ಇತ್ತೀಚೆಗಿನ ದಿನಗಳಲ್ಲಿ ಭಾರತದಲ್ಲಿ ಮಹಿಳೆಯರು ಅದರಲ್ಲೂ ಜೆನ್ ಝೀ ಯುವತಿಯರು ಉದ್ಯೋಗ, ಶಿಕ್ಷಣ ಹಾಗೂ ಪ್ರವಾಸಕ್ಕಾಗಿ ಇಂಟರ್ ಸಿಟಿ ಪ್ರಯಾಣಕ್ಕಾಗಿ ಹೆಚ್ಚಾಗಿ ಬಸ್ ಪ್ರಯಾಣವನ್ನೇ ಬಳಸುತ್ತಾರೆ ಎಂದು ರೆಡ್ ಬಸ್ ಪಿಂಕ್ ಸಮೀಕ್ಷಾ ವರದಿ ಹೇಳಿದೆ. ಕಳೆದ ಕೆಲವು ವರ್ಷಗಳಿಂದ ಪ್ರಯಾಣದ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚಳವಾಗಿದೆ ಎಂದು ಕೂಡ ಹೇಳಿದೆ.
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹತ್ವದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯ ಬಗ್ಗೆ ಭಾರಿ ದೊಡ್ಡ ಮಟ್ಟದಲ್ಲಿ ಪರ ವಿರೋಧ ಅಭಿಪ್ರಾಯಗಳು ಕೇಳಿ ಬಂದಿದ್ದವು. ಉಚಿತ ಯೋಜನೆಗಳ ಬಗ್ಗೆ ಬಿಜೆಪಿಯಂತೂ ತೀವ್ರ ಟೀಕಿಸಿತ್ತು. ಟೀಕಿಸಿದ್ದವರಲ್ಲಿ ಬಿಜೆಪಿ ನಾಯಕಿಯರೂ ಇದ್ದರು. ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಹೆಚ್ಚಾಗಿ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿರುವುದು ಈಗ ದಾಖಲೆ. ರೆಡ್ ಬಸ್ ನಡೆಸಿದ ಈ ಸಮೀಕ್ಷೆ ರಾಜ್ಯ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯನ್ನು ಪ್ರಶಂಸಿಸುವಂತಿದೆ. ಇನ್ನೊಂದೆಡೆ ಸರ್ಕಾರದ ಉಚಿತ ಯೋಜನೆಗೂ ಮತ್ತು ರೆಡ್ ಬಸ್ ನಡೆಸಿರುವ ಸಮೀಕ್ಷಾ ವರದಿಗೂ ಅಜಗಜಾಂತರವಿದೆ ಎಂದು ಕೂಡ ಹೇಳಲಾಗುತ್ತಿದೆ.
ಅದೇನೇ ಇರಲಿ, ಸರ್ಕಾರೇತರ ಸಂಸ್ಥೆಯಾಗಿರುವ ರೆಡ್‌ಬಸ್ ಮಹಿಳೆಯರ ಬಸ್ ಪ್ರಯಾಣದ ಬಗ್ಗೆ ಅಂತರರಾಷ್ಟ್ರೀಯ ಮಹಿಳಾ ವಾರ (International Women’s Week)ದ ಸಂದರ್ಭದಲ್ಲಿ ಬಿಡುಗಡೆ ಮಾಡಿರುವ ಸಮೀಕ್ಷಾ ವರದಿಯು, ಭಾರತದಾದ್ಯಂತ ಮಹಿಳೆಯರು ಬಸ್ ಪ್ರಯಾಣವನ್ನು ಹೆಚ್ಚಾಗಿ ಬಳಸುತ್ತಿರುವ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ. ಅದರಲ್ಲೂ ಯುವತಿಯರು ಹೆಚ್ಚಾಗಿ ಪ್ರವಾಸದ ದೃಷ್ಟಿಯಲ್ಲಿ ಹೆಚ್ಚಾಗಿ ಏಕಾಂಗಿ(ಸೋಲೋ ಟ್ರಿಪ್) ಪ್ರಯಾಣಗಳನ್ನು ಬಸ್ಸುಗಳಲ್ಲೇ ಮಾಡುತ್ತಿದ್ದಾರೆ ಎಂದು ಹೇಳಿದೆ.
2019 ಮತ್ತು 2025ರ ನಡುವೆ ಭಾರತದಲ್ಲಿ ಮಹಿಳೆಯರ ಬಸ್ ಪ್ರಯಾಣವು 136%ರಷ್ಟು ಏರಿಕೆಯಾಗದೆ ಎಂದು ವರದಿ ಬಹಿರಂಗಪಡಿಸಿದೆ. ಮಾತ್ರವಲ್ಲದೇ, ಇದು ಅದೇ ಅವಧಿಯಲ್ಲಿ ಬಸ್ಸುಗಳಲ್ಲಿ ಪ್ರಯಾಣ ಬೆಳೆಸಿದ ಒಟ್ಟಾರೆ ಪ್ರಯಾಣಿಕರ ಪ್ರಮಾಣಕ್ಕಿಂತ ದುಪ್ಪಟ್ಟಾಗಿದೆ. ಈ ಹಿಂದೆ ಈ ಪ್ರಮಾಣ 72%ರಷ್ಟಿತ್ತು.
ಇಂಟರ್‌ಸಿಟಿ ಬಸ್ ಪ್ರಯಾಣಗಳಲ್ಲಿ ಅಂದರೆ, ನಗರದಿಂದ ನಗರಕ್ಕೆ ಪ್ರಯಾಣ ಬೆಳೆಸುವ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 2019ರಲ್ಲಿ ಶೇ. 23ರಷ್ಟಿದ್ದದ್ದು ಈಗ ಶೇ.33ರಷ್ಟಕ್ಕೆ ಏರಿದೆ (ಪ್ರತಿ ಮೂರು ಪ್ರಯಾಣಿಕರಲ್ಲಿ ಒಬ್ಬರು ಮಹಿಳಾ ಪ್ರಯಾಣಿಕರು). ಇದು ಮಹಿಳೆಯರು ಹಾಗೂ ಯುವತಿಯರು ಏಕಾಂಗಿಯಾಗಿ, ಸ್ವತಂತ್ರರಾಗಿ ಪ್ರಯಾಣ ಬೆಳೆಸುವ ಪ್ರವೃತ್ತಿ ಹೆಚ್ಚಳವಾಗಿರುವುದನ್ನು ಸೂಚ್ಯವಾಗಿ ಹೇಳುತ್ತದೆ.
ದಕ್ಷಿಣ ಭಾರತದ ಮಹಿಳೆಯರೇ ಹೆಚ್ಚು
ಹೌದು, ಇದರಲ್ಲಿ ದಕ್ಷಿಣ ಭಾರತದ ಮಹಿಳೆಯರೇ ಹೆಚ್ಚಿನ ಪಾಲನ್ನು ಪಡೆದಿದ್ದಾರೆ ಎನ್ನುವುದನ್ನು ಗಮನಾರ್ಹ. 2019ರಲ್ಲಿ ಶೇ.24ರಷ್ಟಿದ್ದ ಮಹಿಳಾ ಪ್ರಯಾಣಿಕರ ಪ್ರಮಾಣ 2025ರಲ್ಲಿ ಶೇ.34ಕ್ಕೆ ಏರಿಕೆಯಾಗಿದೆ. ಈ ಪ್ರವೃತ್ತಿ ಉತ್ತರ, ಪೂರ್ವ ಹಾಗೂ ಪಶ್ಚಿಮ ಭಾರತದ ಮಹಿಳೆಯರಲ್ಲೂ ಗಣನೀಯವಾಗಿ ಏರಿಕೆಯಾಗುತ್ತಿದೆ ಎಂದು ವರದಿ ವಿವರಿಸಿದೆ. ಇದು ರಾಷ್ಟ್ರವ್ಯಾಪಿ ಮಹಿಳೆಯರ ಸಬಲೀಕರಣದ ಹೊಸ ಮಜಲು ಎಂದೇ ಇದನ್ನು ವಿಶ್ಲೇಷಿಸಲಾಗುತ್ತಿದೆ.
ಸೋಲೋ ಟ್ರಿಪ್‌ಗಳನ್ನು ಇಷ್ಟಪಡುವ “ಜೆನ್ ಝಿ”
ಇನ್ನು, ಸೋಲೋ ಟ್ರಿಪ್‌ಗಳನ್ನು ಹೆಚ್ಚಾಗಿ ಜೆನ್ ಝೀಗಳು ಹೆಚ್ಚಾಗಿ ಇಷ್ಟಪಡುತ್ತಾರೆ ಎಂದು ಇದು ಹೇಳಿದ್ದು, 14ರಿಂದ 29 ವರ್ಷಗಳ ಯುವತಿಯರೇ ಹೆಚ್ಚಾಗಿ ಬಸ್ ಪ್ರಯಾಣವನ್ನು ಹೆಚ್ಚಾಗಿ ಬಳಸುತ್ತಾರೆ ಎನ್ನುವುದು ಇಲ್ಲಿ ಮುಖ್ಯಾಂಶ. ಒಟ್ಟು ಶೇ.68ರಷ್ಟು ಇರುವ ಮಹಿಳಾ ಏಕಾಂಗಿ ಪ್ರಯಾಣಿಕರಲ್ಲಿ ಶೇ.60ರಷ್ಟು 14-29ರ ವಯಸ್ಸಿನ ಯುವತಿಯರು ಸೋಲೋ ಟ್ರಿಪ್ ಗಳನ್ನು ಇಷ್ಟ ಪಡುತ್ತಾರೆ ಎನ್ನುವುದು ಉಲ್ಲೇಖನೀಯ.
ಪ್ರಮುಖಾಂಶವೆಂದರೇ, ವರ್ಷದಲ್ಲಿ ಐದು ಬಾರಿ ಪ್ರಯಾಣ ಬೆಳೆಸಿದರೇ, ಆ ಪೈಕಿ ಎರಡು ಪ್ರಯಾಣವನ್ನು ಏಕಾಂಗಿಯಾಗಿಯೇ ಮಾಡಲು ಇಚ್ಛಿಸಿದ್ದಾರೆ. 500 ಕಿ.ಮೀಟರ್‌ಗಳಿಗಿಂತ ಹೆಚ್ಚು ಅಂತರವಿರುವ ಕಡೆಗಳಿಗೆ ಹೆಚ್ಚು ಯುವತಿಯರು ಪ್ರಯಾಣ ಬೆಳೆಸಲು ಇಚ್ಛಿಸುತ್ತಾರೆಂದು ಸಮೀಕ್ಷಾ ವರದಿ ಹೇಳಿರುವುದು, ಸುದೀರ್ಘ ಪ್ರಯಾಣದ ಸುರಕ್ಷತೆ ಮತ್ತು ವಿಶ್ವಾಸರ್ಹತೆಯನ್ನು ಹೆಚ್ಚಿಸಿದೆ ಎಂದು ರೆಡ್ ಬಸ್ ಪಿಂಕ್ ಸಮೀಕ್ಷಾ ವರದಿ ಹೇಳಿದೆ.
ಇನ್ನು, ಅಸ್ಸಾಂ, ಕೇರಳ, ಪಂಜಾಬ್, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್, ಪುದುಚೆರಿ, ಅರುಣಾಚಲ ಪ್ರದೇಶಗಳಿಗೆ ಹೆಚ್ಚಾಗಿ ಜೆನ್ ಝೀ ಯುವತಿರುವ ಪ್ರವಾಸಕ್ಕೆ ತೆರಳಲು ಬಯಸುತ್ತಾರೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಯಾಣದ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ
ಸಮೀಕ್ಷಾ ವರದಿ, ಮಹಿಳೆಯರ ವಿಭಿನ್ನ ಪ್ರಯಾಣದ ನಡೆಗಳನ್ನೂ ಸಹ ಒತ್ತಿ ಹೇಳಿದೆ. ಪುರುಷರಿಗೆ ಹೋಲಿಕೆ ಮಾಡಿದರೇ, ಮಹಿಳೆಯರು ತಮ್ಮ ಪ್ರಯಾಣದ ಬಗ್ಗೆ ಪೂರ್ವ ಯೋಜನೆಗಳನ್ನು ಮಾಡಿಕೊಳ್ಳುತ್ತಾರೆ. ಬಸ್ ಟಿಕೆಟ್ ಬುಕ್ಕಿಂಗ್ ಮಾಡುವಾಗಲೂ ಸುರಕ್ಷತೆ ಮತ್ತು ಬಸ್ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಆದ್ಯತೆಯ ಆಧಾರದಲ್ಲಿ ತುಲನೆ ಮಾಡಿ ನೋಡಿ ಬಸ್ ಟಿಕೆಟ್ ಬುಕ್ ಮಾಡುತ್ತಾರೆ.
ಶೇ.62ರಷ್ಟು ಮಹಿಳೆಯರು ಪ್ರಯಾಣಿಸುವ ಕನಿಷ್ಠ ಒಂದು ದಿನ ಮೊದಲು ಟಿಕೆಟ್‌ಗಳನ್ನು ಬುಕ್ ಮಾಡುತ್ತಾರೆ.
ಶೇ. 47ರಷ್ಟು ಜನರು ಇತರ ಮಹಿಳಾ ಪ್ರಯಾಣಿಕರಿಂದ ಹೆಚ್ಚು ರೇಟಿಂಗ್ ಪಡೆದ ಬಸ್‌ಗಳಲ್ಲಿ ಪ್ರಯಾಣ ಬೆಳೆಸುವುದು ಸುರಕ್ಷಿತ ಎಂದು ಭಾವಿಸುತ್ತಾರೆ.
ಶೇ. 33ರಷ್ಟು ಜನರು ಈಗಾಗಲೇ ಬಸ್‌ನಲ್ಲಿ ಎಷ್ಟು ಮಹಿಳೆಯರು ಸೀಟುಗಳನ್ನು ಬುಕ್ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸುತ್ತಾರೆ.
ಸುರಕ್ಷತೆಗೆ ಹೆಚ್ಚು ಆದ್ಯತೆ
ಸೋಲೋ ಟ್ರಿಪ್‌ಗಳನ್ನು ಕೈಗೊಳ್ಳುವ ಮಹಿಳೆಯರು/ಯುವತಿಯರು ತಮ್ಮ ಸುರಕ್ಷಿತ ಪ್ರಯಾಣಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಆರಾಮದಾಯಕ ಪ್ರಯಾಣವನ್ನು ಕೂಡ ಹೆಚ್ಚಿನ ಮಹಿಳಾ ಪ್ರಯಾಣಿಕರು ಬಯಸುತ್ತಾರೆ. ಬಸ್ ಪ್ರಯಾಣದ ಸೇವೆ, ಬಸ್ಸಿನ ಸಿಬ್ಬಂದಿಯ ವರ್ತನೆ, ಸುರಕ್ಷತಾ ಮಾರ್ಗಗಳು ಸೇರಿದಂತೆ ಕೆಲವು ಸುರಕ್ಷತೆ ಹಾಗೂ ವಿಶ್ವಾಸಾರ್ಹ ಪ್ರಯಾಣಕ್ಕೆ ಮಹಿಳೆಯರು/ಯುವತಿಯರು ಹೆಚ್ಚು ಒತ್ತು ನೀಡುತ್ತಾರೆ. ಶೇ.50ರಷ್ಟು ಮಹಿಳಾ ಪ್ರಯಾಣಿಕರು ಬಸ್ ಸಿಬ್ಬಂದಿಗಳ(ಡ್ರೈವರ್/ನಿರ್ವಾಹಕರು) ವರ್ತನೆಯನ್ನು ಗಮನಿಸುತ್ತಾರೆ, ಶೇ.48ರಷ್ಟು ಮಹಿಳೆಯರು/ಯುವತಿಯರು ಲೈವ್ ಟ್ರಾಕಿಂಗ್ ಸುರಕ್ಷಿತ ಸಾಧನ ಎಂದು ಭಾವಿಸಿದರೇ, ಶೇ.36ರಷ್ಟು ಮಹಿಳಾ ಪ್ರಯಾಣಿಕರು ಶೌಚಾಲಯ ಗುಣಮಟ್ಟ ಮತ್ತು ಸ್ಚಚ್ಛತೆಗೆ ಆದ್ಯತೆ ನೀಡುತ್ತಾರೆ. ಶೇ.29ರಷ್ಟು ಮಹಿಳಾ ಪ್ರಯಾಣಿಕರು ಬಸ್ ಹತ್ತುವ ಮತ್ತು ಇಳಿಯುವ ಸ್ಥಳಗಳ ಸುರಕ್ಷತೆಯ ಬಗ್ಗೆ ಗಮನವಹಿಸುತ್ತಾರೆ ಎಂದು ಹೇಳಿದೆ.
ಒಟ್ಟಿನಲ್ಲಿ, ಈ ಸಮೀಕ್ಷಾ ವರದಿ ಭಾರತದಾದ್ಯಂತ ಮಹಿಳೆಯರು/ಯುವತಿಯರ ಸಬಲೀಕರಣ ಹಾಗೂ ಸ್ವಾವಲಂಬನೆಯನ್ನು ಒತ್ತಿ ಹೇಳುತ್ತದೆ ಎಂದು ವಿವರಿಸಿದ್ದಲ್ಲದೇ, ಮಹಿಳೆಯರ ಸ್ವಾತಂತ್ರ್ಯ ಮತ್ತು ಅವರಲ್ಲಿ ಹೆಚ್ಚಾದ ಆತ್ಮವಿಶ್ವಾಸವನ್ನು ಸಂಕೇತಿಸುತ್ತದೆ.
ಈದಿನ.ಕಾಮ್ ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ, ಗ್ಯಾರಂಟಿ ಯೋಜನೆಗಳಲ್ಲಿ ನಿಮ್ಮ ಪ್ರಕಾರ ಯಾವ ಯೋಜನೆಯನ್ನು ತೆಗೆಯಬೇಕು ಎಂದು ಕೇಳಿದ್ದ ಪ್ರಶ್ನೆಗೆ ಶೇ.34ರಷ್ಟು ಮಂದಿ ಶಕ್ತಿ ಯೋಜನೆಯನ್ನು ನಿಲ್ಲಿಸಬೇಕು ಎಂದು ಪ್ರತಿಕ್ರಿಯಿಸಿದ್ದರು. ಈ ಪೈಕಿ ಶೇ.52.04ರಷ್ಟು ಮಹಿಳೆಯರು, ಶೇ.47.96ರಷ್ಟು ಪುರುಷರಾಗಿದ್ದರು ಎನ್ನುವುದು ಇಲ್ಲಿ ಉಲ್ಲೇಖನೀಯ. ಮಹಿಳಾ ಸ್ವಾತಂತ್ರ್ಯ ವಿರೋಧಿ ಪುರುಷರು ಮಹಿಳೆಯರಿಗೆ ಇಷ್ಟ ಬಂದ ಕಡೆ, ಸ್ವತಂತ್ರವಾಗಿ ಓಡಾಡಲು ಅನುಕೂಲ ಕಲ್ಪಿಸುವ ಇಂತಹ ಯೋಜನೆಯನ್ನು ವಿರೋಧಿಸುವುದು ಸಹಜ. ಆದರೆ ವಾಸ್ತವದಲ್ಲಿ ಶಕ್ತಿ ಯೋಜನೆ ಮಹಿಳೆಯರ ಬದುಕಿನಲ್ಲಿ ಮಹತ್ವದ ಮನ್ವಂತರಕ್ಕೆ ಕಾರಣವಾಗಿದೆ. ಮನೆಯಿಂದಾಚೆ ಹೋಗಿ ಉದ್ಯೋಗ ಮಾಡುವವರ ಸಂಖ್ಯೆ ಹೆಚ್ಚಿದೆ ಎಂದು ಹಲವು ವರದಿಗಳು ಹೇಳಿವೆ.





