ಉಗ್ರರಿಂದ ವಶಕ್ಕೆ ಪಡೆದಿದ್ದ ಸ್ಫೋಟಕಗಳು ಆಕಸ್ಮಿಕವಾಗಿ ಸ್ಫೋಟಗೊಂಡು ಒಂಬತ್ತು ಮಂದಿ ಸಾವನ್ನಪ್ಪಿದ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಬಳಿಯ ನೌಗಮ್‌ನಲ್ಲಿರುವ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಘಟನೆಯಲ್ಲಿ ಸುಮಾರು 39 ಮಂದಿ ಗಾಯಗೊಂಡಿದ್ದಾರೆ.
ಮೃತರಲ್ಲಿ ಹೆಚ್ಚಿನವರು ಸ್ಫೋಟಕಗಳನ್ನು ಪರಿಶೀಲಿಸುತ್ತಿದ್ದ ಪೊಲೀಸರು ಮತ್ತು ವಿಧಿವಿಜ್ಞಾನ ತಂಡದ ಅಧಿಕಾರಿಗಳಾಗಿದ್ದಾರೆ. ಶ್ರೀನಗರ ಆಡಳಿತದ ಇಬ್ಬರು ಅಧಿಕಾರಿಗಳು ಸಹ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಹರಿಯಾಣದ ಫರಿದಾಬಾದ್‌ನಿಂದ ತರಲಾಗಿದ್ದ ಸ್ಫೋಟಕಗಳ ಪರಿಶೀಲನೆ ನಡೆಸುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ | ನೆಲಬಾಂಬ್ ಸ್ಫೋಟ: ಅಗ್ನಿವೀರ ಹುತಾತ್ಮ
ಗಾಯಾಳುಗಳನ್ನು ಭಾರತೀಯ ಸೇನೆಯ 92 ಬೇಸ್ ಆಸ್ಪತ್ರೆ ಮತ್ತು ಶೇರ್-ಇ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆ (SKIMS)ಗೆ ಸಾಗಿಸಲಾಗಿದೆ. ಸದ್ಯ ಹಿರಿಯ ಪೊಲೀಸ್ ಅಧಿಕಾರಿಗಳು ನೌಗಮ್ ತಲುಪಿದ್ದಾರೆ.
ಇನ್ನು ಪ್ರದೇಶದ ವಿವಿಧ ಸ್ಥಳಗಳಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಪೋಸ್ಟರ್‌ಗಳನ್ನು ಹಾಕಲಾಗುತ್ತಿದ್ದ ಪ್ರಕರಣವನ್ನು ಭೇದಿಸಿದ್ದು ನೌಗಮ್ ಪೊಲೀಸ್ ಠಾಣೆಯೇ ಆಗಿದೆ. ಉನ್ನತ ಹುದ್ದೆಗಳಲ್ಲಿ ಇರುವವರು, ವೃತ್ತಿಪರರು ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿರುವುದನ್ನು ಈ ಪೊಲೀಸ್ ಠಾಣೆಯ ಪೊಲೀಸರು ಭೇದಿಸಿದ್ದರು. ಹಾಗೆಯೇ ಬೃಹತ್ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ವೈದ್ಯರಾಗಿದ್ದ ಹಲವು ಭಯೋತ್ಪಾದಕರನ್ನು ಬಂಧಿಸಲಾಗಿತ್ತು.





