ಕೇರಳದಲ್ಲಿ ಹಾಲಿ ಶಾಸಕರಲ್ಲಿ ಶೇಕಡ 70ರಷ್ಟು ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದಾರೆ. ಅರ್ಧಕ್ಕಿಂತ ಅಧಿಕ ಮಂದಿ ಕೋಟ್ಯಧಿಪತಿಗಳಾಗಿದ್ದಾರೆ ಎಂದು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಮಾಡಿದೆ.
ಎಡಿಆರ್ 132 ಶಾಸಕರ ಅಫಿಡವಿಟ್‌ಗಳನ್ನು ವಿಶ್ಲೇಷಿಸಿದ್ದು, ಈ ಪೈಕಿ 92 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ತಿಳಿಸಿದೆ. ಈ ಪೈಕಿ 33 ಶಾಸಕರು ಅಂದರೆ ಶೇ.25ರಷ್ಟು ಮಂದಿ ಕೊಲೆ ಮತ್ತು ಕೊಲೆ ಯತ್ನದಂತಹ ಅಪರಾಧಗಳು ಸೇರಿದಂತೆ ಗಂಭೀರ ಆರೋಪಗಳನ್ನು ಹೊಂದಿದ್ದಾರೆ.
ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ನಾಲ್ವರ ಪೈಪೋಟಿ; ಹಿಂದೆ ಸರಿಯುವ ಮಾತೇ ಇಲ್ಲ!
ಇಬ್ಬರು ಶಾಸಕರು ಸೆಕ್ಷನ್ 302 (ಕೊಲೆ) ಅಡಿಯಲ್ಲಿ ತಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಘೋಷಿಸಿದ್ದರೆ, ಮೂವರು ಸೆಕ್ಷನ್ 307 (ಕೊಲೆಗೆ ಯತ್ನ) ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಮೂವರು ಶಾಸಕರ ಮೇಲೆ ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳಿವೆ. ಇದರಲ್ಲಿ ಅತ್ಯಾಚಾರವೂ ಸೇರಿದೆ.
ಸಿಪಿಐ(ಎಂ)ನ 58 ಶಾಸಕರಲ್ಲಿ 43 ಮಂದಿ (74%) ವಿರುದ್ದ ಕ್ರಿಮಿನಲ್ ಪ್ರಕರಣಗಳಿವೆ. ಆದರೆ ಕಾಂಗ್ರೆಸ್ 21 ಶಾಸಕರಲ್ಲಿ 19 ಮಂದಿ (90%) ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ. ಶೇ.44 ರಷ್ಟು ಸಿಪಿಐ ಶಾಸಕರು, ಶೇ.86ರಷ್ಟು ಐಯುಎಂಎಲ್ ಶಾಸಕರ ವಿರುದ್ಧ ಪ್ರಕರಣಗಳಿವೆ.
ಹೆಚ್ಚಿನ ಪ್ರಕರಣಗಳು ರಾಜಕೀಯ ಮೆರವಣಿಗೆಗಳು, ಸಾರ್ವಜನಿಕ ಪ್ರತಿಭಟನೆಗಳು ಮತ್ತು ಇತರೆ ಹೋರಾಟದ ಸಂದರ್ಭದಲ್ಲಿ ದಾಖಲಾಗಿರುವಂತದ್ದು ಎಂದು ಹೇಳಲಾಗಿದೆ. ಒಟ್ಟು ಪ್ರಕರಣಗಳಲ್ಲಿ ಕೊಲೆ, ಅತ್ಯಾಚಾರದಂತಹ ಗಂಭೀರ ಸ್ವರೂಪದ ಪ್ರಕರಣಗಳು ಸುಮಾರು ಶೇ. 25-27ರಷ್ಟಿದ್ದು ಉಳಿದವು ಸಾಧಾರಣ ರಾಜಕೀಯ ಸಂಘರ್ಷಕ್ಕೆ ಸಂಬಂಧಿಸಿವೆ ಎಂದು ವರದಿ ಹೇಳಿದೆ.
ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಕ್ರೈಸ್ತ ಸಮುದಾಯದ ಮತಗಳು ‘ಗೇಮ್ ಚೇಂಜರ್’ ಆಗಬಹುದೇ?
ಅರ್ಧಕ್ಕಿಂತ ಅಧಿಕ ಶಾಸಕರು ಕೋಟ್ಯಧಿಪತಿಗಳು
ಇನ್ನು ಅರ್ಧಕ್ಕಿಂತ ಅಧಿಕ ಶಾಸಕರು ಕೋಟ್ಯಧಿಪತಿಗಳಾಗಿದ್ದಾರೆ. 72 ಶಾಸಕರು (55%) 1 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಎಲ್ಲಾ ಶಾಸಕರ ಒಟ್ಟು ಆಸ್ತಿ ಒಟ್ಟು 363.78 ಕೋಟಿ ರೂ. ಆಗಿದೆ. ಪ್ರತಿ ಶಾಸಕರ ಸರಾಸರಿ ಆಸ್ತಿ 2.75 ಕೋಟಿ ರೂ. ಆಗಿದೆ.
ಕೇರಳ ಕಾಂಗ್ರೆಸ್ (ಎಂ), ಜೆಡಿ(ಎಸ್), ಎನ್‌ಸಿಪಿ ಮತ್ತು ಕೇರಳ ಕಾಂಗ್ರೆಸ್‌ನ ಎಲ್ಲಾ ಶಾಸಕರು 1 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ. ಐಯುಎಂಎಲ್ ಶಾಸಕರಲ್ಲಿ ಶೇ.86ರಷ್ಟು ಮಂದಿ ಕೋಟ್ಯಧಿಪತಿಗಳಾಗಿದ್ದಾರೆ. ಕಾಂಗ್ರೆಸ್ (62%) ಮತ್ತು ಸಿಪಿಐ(ಎಂ) (40%) ಶಾಸಕರು ಕೋಟ್ಯಧಿಪತಿಗಳಾಗಿದ್ದಾರೆ.
ಕಾಂಗ್ರೆಸ್‌ನ ಮ್ಯಾಥ್ಯೂ ಕುಝಲ್ನಾದನ್ ಅತ್ಯಂತ ಶ್ರೀಮಂತ ಶಾಸಕರಾಗಿದ್ದಾರೆ. 34 ಕೋಟಿ ರೂ.ಗೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಸ್ವತಂತ್ರ ಶಾಸಕ ಮಣಿ ಸಿ ಕಪ್ಪೆನ್ 27 ಕೋಟಿ ರೂ.ಗೂ ಅಧಿಕ ಆಸ್ತಿ, ಕೇರಳ ಕಾಂಗ್ರೆಸ್ (ಬಿ) ನ ಕೆ.ಬಿ. ಗಣೇಶ್ ಕುಮಾರ್ 19 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ. ಮತ್ತೊಂದೆಡೆ, ಸಿಪಿಐ(ಎಂ) ಶಾಸಕ ಪಿ.ಪಿ. ಸುಮೋದ್ ಸುಮಾರು ರೂ.9 ಲಕ್ಷ ಆಸ್ತಿಯನ್ನು ಘೋಷಿಸಿದ್ದಾರೆ.
ಶೇಕಡ 61ರಷ್ಟು ಶಾಸಕರು ಪದವೀಧರರು
ಶೇಕಡ 61ರಷ್ಟು ಶಾಸಕರು ಪದವೀಧರರು ಅಥವಾ ಅದಕ್ಕಿಂತ ಅಧಿಕ ಓದಿದವರಾಗಿದ್ದಾರೆ. ಶೇ. 36 ರಷ್ಟು ಶಾಸಕರು 5 ರಿಂದ 12 ನೇ ತರಗತಿಯ ನಡುವೆ ಓದಿದ್ದಾರೆ. ಮಹಿಳೆಯರ ಪ್ರಾತಿನಿಧ್ಯ ಇನ್ನೂ ಕಡಿಮೆಯಾಗಿದೆ. ವಿಧಾನಸಭೆಯಲ್ಲಿ ಕೇವಲ ಶೇ. 8 ಅಂದರೆ 11 ಶಾಸಕಿಯರು ಇದ್ದಾರೆ. ಶೇ. 70 ರಷ್ಟು ಶಾಸಕರು 51 ರಿಂದ 80 ವರ್ಷ ವಯಸ್ಸಿನವರಾಗಿದ್ದರೆ, ಉಳಿದ ಶೇ. 30 ರಷ್ಟು ಶಾಸಕರು 25–50 ವರ್ಷ ವಯಸ್ಸಿನವರಾಗಿದ್ದಾರೆ.





