ಭಾರತದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಹಾಗೂ ವಿಮಾ ಕಂಪನಿಗಳಲ್ಲಿ ಬರೋಬ್ಬರಿ 78 ಸಾವಿರ ಕೋಟಿ ರೂ. ಹಣ ಯಾರಿಂದಲೂ ‘ಕ್ಲೈಮ್’ ಆಗದೇ ಬಿದ್ದಿದೆ ಎಂದು ಸರ್ಕಾರದ ದತ್ತಾಂಶಗಳು ಹೇಳುತ್ತಿವೆ. ಈ ಹಣವನ್ನು ಹಕ್ಕುದಾರರು ಅಥವಾ ಫಲಾನುಭವಿಗಳಿಗೆ ಹಿಂದಿರುಗಿಸಲು ಸರ್ಕಾರ ಮುಂದಾಗಿದೆ. ‘ನಿಮ್ಮ ಹಣ-ನಿಮ್ಮ ಹಕ್ಕು’ ಅಭಿಯಾನ ಆರಂಭಿಸಿದೆ. ವಿಮೆ, ಹೂಡಿಕೆ ಹೆಸರಿನಲ್ಲಿ ಹಣ ಪಾವತಿಸಿ ಮರೆತುಹೋದ ಹಣ/ಸ್ವತ್ತುಗಳನ್ನು ಹೊಸ ರೂಪದಲ್ಲಿ ಬಳಸಿಕೊಳ್ಳಲು ಇದೊಂದು ಉತ್ತಮ ಅವಕಾಶವೆಂದು ಪ್ರಧಾನಿ ಮೋದಿ ಬುಧವಾರ ಹೇಳಿದ್ದಾರೆ.
ಹಲವಾರು ಮಂದಿ ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಉಳಿತಾಯ ಮತ್ತು ಗಳಿಕೆಗಾಗಿ ಬ್ಯಾಂಕ್‌ಗಳೂ ಸೇರಿದಂತೆ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಈ ಹಣ ಅಕ್ಷರಶಃ ಜನರ ಬೆವರಿನ ಹಣ. ಆದರೆ, ‘ಒನ್ ಟೈಮ್’ ಹೂಡಿಕೆ ಅಥವಾ ದೀರ್ಘಕಾಲದ ಹೂಡಿಕೆಯಾಗಿ ಹಣವನ್ನು ಪಾವತಿಸಿ, ಮರೆತು ಹೋಗಿರುತ್ತಾರೆ ಅಥವಾ ಮೃತಪಟ್ಟಿರುತ್ತಾರೆ. ಅಂತಹವರ ಹಣವು ಹಣಕಾಸು ಸಂಸ್ಥೆಗಳಲ್ಲಿ ಉಳಿದುಹೋಗಿದೆ. ಆ ಹಣವು ಹೂಡಿಕೆ ಮಾಡಿದ ಜನರು ಮತ್ತು ಅವರ ಕುಟುಂಬದ ಬಂಡವಾಳ ಮತ್ತು ಆದಾಯ. ಆದ್ದರಿಂದ, ತಮ್ಮ ಹಣವನ್ನು ಮರಳಿ ಪಡೆಯುವುದು ಜನರ ಹಕ್ಕು. ಅಂತೆಯೇ, ಜನರ ಹಣವನ್ನು ಜನರಿಗೆ ಮರಳಿಸುವುದು ಹಣಕಾಸು ಸಂಸ್ಥೆಗಳು ಮತ್ತು ಸರ್ಕಾರದ ಕರ್ತವ್ಯ. ತಮ್ಮ ಕರ್ತವ್ಯವನ್ನು ಪಾಲಿಸಲು ಈಗ ಸರ್ಕಾರ ಮುಂದಾಗಿದೆ.
‘ನಿಮ್ಮ ಹಣ, ನಿಮ್ಮ ಹಕ್ಕು’ ಅಭಿಯಾನ ಏನು? ನಿಮ್ಮ ಹಣ ಕ್ಲೈಮ್ ಆಗದೇ ಬಿದ್ದಿದೆಯೇ? ಅದನ್ನು ಹೇಗೆ ಪಡೆಯುವುದು? ವಿವರಣೆ ಇಲ್ಲಿದೆ!
ಕ್ಲೈಮ್ ಆಗದೇ ಬಿದ್ದಿರುವ 78 ಸಾವಿರ ಕೋಟಿ ರೂ. ಎಲ್ಲಿದೆ?
ವಿಮೆಗಳಿಗಾಗಿ ಕಂತುಗಳಲ್ಲಿ ಜನರು ಪಾವತಿಸಿದ ಹಣವು ಮರುಸ್ವೀಕಾರ (ಕ್ಲೈಮ್) ಆಗದೇ ಮುಖ್ಯವಾಗಿ 3 ಕಡೆಗಳಲ್ಲಿ ಉಳಿದಿದೆ.
1. ನಿಷ್ಕ್ರಿಯ ಬ್ಯಾಂಕ್ ಖಾತೆಗಳು: 10 ವರ್ಷಗಳಿಂದ ಯಾವುದೇ ವಹಿವಾಟು ನಡೆಸದ ಖಾತೆಗಳನ್ನು ನಿಷ್ಕ್ರಿಯವೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಉಳಿತಾಯ, ಚಾಲ್ತಿ ಹಾಗೂ ಸ್ಥಿರ ಠೇವಣಿ ಸೇರಿದಂತೆ ಎಲ್ಲ ರೀತಿಯ ಬ್ಯಾಂಕ್ ಖಾತೆಗಳು ಸೇರಿವೆ. ಆರ್‌ಬಿಐ ನಿಯಮಗಳ ಪ್ರಕಾರ, ಬ್ಯಾಂಕ್ ಈ ಹಣವನ್ನು ಉಳಿಸಿಟ್ಟಿರುತ್ತದೆ. ಆದಾಗ್ಯೂ ವಾರ್ಷಿಕವಾಗಿ ಪರಿಶೀಲಿಸುತ್ತದೆ.
2. ವಿಮಾ ಕಂಪನಿಗಳು: ಸುಮಾರು 14 ಸಾವಿರ ಕೋಟಿ ರೂ. ಹಣವು ವಿಮಾ ಕಂಪನಿಗಳಲ್ಲಿದೆ. ಯಾರೂ ಇದನ್ನು ಕ್ಲೈಮ್ ಮಾಡಿಲ್ಲ. ಪಾಲಿಸಿಗಾಗಿ ಹಣ ಕಂತುಗಳನ್ನು ಕಟ್ಟುವ ಅವಧಿ ಪೂರ್ಣಗೊಂಡಾಗ ಅಥವಾ ಪಾಲಿಸಿದಾರರ ಮರಣದ ನಂತರ ಅವರ ಕುಟುಂಬವು ಈ ಹಣವನ್ನು ಪಾವತಿಸಬೇಕು. ಆದರೆ, ಈ ಹಣವನ್ನು ಹಲವರು ಕ್ಲೈಮ್ ಮಾಡದೇ ಹಾಗೆಯೇ ಉಳಿದಿದೆ.
3. ಮ್ಯೂಚುಯಲ್ ಫಂಡ್‌ಗಳು ಮತ್ತು ಷೇರುಗಳಲ್ಲಿ ಸಿಲುಕಿರುವ ಹಣ: ಮ್ಯೂಚುಯಲ್ ಫಂಡ್‌ಗಳು ಮತ್ತು ಷೇರುಗಳು ಲಾಭಾಂಶವನ್ನು ಪಾವತಿಸುತ್ತವೆ. ಇದು ಲಾಭ ವಿತರಣೆಯ ನಂತರ ಷೇರುದಾರರನ್ನು ತಲುಪುವ ಹಣ. ಷೇರುದಾರರು ಅದನ್ನು ಕ್ಲೈಮ್ ಮಾಡದಿದ್ದರೆ, ಕಂಪನಿಯು ಹಣವನ್ನು 7 ವರ್ಷಗಳವರೆಗೆ ಪ್ರತ್ಯೇಕ ಸುರಕ್ಷಿತ ನಿಧಿಗೆ ವರ್ಗಾಯಿಸುತ್ತದೆ. ಮ್ಯೂಚುಯಲ್ ಫಂಡ್‌ಗಳಲ್ಲಿ ಸುಮಾರು 3 ಸಾವಿರ ಕೋಟಿ ರೂಪಾಯಿಗಳು ಮತ್ತು ಷೇರುಗಳಲ್ಲಿ 9 ಸಾವಿರ ಕೋಟಿ ರೂ. ಹಣ ಕ್ಲೈಮ್ ಆಗದೇ ಉಳಿದಿದೆ.
ಸರ್ಕಾರದ ಹೊಸ ‘ನಿಮ್ಮ ಹಣ, ನಿಮ್ಮ ಹಕ್ಕು’ ಅಭಿಯಾನ ಏನು?
‘ನಿಮ್ಮ ಹಣ, ನಿಮ್ಮ ಹಕ್ಕು’ ಅಭಿಯಾನವನ್ನು ಇದೇ ವರ್ಷದ (2025) ಅಕ್ಟೋಬರ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಾರಂಭಿಸಿದರು. ಜನರು ಹಣಕಾಸು ಸಂಸ್ಥೆಗಳಲ್ಲಿ ನಾನಾ ರೀತಿಯಲ್ಲಿ ಹೂಡಿಕೆ ಮಾಡಿ, ಮರೆತುಹೋದ ಅಥವಾ ಕ್ಲೈಮ್ ಮಾಡದೆ ಬಿಟ್ಟಿರುವ ಹಣವನ್ನು ಅವರಿಗೆ ಹಿಂದಿರುಗಿಸುವುದು ಅಭಿಯಾನದ ಉದ್ದೇಶವೆಂದು ಅವರು ಹೇಳಿಕೊಂಡಿದ್ದಾರೆ.
ಹಣವನ್ನು ಹಕ್ಕುದಾರರಿಗೆ ಮರುಪಾವತಿಸುವ ಕೆಲಸವನ್ನು ಹಣಕಾಸು ಸಚಿವಾಲಯ, ಭಾರತ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಾಗೂ ಭಾರತೀಯ ಭದ್ರತಾ ಮಂಡಳಿ (SEBI) ಸೇರಿದಂತೆ ಹಲವಾರು ಇಲಾಖೆಗಳು ಜಂಟಿಯಾಗಿ ಮಾಡುತ್ತಿವೆ. ಎಲ್ಲ ಹಳೆಯ ಬಾಕಿ ಹಣವನ್ನು ಈ ಗುರುತಿಸಲಾಗುತ್ತಿದ್ದು, ಯಾರ ಹಣ ಬಾಕಿ ಉಳಿದಿದೆಯೇ ಅವರಿಗೆ ಅವರ ಹಣದ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ಬ್ಯಾಂಕುಗಳು ಅಥವಾ ಯೋಜನೆಗಳಲ್ಲಿ ಹೂಡಿಕೆ ಮಾಡಿ, ಮರೆತಿದ್ದೀರಾ ಎಂಬದನ್ನು ಪರಿಶೀಲಿಸುವುದು ಹೇಗೆ?
ಯಾವುದೇ ವ್ಯಕ್ತಿ ಅಥವಾ ಅವರು ಕುಟುಂಬದ ಸದಸ್ಯರು ಬ್ಯಾಂಕುಗಳು ಅಥವಾ ಯಾವುದಾದರೂ ಹಣಕಾಸು ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಿದ್ದರೆ/ ಹೊಂದಿದ್ದರೆ, ಅವುಗಳನ್ನು ಪರಿಶೀಲಿಸಲು ಬಹಳ ಸುಲಭವಾದ ಮಾರ್ಗವಿದೆ. ಅದಕ್ಕಾಗಿ ಭಾರತ ಸರ್ಕಾರವು ನಾಲ್ಕು ರೀತಿಯ ಪೋರ್ಟಲ್‌ಗಳನ್ನು ಪ್ರಾರಂಭಿಸಿದೆ.
1. ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಟ್ಟಿರುವ ಮೊತ್ತವನ್ನು ಹೇಗೆ ಪರಿಶೀಲಿಸುವುದು
ಬ್ಯಾಂಕ್‌ಗಳು ತಮ್ಮಲ್ಲಿ 10 ವರ್ಷಗಳಿಂದ ನಿಷ್ಕ್ರಿಯವಾಗಿರುವ ಖಾತೆಗಳ ಹಣವನ್ನು RBIಗೆ ವರ್ಗಾಯಿಸಲಾಗುತ್ತವೆ. ಆ ಹಣವನ್ನು ಆರ್‌ಬಿಐ ಉಳಿಸಿ ಇಟ್ಟಿರುತ್ತದೆ. ಅದನ್ನು ಪರಿಶೀಲಿಸಲು ಕೆಲವು ಹಂತಗಳಿವೆ;
- ಯಾವುದೇ ಸರ್ಚ್ ಇಂಜಿನ್‌ನಲ್ಲಿ https://udgam.rbi.org.in/unclaimed-deposits ಲಿಂಕ್‌ಅನ್ನು ಹುಡುಕಬೇಕು.
- ನಂತರ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಪಾಸ್‌ವರ್ಡ್ ಹಾಗೂ OTP ನಮೂದಿಸುವ ಮೂಲಕ ಲಾಗ್‌ಇನ್ ನೋಂದಾಯಿಸಬೇಕು.
- ಬಳಿಕ, ‘Individual’ (ವೈಯಕ್ತಿಕ) ವಿಭಾಗವನ್ನು ಆಯ್ಕೆ ಮಾಡಿಕೊಂಡು – ನಿಮ್ಮ ಹೆಸರು, ಬ್ಯಾಂಕ್ ಹೆಸರು, ಪ್ಯಾನ್ ಸಂಖ್ಯೆ, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ, ಪಾಸ್‌ಪೋರ್ಟ್ (ಎಲ್ಲವೂ ದಾಖಲೆಗಳೂ ಅಗತ್ಯವಿಲ್ಲ – ದಾಖಲೆಗಳ ಆಯ್ಕೆಗೆ ಅವಕಾಶವಿದೆ) ಹಾಗೂ ಜನ್ಮ ದಿನಾಂಕವನ್ನು ನಮೂದಿಸಬೇಕು.
- ಎಲ್ಲ ದಾಖಲೆಗಳು ಅಗತ್ಯವಿಲ್ಲದಿದ್ದರೂ, ಹೆಚ್ಚಿನ ದಾಖಲೆಗಳನ್ನು ಹೊಂದಿರುವುದು ಕಳೆದುಹೋದ ಖಾತೆಯನ್ನು ತ್ವರಿತವಾಗಿ ಕಂಡುಹಿಡಿಯಲು ಸಾಧ್ಯವಾಗುತ್ತದೆ.
- ನಿಮ್ಮ ಕುಟುಂಬದ ಯಾವುದೇ ಸದಸ್ಯರ ಕಳೆದುಹೋದ ಖಾತೆಯನ್ನು ನೀವು ಪರಿಶೀಲಿಸಲು ಬಯಸಿದರೆ, ಖಾತೆಯನ್ನು ನೋಂದಾಯಿಸಿದ ನಂತರ, ‘Non-Individual’ ವಿಭಾಗವನ್ನು ಆಯ್ಕೆ ಮಾಡಿಕೊಂಡು, ಅವರ ವಿವರಗಳನ್ನು ನಮೂದಿಸಬೇಕು.
- ಹುಡುಕಾಟ (ಸರ್ಚ್) ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ, ನೀವು ಕಳೆದುಹೋದ ಖಾತೆಯನ್ನು ಪರಿಶೀಲಿಸಬಹುದು.
2. ವಿಮೆಯಲ್ಲಿ ಕ್ಲೈಮ್ ಮಾಡದೇ ಉಳಿದಿರುವ ಹಣವನ್ನು ಪರಿಶೀಲಿಸುವುದು ಹೇಗೆ?
ಎಲ್‌ಐಸಿ ರೀತಿಯ ಜೀವ ವಿಮೆ, ಆರೋಗ್ಯ ವಿಮೆ ಹಾಗೂ ಸಾಮಾನ್ಯ ವಿಮೆಯಲ್ಲಿ ಉಳಿದುಹೋದ ಅಥವಾ ಮರೆತುಹೋದ ಹಣವನ್ನು ಪರಿಶೀಲಿಸಲು, https://bimabharosa.irdai.gov.inನಲ್ಲಿ ನೋಂದಾಯಿಸಬೇಕು. ಆನಂತರ;
- ವೆಬ್‌ಸೈಟ್‌ನಲ್ಲಿ ‘ಕ್ಲೇಮ್ ಮಾಡದ ಮೊತ್ತ’ (Unclaimed Amount) ವಿಭಾಗದ ಮೇಲೆ ಕ್ಲಿಕ್ ಮಾಡಬೇಕು.
- ಅಲ್ಲಿ ಹೆಸರು, ಪಾಲಿಸಿ ಸಂಖ್ಯೆ, ಪ್ಯಾನ್ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
- ವಿಮೆ ಪಡೆದಿರುವ ವಿಮಾ ಕಂಪನಿಯ ಹೆಸರನ್ನು ನಮೂದಿಸಿದ ಬಳಿಕ ‘ಸಬ್ಮಿಟ್’ ಮೇಲೆ ಕ್ಲಿಕ್ಕಿಸಬೇಕು.
- ಈ ವಿವರಗಳಿಗೆ ಹೊಂದಿಕೆಯಾಗುವ ಯಾವುದೇ ಪಾಲಿಸಿ ಇದ್ದರೆ, ಅದು ಪ್ರದರ್ಶನಗೊಳ್ಳುತ್ತದೆ.
- ಪಾಲಿಸಿ ಕಂಡುಬಂದಿಲ್ಲವಾದರೆ ಅಥವಾ ನೀವು ಯಾವುದೇ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದರೆ – ದೂರು ಸಲ್ಲಿಸಬಹುದು.
3. ಮ್ಯೂಚುವಲ್ ಫಂಡ್‌ಗಳಲ್ಲಿ ಕ್ಲೈಮ್ ಮಾಡದ ಹಣವನ್ನು ಪರಿಶೀಲಿಸುವುದು ಹೇಗೆ?
ನಿಮ್ಮ ಕುಟುಂಬದಲ್ಲಿ ಯಾರಾದರೂ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದು, 10 ವರ್ಷಗಳಿಂದ ಯಾವುದೇ ಚಟುವಿಕೆ ನಡೆಸದೇ ಹಣವನ್ನು ಅಲ್ಲಿಯೇ ಬಿಟ್ಟುಬಿಟ್ಟಿದ್ದರೆ, ಆ ಹಣವು ನಿಷ್ಕ್ರಿಯವಾಗಿರುತ್ತವೆ. ಅಂತಹ ಹಣವನ್ನು ಪರಿಶೀಲಿಸಲು ಕೆಲವು ಕ್ರಮಗಳನ್ನು ಅನುಸರಿಸಬೇಕು.
- ಮೊದಲು MF (ಮ್ಯೂಚುವಲ್ ಫಂಡ್) ಸೆಂಟ್ರಲ್ ವೆಬ್‌ಸೈಟ್ https://mfcentral.com ನಲ್ಲಿ ಲಾಗಿನ್ ಅಥವಾ ಸೈನ್ ಅಪ್ ಮಾಡಬೇಕು.
- ನಂತರ ‘ಹೂಡಿಕೆದಾರರ ಸೇವೆ’ (Investor Service) ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
- ಅಲ್ಲಿ ಪ್ಯಾನ್ ಕಾರ್ಡ್, ವಿಳಾಸ ಪುರಾವೆ ಹಾಗೂ ಬ್ಯಾಂಕ್ ಪಾಸ್‌ಬುಕ್ ಅಥವಾ ರದ್ದಾದ ಚೆಕ್‌ನ ವಿವರಗಳನ್ನು ಭರ್ತಿ ಮಾಡಬೇಕು.
- ನಂತರ, ನಿಧಿಗೆ ಸಂಬಂಧಿಸಿದ ವಿವರಗಳನ್ನು ಪಡೆಯಲು ‘unclaimed’ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
- ಹೆಚ್ಚುವರಿಯಾಗಿ, ಸೆಬಿ ಮಿತ್ರ (SEBI MITRA) ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಕ್ಲೈಮ್ ಮಾಡದ ಮ್ಯೂಚುವಲ್ ಫಂಡ್‌ಗಳನ್ನು ‘ಟ್ರ್ಯಾಕ್’ ಮಾಡಬಹುದು.
4. ಕ್ಲೈಮ್ ಮಾಡದ ಷೇರುಗಳು/ಲಾಭಾಂಶಗಳನ್ನು ಪರಿಶೀಲಿಸುವುದು ಹೇಗೆ?
ಕಂಪನಿಯು ಲಾಭಾಂಶವನ್ನು 7 ವರ್ಷಗಳವರೆಗೆ ಷೇರುದಾರರ ಖಾತೆಗೆ ಜಮಾ ಮಾಡದಿದ್ದರೆ, ಆ ಮೊತ್ತ ಮತ್ತು ಸಂಬಂಧಿತ ಷೇರುಗಳನ್ನು IEPF (ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ)ಗೆ ವರ್ಗಾಯಿಸಲಾಗುತ್ತದೆ. ಅಲ್ಲಿರುವ ತಮ್ಮ ಹಣವನ್ನು ಪರಿಶೀಲಿಸಲು ಷೇರುದಾರರು ಕಳಕಂಡ ರೀತಿಯಲ್ಲಿ ಪರಿಷ್ಕರಿಸಬಹುದು.
- ಮೊದಲು ಅಧಿಕೃತ IEPF ವೆಬ್‌ಸೈಟ್ https://www.iepf.gov.in/ಗೆ ಭೇಟಿ ನೀಡಬೇಕು.
- ಲಾಗಿನ್ ಅಥವಾ ಸೈನ್ ಅಪ್ ಮಾಡಬೇಕು
- ಬಳಿಕ, ಮುಖಪುಟದಲ್ಲಿ ‘Unclaimed Amount’ or ‘Search Unclaimed Dividend/Shares’ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು
- ಹೆಸರು, ತಂದೆಯ ಹೆಸರು ಹಾಗೂ ಕಂಪನಿಯ ಹೆಸರು ಅಥವಾ PAN/Folio/Demat ಸಂಖ್ಯೆಯಂತಹ ವಿವರಗಳನ್ನು ಭರ್ತಿ ಮಾಡಬೇಕು.
- ಬಳಿಕ, ‘ಸೆರ್ಚ್’ ಮೇಲೆ ಕ್ಲಿಕ್ಕಿಸಬೇಕು.
- ತಕ್ಷಣವೇ, ಕ್ಲೈಮ್ ಮಾಡದ ಲಾಭಾಂಶಗಳು ಅಥವಾ IEPFನಲ್ಲಿ ಷೇರುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ನಿಮ್ಮ ಕ್ಲೈಮ್ ಮಾಡದ ಹಣವನ್ನು ಠೇವಣಿ ಮಾಡಿದ್ದರೆ ಅದನ್ನು ಹೇಗೆ ಪಡೆಯುವುದು?
ಠೇವಣಿ ಇಟ್ಟು ಮರೆತುಹೋದ ಹಣವನ್ನು ಪರಿಶೀಲಿಸಲು ಸರ್ಕಾರವು ಪೋರ್ಟಲ್‌ಗಳ ಮೂಲಕ ನೆರವು ನೀಡುತ್ತದೆ. ಅಲ್ಲಿ, ತಮ್ಮ ಹಣವನ್ನು ಕ್ಲೈಮ್ ಮಾಡಬಹುದು. ಹೆಚ್ಚುವರಿಯಾಗಿ, ‘ನಿಮ್ಮ ಹಣ, ನಿಮ್ಮ ಹಕ್ಕು’ ಯೋಜನೆಯಡಿಯಲ್ಲಿ, ದೇಶಾದ್ಯಂತ 477 ಜಿಲ್ಲೆಗಳಲ್ಲಿ ‘ನೆರವು ಕೇಂದ್ರ’ಗಳನ್ನು ತೆರೆಯಲಾಗಿದೆ. ಆ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಹಣವನ್ನು ಪಡೆಯಲು ಸಹಾಯ ಪಡೆಯಬಹುದು.
ಆನ್‌ಲೈನ್‌ನಲ್ಲಿ ನಿಮ್ಮ ಕ್ಲೈಮ್ ಮಾಡದ ಹಣವನ್ನು ಪಡೆಯಲು ಕೆಳಕಂಡ ಹಂತಗಳನ್ನು ಅನುನಸರಿಸಬೇಕು.
1. ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಟ್ಟಿರುವ ಹಣವನ್ನು ಹೇಗೆ ಪಡೆಯುವುದು?
- udgam.rbi.org.in ವೆಬ್‌ಸೈಟ್‌ನಲ್ಲಿ, ನೀವು ಕ್ಲೈಮ್ ಮಾಡದ ಠೇವಣಿ ಮೊತ್ತದ ಸ್ಥಿತಿಯನ್ನು ಪರಿಶೀಲಿಸಬಹುದು. ಅಲ್ಲಿ, ಬ್ಯಾಂಕ್ ಖಾತೆಯಿಂದ ಬ್ಯಾಲೆನ್ಸ್‌ವರೆಗೆ ಎಲ್ಲ ಮಾಹಿತಿಯೂ ದೊರೆಯುತ್ತದೆ.
- ನಂತರ, ಹಣವನ್ನು ಮರಳಿ ಪಡೆಯಲು ಅರ್ಜಿ ಸಲ್ಲಿಸುವುದಕ್ಕಾಗಿ ಅಲ್ಲಿ ಕಾಣುವ ‘ಸಬ್ಮಿಟ್ ಕ್ಲೈಮ್’ ಮೇಲೆ ಕ್ಲಿಕ್ ಮಾಡಬೇಕು.
- ಅಲ್ಲಿ ಲಭ್ಯವಾಗುವ ‘ಕ್ಲೈಮ್ ಫಾರ್ಮ್’ಅನ್ನು ನಿಮ್ಮ ಹೆಸರು, ವಿಳಾಸ ಹಾಗೂ ಬ್ಯಾಂಕ್ ವಿವರಗಳು ಸೇರಿದಂತೆ ಕೆಲವು ಅಗತ್ಯ ಮಾಹಿತಿಗಳೊಂದಿಗೆ ಭರ್ತಿ ಮಾಡಬೇಕು. ನಂತರ, ಪರಿಶೀಲನೆಗಾಗಿ ನೀವು ಖಾತೆ ಹೊಂದಿರುವ ಬ್ಯಾಂಕ್‌ಗೆ ಭೇಟಿ ನೀಡಬೇಕಾಗಬಹುದು.
- ಹೆಚ್ಚುವರಿಯಾಗಿ, ನಿಮ್ಮ ಹಳೆಯ ಖಾತೆ ಕಂಡುಬರುವ ಬ್ಯಾಂಕ್ ಅಥವಾ ಶಾಖೆಗೆ ನೀವು ಲಿಖಿತ ಅರ್ಜಿ ಸಲ್ಲಿಸಬಹುದು.
- KYC ಮತ್ತು ಹಳೆಯ ಖಾತೆ ವಿವರಗಳನ್ನು ಒದಗಿಸುವ ಮೂಲಕ ಖಾತೆಯನ್ನು ಮರುಸಕ್ರಿಯಗೊಳಿಸಬಹುದು.
- ನೀವು ಈ ಮೊತ್ತವನ್ನು ಸ್ಥಿರ ಠೇವಣಿಗಾಗಿಯೂ ಕ್ಲೈಮ್ ಮಾಡಬಹುದು. ಪರಿಶೀಲನೆಯ ನಂತರ, ಹಣವನ್ನು ನಿಮ್ಮ ಹಳೆಯ ಅಥವಾ ಹೊಸ ಖಾತೆಗೆ ವರ್ಗಾಯಿಸಲಾಗುತ್ತದೆ.
2. ಹಕ್ಕು ಪಡೆಯದ ವಿಮಾ ಮೊತ್ತವನ್ನು ಹೇಗೆ ಪಡೆಯುವುದು?
- ಕ್ಲೈಮ್ ಮಾಡದ ಹಣವನ್ನು ಪರಿಶೀಲಿಸಿದ ನಂತರ, https://bimabharosa.irdai.gov.inಗೆ ಭೇಟಿ ನೀಡಿ, ಅಲ್ಲಿ – ‘Register Complaint’ ಮೇಲೆ ಕ್ಲಿಕ್ ಮಾಡಬೇಕು.
- ಅಲ್ಲಿ ನೀವು ವಿಮಾದಾರರ ವಿವರಗಳು, ಕ್ಲೈಮ್ ಮಾಡಬೇಕಾದ ಸಮಯ ಮತ್ತು ಪಾಲಿಸಿ ವಿವರಗಳನ್ನು ಭರ್ತಿ ಮಾಡುವ ಫಾರ್ಮ್ ದೊರೆಯುತ್ತದೆ. ಅದನ್ನು ಭರ್ತಿ ಮಾಡಬೇಕು. ಒಂದು ವೇಳೆ, ಮೃತ ವ್ಯಕ್ತಿಯ ವಿಮೆಗಾಗಿ ಹಕ್ಕು ಪಡೆಯುತ್ತಿದ್ದರೆ ಆಧಾರ್, ಪ್ಯಾನ್, ಬ್ಯಾಂಕ್ ವಿವರಗಳು, ಮರಣ ಪ್ರಮಾಣಪತ್ರ ಹಾಗೂ ನಾಮಿನಿ ಪುರಾವೆಯಂತಹ ದಾಖಲೆಗಳನ್ನು ಒದಗಿಸಬೇಕು.
- ಫಾರ್ಮ್ ಅನ್ನು ಸಲ್ಲಿಸಿದ ನಂತರ, ನೀವು ಕ್ಲೇಮ್ ಅನ್ನು ಟ್ರ್ಯಾಕ್ ಮಾಡಲು ಬಳಸಬಹುದಾದ ಟೋಕನ್ ಸಂಖ್ಯೆ ದೊರೆಯುತ್ತದೆ. ಸುಮಾರು 30 ದಿನಗಳಲ್ಲಿ ನಿಮ್ಮ ಕ್ಲೇಮ್ ಹಣವನ್ನು IRDAI ಪಾವತಿಸುತ್ತದೆ.
- ಹೆಚ್ಚುವರಿಯಾಗಿ, ಕ್ಲೈಮ್ ಮಾಡಿದ ವಿಮೆಯಲ್ಲಿ ನಿಮ್ಮ ಹೆಸರು ಕಾಣಿಸಿಕೊಂಡರೆ, ಆ ವಿಮಾ ಕಂಪನಿಯಿಂದಲೇ ನೇರವಾಗಿ ಕ್ಲೇಮ್ ಮಾಡಬಹುದು.
3. ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ, ಮರೆದ ಹಣವನ್ನು ಹೇಗೆ ಪಡೆಯುವುದು?
- ಕ್ಲೈಮ್ ಮಾಡದ ಮ್ಯೂಚುಯಲ್ ಫಂಡ್‌ಗಳನ್ನು Mfcentral ಅಥವಾ SEBI MITRA ವೆಬ್‌ಸೈಟ್‌ನಲ್ಲಿ ಟ್ರ್ಯಾಕ್ ಮಾಡಬಹುದು ಮತ್ತು ಕ್ಲೇಮ್ ಮಾಡಬಹುದು.
- ಈ ವೆಬ್‌ಸೈಟ್‌ಗಳಲ್ಲಿ ಕ್ಲೈಮ್ ಮಾಡಲು ಷರತ್ತುಗಳ ಪ್ರಕಾರ PAN/KYC ಪುರಾವೆ, ಬ್ಯಾಂಕ್ ವಿವರಗಳು, ಫೋಲಿಯೊ ಸ್ಟೇಟ್‌ಮೆಂಟ್ ಹಾಗೂ ಮರಣ ಪ್ರಮಾಣಪತ್ರ/ನಾಮಿನಿ ಐಡಿಯನ್ನು ಹೊಂದಿರಬೇಕು.
- ಅಲ್ಲಿ, ಮ್ಯಾಚಿಂಗ್ ಫೋಲಿಯೊಗಳನ್ನು ಕಂಡುಕೊಂಡ ನಂತರ, ನೀವು SBI MF ನಂತಹ ಸಂಬಂಧಿತ AMC (ಆಸ್ತಿ ನಿರ್ವಹಣಾ ಕಂಪನಿ)ಯನ್ನು ಸಂಪರ್ಕಿಸಬೇಕಾಗಬಹುದು. ಎಎಂಸಿಗಳು ಮ್ಯೂಚುವಲ್ ಫಂಡ್‌ಗಳು ಮತ್ತು ಇತರ ಹೂಡಿಕೆಗಳನ್ನು ನಿರ್ವಹಿಸುತ್ತವೆ.
- ಪ್ರಕ್ರಿಯೆ ಪೂರ್ಣಗೊಂಡ ನಂತರ, ಹಣವನ್ನು 15-45 ದಿನಗಳಲ್ಲಿ ನಿಮ್ಮ ಬ್ಯಾಂಕ್‌ಗೆ ವರ್ಗಾಯಿಸಲಾಗುತ್ತದೆ.
4. ಕ್ಲೈಮ್ ಮಾಡದ ಷೇರುಗಳು/ಲಾಭಾಂಶಗಳನ್ನು ಹೇಗೆ ಪಡೆಯುವುದು?
- ಕ್ಲೈಮ್ ಮಾಡದೇ ಉಳಿದಿದ್ದ ಷೇರು ಅಥವಾ ಲಾಭಾಂಶವು IEPF ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡರೆ, ಅದನ್ನು ಕ್ಲೈಮ್ ಮಾಡಲು MCA/IEPF ಪೋರ್ಟಲ್‌ನಲ್ಲಿ IEPF-5 ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.
- ಈ ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿದ ನಂತರ, ಅದರ ಪ್ರಿಂಟ್‌ಔಟ್ ಅನ್ನು KYC, ಬ್ಯಾಂಕ್ ಪುರಾವೆ, ಹಳೆಯ ಷೇರು ಪುರಾವೆಗಳಂತಹ ದಾಖಲೆಗಳೊಂದಿಗೆ ಕಂಪನಿಯ ನೋಡಲ್ ಅಧಿಕಾರಿಗೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು.
- ಕಂಪನಿಯ ಪರಿಶೀಲನೆಯ ನಂತರ, IEPF ಪ್ರಾಧಿಕಾರವು ನಿಮ್ಮ ಮೊತ್ತವನ್ನು ಅನುಮೋದಿಸುತ್ತದೆ. ಇದರ ನಂತರ, ಲಾಭಾಂಶವನ್ನು ನಿಮ್ಮ ಬ್ಯಾಂಕ್ ಖಾತೆಗೆ ಮತ್ತು ಷೇರುಗಳನ್ನು ನಿಮ್ಮ ಡಿಮ್ಯಾಟ್ ಖಾತೆಗೆ ವರ್ಗಾಯಿಸಲಾಗುತ್ತದೆ.
ಸರ್ಕಾರ ಆರಂಭಿಸಿರುವ ಅಭಿಯಾನದಿಂದ ಈವರೆಗೆ ಎಷ್ಟು ಜನರು ಪ್ರಯೋಜನ ಪಡೆದಿದ್ದಾರೆ?
ಅಭಿಯಾನದ ಮೊದಲ ಎರಡು ತಿಂಗಳಲ್ಲಿ ಸುಮಾರು 2,000 ಕೋಟಿ ರೂಪಾಯಿಗಳಷ್ಟು ಕ್ಲೈಮ್ ಮಾಡದ ಹಣವನ್ನು ಹಕ್ಕುದಾರರು/ಫಲಾನುಭವಿಗಳಿಗೆ ಪಾವತಿ ಮಾಡಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಡಿಸೆಂಬರ್ 9ರಂದು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಈ ಲೇಖನ ಓದಿದ್ದೀರಾ?: ಪಶ್ಚಿಮ ಬಂಗಾಳ | ಮುಸ್ಲಿಮರ ಓಲೈಕೆಗೆ ಬಿಜೆಪಿ ತಂತ್ರ-ಕುತಂತ್ರ
ಈ ಮೊತ್ತವನ್ನು ಬ್ಯಾಂಕುಗಳು, ವಿಮೆ, ಮ್ಯೂಚುವಲ್ ಫಂಡ್‌ಗಳು, ಲಾಭಾಂಶಗಳು ಹಾಗೂ ಇತರ ವೇದಿಕೆಗಳಿಂದ ಪಾವತಿ ಮಾಡಲಾಗಿದೆ.
ಯಾರೂ ಕ್ಲೈಮ್ ಮಾಡದ ಹಣ ಏನಾಗುತ್ತದೆ?
ಈ ಅಭಿಯಾನದ ನಂತರವೂ ಕೆಲವರು ತಮ್ಮ ಬಾಕಿ ಹಣವನ್ನು ಕ್ಲೈಮ್ ಮಾಡದಿದ್ದರೆ, ಆ ಹಣವನ್ನು ಭದ್ರತಾ ನಿಧಿಗೆ ವರ್ಗಾಯಿಸಲಾಗುತ್ತದೆ.
- 10 ವರ್ಷಗಳಿಗಿಂತ ಹೆಚ್ಚು ಕಾಲ ಸಕ್ರಿಯವಾಗಿಲ್ಲದ ಬ್ಯಾಂಕ್ ಖಾತೆಗಳ ಹಣವನ್ನು ‘ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ’ (DEA) ನಿಧಿಗೆ ವರ್ಗಾಯಿಸಲಾಗುತ್ತದೆ ಮತ್ತು ಸುರಕ್ಷಿತವಾಗಿ ಇರಿಸಲಾಗುತ್ತದೆ. ಇಲ್ಲಿಂದ, ಹಣದ ಮಾಲೀಕರು ದಾಖಲೆಗಳನ್ನು ತೋರಿಸಿ ಯಾವುದೇ ಸಮಯದಲ್ಲಿ ತಮ್ಮ ಹಣವನ್ನು ಕ್ಲೈಮ್ ಮಾಡಬಹುದು. ಇದಕ್ಕೆ ಎಂದಿಗೂ ಸಮಯದ ಮಿತಿಯಿಲ್ಲ.
- ಷೇರುದಾರರು 7 ವರ್ಷಗಳ ಕಾಲ ತಮ್ಮ ಲಾಭಾಂಶವನ್ನು ಪಡೆಯದಿದ್ದಾರೆ, ಆ ಹಣವು ‘ಷೇರು ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ’ಗೆ ಹೋಗುತ್ತದೆ. ಇಲ್ಲಿಂದಲೂ, ಮಾಲೀಕರು ಯಾವಾಗ ಬೇಕಿದ್ದರೂ ದಾಖಲೆಗಳನ್ನು ಒದಗಿಸಿ ಷೇರುಗಳು ಮತ್ತು ಹಣವನ್ನು ಪಡೆಯಬಹುದು.
- ವಿಮೆ ಮತ್ತು ಮ್ಯೂಚುವಲ್ ಫಂಡ್‌ಗಳಿಂದ ಕ್ಲೈಮ್ ಮಾಡದ ಮೊತ್ತವನ್ನು ವಿವಿಧ ನಿಯಂತ್ರಕ (ರೆಗ್ಯುಲೇಟರ್) ವಶದಲ್ಲಿ ಸುರಕ್ಷಿತವಾಗಿ ಇರಿಸಲಾಗುತ್ತದೆ. ಈ ಹಣವನ್ನು ಮಾಲೀಕರು ಯಾವುದೇ ಸಮಯದಲ್ಲಿಯೂ ಮರಳಿ ಪಡೆಯಬಹುದು.
- ಯಾವುದೇ ಸಂದರ್ಭಗಳಲ್ಲಿಯೂ ಈ ಹಣವನ್ನು ಸರ್ಕಾರ ಅಥವಾ ಬ್ಯಾಂಕ್ ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳುವುದಿಲ್ಲ.




