ಒಂದು ವೇಳೆ, ಹಾರ್ಮುಜ್ ಜಲಸಂಧಿಯಲ್ಲಿನ ಸಂಚಾರ ಸ್ಥಗಿತವು ಕೆಲವು ದಿನಗಳ ಕಾಲ ಮುಂದುವರಿದರೆ, ಟ್ಯಾಂಕರ್‌ಗಳ ಸಾಲು ಮತ್ತಷ್ಟು ಬೆಳೆಯಲಿದೆ. ಮಾತ್ರವಲ್ಲದೆ, ತೈಲ ವಿತರಣಾ ವ್ಯವಸ್ಥೆಯು ಸಂಪೂರ್ಣವಾಗಿ ಕುಸಿಯಲಿದೆ. ಪರಿಣಾಮಗಳು ಭೀಕರವಾಗಿರಲಿವೆ.
ಇರಾನ್ ಮತ್ತು ಅಮೆರಿಕ-ಇಸ್ರೆಲ್ ನಡುವಿನ ಸಂಘರ್ಷದಿಂದಾಗಿ ಇರಾನ್ ಬಳಿಯ ಹಾರ್ಮುಜ್ ಜಲಸಂಧಿ ಸ್ಥಬ್ದವಾಗಿದೆ. ಹಾರ್ಮುಜ್ ಜಲಸಂಧಿ ಮೂಲಕ ನಡೆಯುವ ಜಾಗತಿಕ ತೈಲ ಸಂಚಾರವು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಒಟ್ಟು ಜಾಗತಿಕ ತೈಲ ವಹಿವಾಟಿನಲ್ಲಿ ಬರೋಬ್ಬರಿ 86%ರಷ್ಟು ಕುಸಿತ ಕಂಡಿದೆ. ಇದು ಇಂಧನ ಮಾರುಕಟ್ಟೆಯನ್ನು ಸಂಕಷ್ಟಕ್ಕೆ ದೂಡಿದೆ.
ಕಡಲ ವಿಶ್ಲೇಷಣಾ ಸಂಸ್ಥೆಗಳಾದ ‘ವಿಂಡ್‌ವರ್ಡ್’ ಮತ್ತು ‘ಕೆಪ್ಲರ್’ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಈ ಜಲಮಾರ್ಗವು ಅಧಿಕೃತವಾಗಿ ಮುಚ್ಚಲ್ಪಟ್ಟಿಲ್ಲ. ಆದರೂ, ವಾಸ್ತವದಲ್ಲಿ ಸಂಚಾರ ಬಂದ್ ಆಗಿದೆ. ಮಾರ್ಚ್ 1ರಂದು, ಕೇವಲ 28 ಲಕ್ಷ ಬ್ಯಾರೆಲ್‌ಗಳನ್ನು ಹೊತ್ತ ಮೂರು ಟ್ಯಾಂಕರ್‌ಗಳು ಮಾತ್ರ ಹಾರ್ಮುಜ್ ಜನಸಂಧಿಯನ್ನು ದಾಟಿವೆ. ಇದು 2026ರ ದೈನಂದಿನ ವಹಿವಾಟಿನ ಸರಾಸರಿ 1.98 ಕೋಟಿ ಬ್ಯಾರೆಲ್‌ಗಳ ಪೈಕಿ 86%ರಷ್ಟು ವಹಿವಾಟು ನಿಂತುಹೋಗಿದ್ದು, ಭಾರಿ ಕುಸಿತ ಕಂಡಿದೆ. ಮಾರ್ಚ್ 2 ರ ಮುಂಜಾನೆಯ ವೇಳೆಗೆ, ಕೇವಲ ಒಂದು ಸಣ್ಣ ಟ್ಯಾಂಕರ್ ಮತ್ತು ಒಂದು ಸಣ್ಣ ಸರಕು ಹಡಗು ಮಾತ್ರ ಮುಖ್ಯ ಪಥದಲ್ಲಿ ಚಲಿಸಿವೆ.
ಇರಾನ್ ದೇಶಕ್ಕೆ ಸೇರದ ಸುಮಾರು 706 ಟ್ಯಾಂಕರ್‌ಗಳು ಈಗ ಜಲಸಂಧಿಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿವೆ: ಇವುಗಳಲ್ಲಿ 334 ಕಚ್ಚಾ ತೈಲ, 109 ಸಂಸ್ಕರಿಸದ ತೈಲ ಉತ್ಪನ್ನ ಹಾಗೂ 263 ಸಂಸ್ಕರಿಸಿದ ತೈಲ ಉತ್ಪನ್ನವನ್ನು ಹೊತ್ತ ಹಗಡುಗಳಿವೆ. ಜೊತೆಗೆ, ಇನ್ನೂ 26 ಟ್ಯಾಂಕರ್‌ಗಳು ಯಾವುದೇ ನಿರ್ದಿಷ್ಟ ಗುರಿಯಿಲ್ಲದೆ ನಿಂತಿವೆ. ನೂರಾರು ಹಡಗುಗಳ ಸಂಚಾರವು ಒಮನ್ ಕೊಲ್ಲಿಯಲ್ಲಿ ಸ್ಥಗಿತಗೊಂಡಿದೆ.
ಪರಿಣಾಮ, ತೈಲ ಮಾರುಕಟ್ಟೆಗಳಲ್ಲಿ ಗಮನಾರ್ಹ ಬೆಳವಣಿಗೆಗಳು ನಡೆದಿವೆ. ಸೌದಿ ಅರೇಬಿಯಾದ ‘ರಾಸ್ ತನುರಾ’ ಸಂಸ್ಕರಣಾಗಾರ ಮತ್ತು ಕತಾರ್‌ನ ಎಲ್‌ಎನ್‌ಜಿ (LNG) ಘಟಕದ ಮೇಲೆ ನಡೆದ ದಾಳಿಗಳ ನಂತರ ಬ್ರೆಂಟ್ ಕಚ್ಚಾ ತೈಲ ಬೆಲೆಯು 10%ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ ಸುಮಾರು 80 ಡಾಲರ್‌ಗೆ ಹೆಚ್ಚಾಗಿದೆ. ಇತ್ತ ಯುರೋಪಿಯನ್ ಅನಿಲ ಬೆಲೆಯೂ 40%ಕ್ಕಿಂತ ಹೆಚ್ಚು ಜಿಗಿತ ಕಂಡಿದೆ.
ಒಂದು ವೇಳೆ, ಹಾರ್ಮುಜ್ ಜಲಸಂಧಿಯಲ್ಲಿನ ಸಂಚಾರ ಸ್ಥಗಿತವು ಕೆಲವು ದಿನಗಳ ಕಾಲ ಮುಂದುವರಿದರೆ, ಟ್ಯಾಂಕರ್‌ಗಳ ಸಾಲು ಮತ್ತಷ್ಟು ಬೆಳೆಯಲಿದೆ. ಮಾತ್ರವಲ್ಲದೆ, ತೈಲ ವಿತರಣಾ ವ್ಯವಸ್ಥೆಯು ಸಂಪೂರ್ಣವಾಗಿ ಕುಸಿಯಲಿದೆ. ಪರಿಣಾಮಗಳು ಭೀಕರವಾಗಿರಲಿವೆ. ಕೊಲ್ಲಿ ಪ್ರದೇಶದ ಸಂಚಾರಕ್ಕೆ ಯುದ್ಧ-ಅಪಾಯದ ವಿಮೆಯ (War-risk insurance) ನಿಯಮಗಳು ರೂಪುಗೊಂಡಿವೆ. ಹಾರ್ಮುಜ್ ಕಡೆಗೆ ಹೋಗಲು ಸಿದ್ಧವಿರುವ ಹಡಗುಗಳ ಸಾಗಣೆ ದರ ಮತ್ತು ಪ್ರೀಮಿಯಂ ಮೊತ್ತಗಳು ಹೆಚ್ಚುತ್ತಿವೆ. ಈ ವೆಚ್ಚಗಳು ನೇರವಾಗಿ ಜಾಗತಿಕ ಇಂಧನ ಬೆಲೆಗಳ ಮೇಲೆ ಪರಿಣಾಮ ಬೀರಲಿವೆ.
ಇದೇ ಸಮಯದಲ್ಲಿ, ಏಷ್ಯಾ ಮತ್ತು ಯುರೋಪಿನ ಸಂಸ್ಕರಣಾಗಾರಗಳು ಅಮೆರಿಕ, ಪಶ್ಚಿಮ ಆಫ್ರಿಕಾ, ಬ್ರೆಜಿಲ್ ಹಾಗೂ ರಷ್ಯಾದಿಂದ ಪರ್ಯಾಯ ತೈಲಕ್ಕಾಗಿ ಹುಡುಕಾಟ ನಡೆಸುತ್ತಿವೆ. ಕೊಲ್ಲಿಯ ಕಚ್ಚಾ ತೈಲವನ್ನೇ ಹೆಚ್ಚಾಗಿ ಅವಲಂಬಿಸಿರುವ ಚೀನಾ ಮತ್ತು ಭಾರತಕ್ಕೆ ಇದು ನೇರ ಹೊಡೆತ ನೀಡಲಿದೆ.
ನವದೆಹಲಿಯಲ್ಲಿ ಅಧಿಕಾರಿಗಳು ತುರ್ತು ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಈ ಅನಿಶ್ಚಿತತೆ ಮುಂದುವರಿದರೆ, ದೇಶೀಯ ಪೂರೈಕೆಯನ್ನು ರಕ್ಷಿಸಲು ಭಾರತವು ಪೆಟ್ರೋಲ್ ಮತ್ತು ಡೀಸೆಲ್ ರಫ್ತನ್ನು ಕಡಿತಗೊಳಿಸಬಹುದು, ರಷ್ಯಾದಿಂದ ಕಚ್ಚಾ ತೈಲ ಆಮದನ್ನು ಹೆಚ್ಚಿಸಬಹುದು ಹಾಗೂ ದೇಶದೊಳಗೆ ಇಂಧನ ಪೂರೈಕೆಯಲ್ಲಿ ಎಲ್‌ಪಿಜಿ (LPG) ಪಡಿತರದಂತಹ ಬೇಡಿಕೆ ನಿರ್ವಹಣಾ ಕ್ರಮಗಳನ್ನು ಪರಿಚಯಿಸಬಹುದು ಎಂದು ಹೇಳಲಾಗುತ್ತಿದೆ.
ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಪೂರೈಕೆಯ ಬಗ್ಗೆ ಪರಿಶೀಲನೆ ನಡೆಸಿದ್ದು, “ನಾವು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದೇವೆ. ದೇಶದಲ್ಲಿ ಪ್ರಮುಖ ಪೆಟ್ರೋಲಿಯಂ ಉತ್ಪನ್ನಗಳ ಲಭ್ಯತೆ ಮತ್ತು ಕೈಗೆಟುಕುವ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಲೇಖನ ಓದಿದ್ದೀರಾ?: ‘ನೊಬೆಲ್ ಶಾಂತಿ’ ಪ್ರಶಸ್ತಿ ಯಾರಿಗೆ ಸಿಗಬೇಕು? ಟ್ರಂಪ್‌ಗೋ, ಡ್ರೋನ್‌ಗಳಿಗೋ, ಬಾಂಬರ್‌ಗಳಿಗೋ?
ಕೆಲವು ತೈಲ ಉದ್ಯಮಗಳ ಅಂದಾಜಿನ ಪ್ರಕಾರ, ಭಾರತವು ತನ್ನ ಸಂಸ್ಕರಿಸಿದ ಇಂಧನದ ಗಣನೀಯ ಪಾಲನ್ನು ರಫ್ತು ಮಾಡುತ್ತದೆ (ಸುಮಾರು ಮೂರನೇ ಒಂದು ಭಾಗದಷ್ಟು ಪೆಟ್ರೋಲ್ ಮತ್ತು ಕಾಲು ಭಾಗದಷ್ಟು ಡೀಸೆಲ್). ಆದರೆ, ಎಲ್‌ಪಿಜಿ ವಿಷಯದಲ್ಲಿ ಭಾರತವು ಹೆಚ್ಚು ಅಸುರಕ್ಷಿತವಾಗಿದೆ: ಭಾರತವು ತನ್ನ ಎಲ್‌ಪಿಜಿ ಅಗತ್ಯದ 80-85%ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಅಲ್ಲದೆ, ಇದರ ಹೆಚ್ಚಿನ ಭಾಗವು ಹಾರ್ಮುಜ್ ಜಲಸಂಧಿಯ ಮೂಲಕ ಕೊಲ್ಲಿ ರಾಷ್ಟ್ರಗಳಿಂದಲೇ ಬರುತ್ತದೆ. ಹೊಸ ಸರಕುಗಳ ಪೂರೈಕೆ ನಿಂತರೆ, ಪ್ರಸ್ತುತ ಇರುವ ದಾಸ್ತಾನು ಕೇವಲ ಎರಡು ವಾರಗಳ ಬಳಕೆಗೆ ಮಾತ್ರ ಸಾಕಾಗಬಹುದು ಎಂದು ಅಂದಾಜಿಸಲಾಗಿದೆ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್ ಕಂಪನಿಗಳು ಆಯ್ದ ಘಟಕಗಳಲ್ಲಿ ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಲು ಪ್ರಾರಂಭಿಸಿವೆ. ಭಾರತದ ಸಂಗ್ರಹಾಗಾರಗಳು, ಸಂಸ್ಕರಣಾಗಾರಗಳು ಹಾಗೂ ಬಂದರುಗಳಲ್ಲಿರುವ ಒಟ್ಟು ಕಚ್ಚಾ ತೈಲ ಮತ್ತು ಉತ್ಪನ್ನಗಳ ದಾಸ್ತಾನು ಸುಮಾರು 74 ದಿನಗಳ ಬೇಡಿಕೆಯನ್ನು ಪೂರೈಸಬಲ್ಲದು ಎಂದು ಪುರಿ ಹೇಳಿದ್ದಾರೆ. ಇದರಲ್ಲಿ ಕಚ್ಚಾ ತೈಲವು ಸುಮಾರು 17-18 ದಿನಗಳಿಗೆ, ಸಂಸ್ಕರಿಸಿದ ಇಂಧನಗಳು ಸುಮಾರು 20-21 ದಿನಗಳಿಗೆ ಹಾಗೂ ಎಲ್‌ಎನ್‌ಜಿ ಸಂಗ್ರಹವು ಸುಮಾರು 10-12 ದಿನಗಳಿಗೆ ಸಾಕಾಗಬಹುದು ಎಂದು ಉದ್ಯಮದ ಮೂಲಗಳು ಅಂದಾಜಿಸಿವೆ.
ಪಶ್ಚಿಮ ಏಷ್ಯಾದ ಈ ಸಂಘರ್ಷವು ‘ದಿನಗಳಲ್ಲ, ವಾರಗಳ ಕಾಲ’ ಮುಂದುವರಿಯಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಇದು ಭಾರತಕ್ಕೆ ತನ್ನ ದೇಶೀಯ ಇಂಧನ ಭದ್ರತೆ ಮತ್ತು ಜಾಗತಿಕ ರಫ್ತಿನ ನಡುವೆ ಸಮತೋಲನ ಕಾಯ್ದುಕೊಳ್ಳುವ ದೊಡ್ಡ ಸವಾಲನ್ನು ಒಡ್ಡಿದೆ.




