್ಯ ಹೊಂದಿವೆ. ಆದರೆ, ಈ ವಿಭಾಗಗಳು ಹೆಚ್ಚಾಗಿ ಕಡಿಮೆ ವೇತನದ ಬೆಳವಣಿಗೆಯಿಂದ ಗುರುತಿಸಲ್ಪಟ್ಟಿವೆ.
ಸೇವಾ ವಲಯದ ವಿಸ್ತರಣೆಯ ಫಲಾನುಭವವು ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ಅಸಮಾನವಾಗಿವೆ. ಈ ವಲಯದಲ್ಲಿ ಉದ್ಯೋಗದಲ್ಲಿನ ಬೆಳವಣಿಗೆಯು ನಗರ ಕೇಂದ್ರಿತವಾಗಿ ಅಗಾಧವಾಗಿದೆ. 2023–24ರಲ್ಲಿ ಎಲ್ಲ ನಗರ ಪ್ರದೇಶಗಳ ಒಟ್ಟು ಕಾರ್ಮಿಕರಲ್ಲಿ 60%ಗೂ ಹೆಚ್ಚು ಜನರು ಸೇವಾ ವಲಯದ ಉದ್ಯೋಗದಲ್ಲಿದ್ದರು. ನಗರ ಕಾರ್ಮಿಕ ಮಾರುಕಟ್ಟೆಗಳಲ್ಲಿ ಏಕೈಕ ಅತಿದೊಡ್ಡ ಉದ್ಯೋಗದ ಮೂಲವಾಗಿ ಈ ವಲಯವು ಅಗ್ರ ಸ್ಥಾನ ಪಡೆದಿದೆ.
ಇದಕ್ಕೆ ತದ್ವಿರುದ್ಧವಾಗಿ, ಗ್ರಾಮೀಣ ಪ್ರದೇಶಗಳಲ್ಲಿ 20%ಗಿಂತ ಕಡಿಮೆ ಜನರು ಸೇವಾ ವಲಯದ ಉದ್ಯೋಗಗಳಲ್ಲಿ ತೊಡಗಿದ್ದಾರೆ. 2017–18 ಮತ್ತು 2023–24ರ ನಡುವೆ, ಗ್ರಾಮೀಣ ಉದ್ಯೋಗದಲ್ಲಿ ಸೇವಾ ವಲಯದ ಪಾಲು ವಾಸ್ತವವಾಗಿ 19.9% ರಿಂದ 18.9%ಕ್ಕೆ ಸ್ವಲ್ಪ ಇಳಿಕೆ ಕಂಡಿದೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ನಿತೀಶ್ ಕುಮಾರ್ ಮತ್ತು ಬಿಜೆಪಿಯ ಸ್ವಯಂ ಸೋಲು
ಸೇವಾ ಕ್ಷೇತ್ರದಲ್ಲಿ ಲಿಂಗ ವಿಭಜನೆಯೂ ಎದ್ದು ಕಾಣುತ್ತಿದೆ. ನಗರ ಪ್ರದೇಶಗಳಲ್ಲಿ ಉದ್ಯೋಗದಲ್ಲಿರುವ ಮಹಿಳೆಯರ ಪೈಕಿ 60% ಮಹಿಳೆಯರು ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ 10.5% ಮಹಿಳೆಯರು ಮಾತ್ರ ಸೇವಾ ವಲಯದಲ್ಲಿ ತೊಡಗಿದ್ದಾರೆ. ಇದಲ್ಲದೆ, ಗ್ರಾಮೀಣ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿ ಕಡಿಮೆ ವೇತನದ ಚಟುವಟಿಕೆಗಳಿಗೆ ಸೀಮಿತವಾಗಿದೆ.
ಕಾರ್ಮಿಕರ ಗಳಿಕೆಯ ಅಂತರವು ಹೆಚ್ಚು ಅಸಮಾನವಾಗಿದೆ. ಗ್ರಾಮೀಣ ಮಹಿಳೆಯರು ದಿನಕ್ಕೆ ಸರಾಸರಿ 213 ರೂ. ಗಳಿಸುತ್ತಾರೆ. ಇದು ಗ್ರಾಮೀಣ ಪುರುಷರ ಸರಾಸರಿ ದೈನಂದಿನ ವೇತನದ 451 ರೂ.ಗೆ ಹೋಲಿಸಿದರೆ, 47%ರಷ್ಟು ಅಂತರವಿದೆ.
ನಗರ ಪ್ರದೇಶಗಳಲ್ಲಿ ವೇತನದ ಅಂತರವು ಗಮನಾರ್ಹವಾಗಿ ಕಡಿಮೆಯಾಗಿದೆ. ನಗರ ಪ್ರದೇಶಗಳಲ್ಲಿ ಪುರುಷರು ದಿನಕ್ಕೆ ರೂ. 480 ಗಳಿಸಿದರೆ, ಮಹಿಳೆಯರು ಸರಾಸರಿ 403 ರೂ. ಗಳಿಸುತ್ತಾರೆ. ಇಲ್ಲಿನ ಅಂತರವು 16% ಇದೆ.




